ಉಡುಪಿಯಲ್ಲಿ ಡಿ.28ರಿಂದ 30ರವರೆಗೆ ಮೂರು ದಿನಗಳ ಕಾಲ ಶ್ರೀ ಶಂಕರ ವಿಜಯೋತ್ಸವ

Spread the love

ಉಡುಪಿಯಲ್ಲಿ ಡಿ.28ರಿಂದ ಮೂರು ದಿನಗಳ ಕಾಲ ಶ್ರೀ ಶಂಕರ ವಿಜಯೋತ್ಸವ

₹2.85 ಕೋಟಿ ವೆಚ್ಚದಲ್ಲಿ ಅದ್ಧೂರಿ ಆಚರಣೆ; ಒಂದು ಲಕ್ಷಕ್ಕೂ ಅಧಿಕ ಭಕ್ತರ ಸೇರುವ ನಿರೀಕ್ಷೆ

ಶಂಕರಾಚಾರ್ಯರಿಂದ ದೇಶಾದ್ಯಂತ ಧರ್ಮಜಾಗೃತಿ- ವಾಗೀಶ್ ಶಾಸ್ತ್ರಿ

ಉಡುಪಿ: ಆದಿ ಶಂಕರಾಚಾರ್ಯರು ವೈದಿಕ ಸನಾತನ ಧರ್ಮದ ಉಳಿವು ಮತ್ತು ಬೆಳವಣಿಗೆಗೆ ಅಪಾರ ಕೊಡುಗೆ ನೀಡುವುದರ ಜತೆಗೆ, ಧಾರ್ಮಿಕ ಗೊಂದಲಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಸಮಾಜಕ್ಕೆ ದಾರಿದೀಪವಾದವರು. ಅವರ ತತ್ವಾದರ್ಶಗಳನ್ನು ಸ್ಮರಿಸುವ ಹಾಗೂ ಹಿಂದೂ ಸಮಾಜದಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವ ಉದ್ದೇಶದಿಂದ ಡಿಸೆಂಬರ್ 28ರಿಂದ 30ರವರೆಗೆ ಉಡುಪಿಯಲ್ಲಿ ಮೂರು ದಿನಗಳ ಕಾಲ ‘ಶ್ರೀ ಶಂಕರ ವಿಜಯೋತ್ಸವ–2026’ ಆಯೋಜಿಸಲಾಗಿದೆ.

ಶೃಂಗೇರಿ ಶ್ರೀಗಳ ಆಶಯದಂತೆ ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಹಾಗೂ ಕಾರವಾರ ಜಿಲ್ಲೆಗಳ ಶಿಷ್ಯ ಸಮುದಾಯಗಳನ್ನು ಒಗ್ಗೂಡಿಸಿ ಉಡುಪಿಯ ಎಂಜಿಎಂ ಮೈದಾನದಲ್ಲಿ ಈ ಉತ್ಸವ ನಡೆಯಲಿದೆ. ಈ ಸಂಬಂಧ ಕುಂಜಿಬೆಟ್ಟಿನ ಶ್ರೀ ಶಾರದಾ ಮಂಟಪದಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆ ಹಾಗೂ ಶ್ರೀ ಶಂಕರ ವಿಜಯ ಆರಂಭೋತ್ಸವವನ್ನು ಉದ್ಘಾಟಿಸಿ ಶೃಂಗೇರಿ ಪೀಠದ ಉಡುಪಿ ಪ್ರಾಂತ್ಯದ ಧರ್ಮಾಧಿಕಾರಿ ಬ್ರಹ್ಮಶ್ರೀ ವಾಗೀಶ್ ಶಾಸ್ತ್ರಿ ಮಾತನಾಡಿದರು.

ಶಂಕರಾಚಾರ್ಯರು ದೇಶಾದ್ಯಂತ ಧರ್ಮಜಾಗೃತಿ ಮತ್ತು ಧರ್ಮಪ್ರಸಾರದ ಕಾರ್ಯ ನಡೆಸಿದ್ದರು. ಉಡುಪಿ ಕ್ಷೇತ್ರದ ಹಸ್ತಾಮಲಕ ಎಂಬ ಶಿಷ್ಯನನ್ನು ಪುರಿ ವಿಶ್ವನಾಥ ಕ್ಷೇತ್ರಕ್ಕೆ ಕರೆದೊಯ್ದ ಐತಿಹಾಸಿಕ ಹಿನ್ನೆಲೆಯೂ ಈ ಕ್ಷೇತ್ರದೊಂದಿಗಿದೆ. ಈ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಉಡುಪಿಯಲ್ಲಿ ಶ್ರೀ ಶಂಕರ ವಿಜಯೋತ್ಸವ ಆಯೋಜಿಸಲು ಶೃಂಗೇರಿ ಶ್ರೀಗಳು ನಿರ್ಧರಿಸಿದ್ದಾರೆ ಎಂದು ತಿಳಿಸಿದರು.

