ಉಡುಪಿ ಜಿಲ್ಲಾ ಮಟ್ಟದ ವಾಲಿಬಾಲ್ ಚಾಂಪಿಯನ್ ಶಿಪ್ ಗೆ ಚಾಲನೆ
ಉಡುಪಿ: ವಾಲಿಬಾಲ್ ಪ್ರತಿಭೆಗಳಿಗೆ ಸೂಕ್ತ ಅವಕಾಶ ನೀಡುವ ಕೆಲಸ ಉಡುಪಿ ಜಿಲ್ಲೆಯಲ್ಲಿ ನಡೆದು ಇಲ್ಲಿನ ಪ್ರತಿಭೆಗಳು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತಾಗಬೇಕು ಎಂದು ನಾಡೋಜ ಡಾ. ಜಿ ಶಂಕರ್ ಹೇಳಿದರು.

ಅವರು ಶನಿವಾರ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಉಡುಪಿ ಜಿಲ್ಲಾ ವಾಲಿಬಾಲ್ ಅಸೋಶೀಯೇಶನ್ ವತಿಯಿಂದ ಆಯೋಜಿಸಿದ್ದ 18 ವರ್ಷಕ್ಕಿಂತ ಕೆಳಗಿನವರ ಉಡುಪಿ ಜಿಲ್ಲಾ ಮಟ್ಟದ ವಾಲಿಬಾಲ್ ಚಾಂಪಿಯನ್ ಶಿಪ್ ಗೆ ಚಾಲನೆ ನೀಡಿ ಮಾತನಾಡಿದರು.
ಉಡುಪಿ – ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಕ್ರೀಡೆಯಲ್ಲಿ ಪರಿಣಿತ ಹೊಂದಿದ ಕ್ರೀಡಾಪಟುಗಳು ಶಿಕ್ಷಣ ಮತ್ತು ಜೀವನದಲ್ಲಿ ಕೂಡ ಪರಿಣಿತಿ ಪಡೆಯುತ್ತಾರೆ. ಜಿಲ್ಲಾ ಮಟ್ಟದ ಕ್ರೀಡಾಕೂಟದಿಂದ ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಉಡುಪಿ ಜಿಲ್ಲೆಯ ತಂಡದ ಕ್ರೀಡಾಪಟುಗಳು ಹೆಸರು ತರುವಂತಾಗಲಿ ಎಂದು ಶುಭ ಹಾರೈಸಿದರು.

ಕಾರ್ಕಳ ಶಾಸಕ ಸುನೀಲ್ ಕುಮಾರ್ ಮಾತನಾಡಿ ಕ್ರೀಡಾ ಚಟುವಟಿಕೆಗಳನ್ನು ಹೆಚ್ಚು ಹೆಚ್ಚು ಆಯೋಜಿಸಿದಾಗ ಕ್ರೀಡಾ ಪ್ರತಿಭೆಗಳಿಗೆ ಅವಕಾಶ ಲಭಿಸಿದಂತಾಗುತ್ತದೆ. ಹೆಚ್ಚು ಹೆಚ್ಚು ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸುವುದರಿಂದ ಹೊಸ ಪ್ರತಿಭೆಗಳಿಗೆ ವೇದಿಕೆ ಲಭಿಸಿದಂತಾಗುತ್ತದೆ ಎಂದರು.
ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ ಜಿಲ್ಲೆಯಲ್ಲಿನ ಗ್ರಾಮೀಣ ಮಟ್ಟದ ವಾಲಿಬಾಲ್ ಪ್ರತಿಭೆಗಳನ್ನು ಗುರುತಿಸಿ ಸೂಕ್ತ ತರಬೇತಿ ನೀಡುವ ಕುರಿತು ಮುಂದಿನ ದಿನಗಳಲ್ಲಿ ಚಿಂತನೆ ನಡೆಸಲಾಗುತ್ತಿದೆ. ಮುಂದಿನ ವರ್ಷ ರಾಷ್ಟ್ರ ಮಟ್ಟದ ಯೂತ್ ನ್ಯಾಷನಲ್ ವಾಲಿಬಾಲ್ ಪಂದ್ಯಾಟವನ್ನು ಹಾಗೂ ಡಿಸೆಂಬರ್ ನಲ್ಲಿ ಬೀಚ್ ವಾಲಿಬಾಲ್ ಪಂದ್ಯಾಟವನ್ನು ಕೂಡ ಉಡುಪಿಯಲ್ಲಿ ಆಯೋಜಿಸಲು ಸಿದ್ದತೆಗಳನ್ನು ನಡೆಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ವಾಲಿಬಾಲ್ ತರಬೇತುದಾರ ಸಂತೋಷ್ ಡಿಸೋಜಾ, ಅಂತರಾಷ್ಟ್ರೀಯ ವಾಲಿಬಾಲ್ ಕ್ರೀಡಾಪಟು ನೈಜಾ ಆರ್ ಹೆಗ್ಡೆ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ವಾಲಿಬಾಲ್ ಅಸೋಶೀಯೇಶನ್ ಯಶವಂತ್ ಸುವರ್ಣ ವಹಿಸಿದ್ದರು.
ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಅಪರ ಜಿಲ್ಲಾಧಿಕಾರಿ ಅಬಿದ್ ಗದ್ಯಾಳ್, ಉದ್ಯಮಿಗಳಾದ ಕಿದಿಯೂರು ಉದಯ್ ಕುಮಾರ್ ಶೆಟ್ಟಿ, ಆನಂದ್ ಸುವರ್ಣ, ಸಂಜೀವ ಶೆಟ್ಟಿ, ಚಂದ್ರಶೇಖರ್ ಹೆಗ್ಡೆ, ಶುಭಲಕ್ಷ್ಮಿ, ಅವಿನಾಶ್ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.