ಉತ್ಸವದ ವಿಜ್ಞಾಪನ ಪತ್ರ ಬಿಡುಗಡೆಗೊಳಿಸಿದ ಗೌರವ ಸಲಹೆಗಾರ, ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಹಿಂದೂ ಸಮಾಜದ ಪ್ರತಿಯೊಬ್ಬರಲ್ಲಿಯೂ ಇದು ನಮ್ಮ ಉತ್ಸವ ಎಂಬ ಆತ್ಮೀಯ ಭಾವನೆ ಮೂಡಬೇಕು. ಮುಂದಿನ ಪೀಳಿಗೆಗೆ ಹಿಂದೂ ಸಮಾಜದ ಸಂಸ್ಕೃತಿ, ಸಂಪ್ರದಾಯ ಹಾಗೂ ಮೌಲ್ಯಗಳನ್ನು ಪರಿಚಯಿಸುವ ಮೂಲಕ ಸಂಘಟಿತ ಸಮಾಜ ನಿರ್ಮಾಣಕ್ಕೆ ಈ ಉತ್ಸವ ಪೂರಕವಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಸಮಿತಿ ಅಧ್ಯಕ್ಷ, ಶಾಸಕ ಯಶಪಾಲ್ ಎ. ಸುವರ್ಣ ಮಾತನಾಡಿ, ಶಾರದಾ ಮಾತೆಯ ಕೃಪೆಯಿಂದ ಉಡುಪಿ ಜಿಲ್ಲೆ ಪ್ರತಿವರ್ಷ ಎಸ್ಸೆಸ್ಸೆಲ್ಸಿ ಅಥವಾ ಪಿಯುಸಿ ಪರೀಕ್ಷೆಗಳಲ್ಲಿ ಪ್ರಥಮ ಸ್ಥಾನ ಗಳಿಸುತ್ತಿದೆ. ಉಡುಪಿಯಲ್ಲಿ ನಡೆಯಲಿರುವ ಶ್ರೀ ಶಂಕರ ವಿಜಯೋತ್ಸವವನ್ನು ಯಶಸ್ವಿಗೊಳಿಸುವುದು ಎಲ್ಲರ ಕರ್ತವ್ಯವಾಗಿದ್ದು, ಕಾರ್ಯಕ್ರಮಕ್ಕೆ ಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

2.85 ಕೋಟಿ ವೆಚ್ಚ, ಲಕ್ಷಕ್ಕೂ ಅಧಿಕ ಭಕ್ತರ ನಿರೀಕ್ಷೆ:
ಕಾರ್ಯಾಧ್ಯಕ್ಷ ಮಹೇಶ್ ಠಾಕೂರ್ ಪರ್ಕಳ ಸ್ವಾಗತಿಸಿ, ಪ್ರಸ್ತಾವನೆಗೈದು ಮಾತನಾಡಿ, ಶೃಂಗೇರಿ ಮಠಕ್ಕೆ ಸಮಾಜದ ಒಟ್ಟು 52 ಶಿಷ್ಯ ಸಮುದಾಯಗಳಿವೆ. ಉತ್ಸವಕ್ಕೆ ಅಂದಾಜು ₹2.85 ಕೋಟಿ ವೆಚ್ಚ ನಿರೀಕ್ಷಿಸಲಾಗಿದೆ. ಒಂದು ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆಯಿದ್ದು, ಸುಮಾರು 60 ಸಾವಿರ ಜನರಿಗೆ ಊಟೋಪಹಾರದ ವ್ಯವಸ್ಥೆ ಮಾಡಲಾಗುವುದು. ವೈಭವದ ಪುರಮೆರವಣಿಗೆಯಲ್ಲಿ ಐದು ಸಾವಿರ ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಡಿ.29ರಂದು ಮಹಿಳೆಯರಿಂದ ಸ್ತೋತ್ರ ಹಾಗೂ ಭಜನೆ ಸಮರ್ಪಣೆ ನಡೆಯಲಿದೆ. ನಾಲ್ಕು ದಿಕ್ಕುಗಳಿಂದ ನಾಲ್ಕು ವಿಜಯರಥಗಳು ಆಗಮಿಸಲಿದ್ದು, ಭಜನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಡಿ.30ರಂದು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸಮಾಜಮುಖಿ ಸೇವೆಯ ಅಂಗವಾಗಿ 10 ಮಂದಿ ಕಡುಬಡವರಿಗೆ ರಿಕ್ಷಾ ಹಾಗೂ ಮಹಿಳೆಯರ ಸ್ವಾವಲಂಬನೆಗಾಗಿ 100 ಹೊಲಿಗೆ ಯಂತ್ರಗಳನ್ನು ವಿತರಿಸಲಾಗುವುದು. ಆರೋಗ್ಯ ಶಿಬಿರವನ್ನೂ ಆಯೋಜಿಸಲಾಗಿದ್ದು, ಈ ಸೇವಾ ಕಾರ್ಯಗಳನ್ನು ಮುಂದಿನ ದಿನಗಳಲ್ಲಿಯೂ ನಿರಂತರವಾಗಿ ಮುಂದುವರಿಸುವ ಉದ್ದೇಶವಿದೆ ಎಂದರು.

ಮನೆಮನೆಗಳಲ್ಲಿ ಶ್ರೀ ಶಂಕರ ವಿಜಯೋತ್ಸವದ ಪೋಸ್ಟರ್ ಬಿಡುಗಡೆಗೊಳಿಸಿದ ಶೃಂಗೇರಿ ಶ್ರೀ ಭಾರತೀತೀರ್ಥ ಶ್ರೀಗಳ ಆಪ್ತ ಸಹಾಯಕ ಬ್ರಹ್ಮಶ್ರೀ ಎಸ್.ಎನ್. ಕೃಷ್ಣಮೂರ್ತಿ ಮಾತನಾಡಿ, ಹಿಂದೂ ಸಂಸ್ಕೃತಿಗೆ ಉತ್ತೇಜನ ನೀಡುವುದರ ಜತೆಗೆ ಆದಿ ಶಂಕರಾಚಾರ್ಯರ ಮಹತ್ಕಾರ್ಯ ಹಾಗೂ ತತ್ವಾದರ್ಶಗಳನ್ನು ಮತ್ತೊಮ್ಮೆ ಜಗತ್ತಿಗೆ ಪರಿಚಯಿಸುವುದು ಉತ್ಸವದ ಉದ್ದೇಶವಾಗಿದೆ. ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ, ಸಂಸ್ಕಾರ ಮತ್ತು ಧಾರ್ಮಿಕ ಪ್ರಜ್ಞೆ ಜಾಗೃತಗೊಳಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿವೆ ಎಂದರು.

ಕುಂದಾಪುರ ಮತ್ತು ಮಂಗಳೂರು ಪ್ರಾಂತ್ಯದ ಧರ್ಮಾಧಿಕಾರಿಗಳಾದ ಲೋಕೇಶ್ ಅಡಿಗ, ಸತ್ಯಶಂಕರ ಬೊಳ್ಳಾವ, ರಾಜ್ಯ ಶಾಂಕರ ತತ್ತ್ವ ಪ್ರಸಾರ ಸಮಿತಿ ಅಧ್ಯಕ್ಷ ತೇಜಶಂಕರ ಸೋಮಯಾಜಿ, ಪ್ರಮುಖರಾದ ರಮೇಶ್ ಕಾಂಚನ್, ಭಜನ ಸಮಿತಿ ಸಂಚಾಲಕಿ ಡಾ. ವಿದ್ಯಾ ಎಸ್. ರಾವ್ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು ಉಪಸ್ಥಿತರಿದ್ದರು.

ಸಂಘಟನೆಯ ಸ್ವರೂಪದ ಕುರಿತು ಸಮಿತಿ ಕಾರ್ಯದರ್ಶಿ ಉಮೇಶ್ ನಾಯ್ಕ್ ವಿವರಿಸಿದರು. ಆರ್ಥಿಕ ಸಮಿತಿ ಅಧ್ಯಕ್ಷ ಗಣೇಶ್ ಹೆಬ್ಬಾರ್ ಸಮಿತಿ ಸದಸ್ಯರ ಪಟ್ಟಿಯನ್ನು ವಾಚಿಸಿದರು. ರತ್ನಾಕರ ಇಂದ್ರಾಳಿ ನಿರೂಪಿಸಿ, ವಿಶ್ವನಾಥ ಶಾನುಭಾಗ್ ವಂದಿಸಿದರು.


Spread the love
Subscribe
Notify of

0 Comments