ಉಡುಪಿ: ಅ.9ರಂದು ಕುಂತಳನಗರದಲ್ಲಿ ಬೃಹತ್ ಉದ್ಯೋಗ ಮೇಳ, ಸ್ಟಡಿ ಅಬ್ರಾಡ್ ಎಕ್ಸ್ಪೋ; 2,500 ಉದ್ಯೋಗಾವಕಾಶಗಳ ನಿರೀಕ್ಷೆ

Spread the love

ಉಡುಪಿ: ಅ.9ರಂದು ಕುಂತಳನಗರದಲ್ಲಿ ಬೃಹತ್ ಉದ್ಯೋಗ ಮೇಳ, ಸ್ಟಡಿ ಅಬ್ರಾಡ್ ಎಕ್ಸ್ಪೋ; 2,500 ಉದ್ಯೋಗಾವಕಾಶಗಳ ನಿರೀಕ್ಷೆ

ಉಡುಪಿ: ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ನ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ವತಿಯಿಂದ ನಿಟ್ಟೆಯ ಎನ್ಎಂಎಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಹಯೋಗ ಹಾಗೂ ಎಂ.ಆರ್.ಜಿ. ಗ್ರೂಪ್ನ ಪ್ರಾಯೋಜಕತ್ವದಲ್ಲಿ ಐದನೇ ಬೃಹತ್ ಉದ್ಯೋಗ ಮೇಳ ಮತ್ತು ಸ್ಟಡಿ ಅಬ್ರಾಡ್ ಎಕ್ಸ್ಪೋ–2026 ಅಕ್ಟೋಬರ್ 9ರಂದು ಶುಕ್ರವಾರ ನಡೆಯಲಿದೆ. ಕುಂತಳನಗರದ ಆಶಾ ಪ್ರಕಾಶ್ ಶೆಟ್ಟಿ ಕನ್ವೆನ್ಷನ್ ಸೆಂಟರ್ ಹಾಗೂ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ಆವರಣದಲ್ಲಿ ಮೇಳ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ತಿಳಿಸಿದರು.

ಉಡುಪಿ ಪ್ರೆಸ್ ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ, ದಕ್ಷಿಣ ಕನ್ನಡ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಯುವಜನರಿಗೆ ಅವರ ವಿದ್ಯಾರ್ಹತೆ ಮತ್ತು ಕೌಶಲ್ಯಗಳಿಗೆ ತಕ್ಕ ಉದ್ಯೋಗಾವಕಾಶಗಳನ್ನು ಪರಿಚಯಿಸುವುದು ಮೇಳದ ಉದ್ದೇಶವಾಗಿದೆ. ಉದ್ಯೋಗದಾತರು ಮತ್ತು ಉದ್ಯೋಗಾಕಾಂಕ್ಷಿಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ, ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೂ ಪ್ರಮುಖ ಕಂಪನಿಗಳ ಪ್ರತಿನಿಧಿಗಳನ್ನು ನೇರವಾಗಿ ಭೇಟಿಯಾಗಿ ಸಂದರ್ಶನದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದರು.

ಬೆಳಿಗ್ಗೆ 9 ಗಂಟೆಗೆ ಅಭ್ಯರ್ಥಿಗಳ ನೋಂದಣಿ ಹಾಗೂ ಸಂದರ್ಶನ ಪ್ರಕ್ರಿಯೆ ಆರಂಭವಾಗಲಿದ್ದು, ಸಂಜೆ 5 ಗಂಟೆಯವರೆಗೆ ಮೇಳ ನಡೆಯಲಿದೆ. ಅಭ್ಯರ್ಥಿಗಳು ಸಮಯಕ್ಕೆ ಸರಿಯಾಗಿ ಆಗಮಿಸಿ, ತಮ್ಮ ವಿದ್ಯಾರ್ಹತೆ ಮತ್ತು ಆಸಕ್ತಿಗೆ ಹೊಂದುವ ಕಂಪನಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಬೃಹತ್ ಉದ್ಯೋಗ ಮೇಳವನ್ನು ಎಂ.ಆರ್.ಜಿ. ಗ್ರೂಪ್ ಅಧ್ಯಕ್ಷ ಡಾ. ಕೆ. ಪ್ರಕಾಶ್ ಶೆಟ್ಟಿ ಹಾಗೂ ಸ್ಟಡಿ ಅಬ್ರಾಡ್ ಎಕ್ಸ್ಪೋವನ್ನು ನಿಟ್ಟೆ ವಿಶ್ವವಿದ್ಯಾಲಯದ ಚಾನ್ಸೆಲರ್ ಎನ್. ವಿಶಾಲ್ ಹೆಗ್ಡೆ ಉದ್ಘಾಟಿಸಲಿದ್ದಾರೆ. ‘ಕೌಶಲ್ಯ ಸ್ಕಿಲ್ಸ್–2026’ ಬುಲೆಟಿನ್ನ್ನು ಮಾಹೆಯ ಪ್ರೊ ಚಾನ್ಸೆಲರ್ ಡಾ. ಎಚ್.ಎಸ್. ಬಲ್ಲಾಳ್ ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲೆಯ ಲೋಕಸಭಾ ಸದಸ್ಯರು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ರಾಜಕೀಯ ಹಾಗೂ ಸಾಮಾಜಿಕ ಮುಖಂಡರು, ಉದ್ಯಮಿಗಳು ಮತ್ತು ವಿವಿಧ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ಹಾಗೂ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮ ನಡೆಯಲಿದೆ ಎಂದರು.

ನಿಟ್ಟೆಯ ಎನ್ಎಂಎಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿ ಕಲ್ಯಾಣ, ತರಬೇತಿ ಮತ್ತು ಉದ್ಯೋಗ ನಿಯೋಜನೆ ವಿಭಾಗದ ಮುಖ್ಯಸ್ಥ ಭರತ್ ಕುಮಾರ್ ಜಿ. ಮಾತನಾಡಿ, ಮೇಳದಲ್ಲಿ ಭಾಗವಹಿಸಲು ಸುಮಾರು 50 ಕಂಪನಿಗಳು ಈಗಾಗಲೇ ನೋಂದಣಿ ಮಾಡಿಕೊಂಡಿದ್ದು, ಅವುಗಳಲ್ಲಿ 10ಕ್ಕೂ ಹೆಚ್ಚು ಕಾರ್ಪೊರೇಟ್ ಕಂಪನಿಗಳು ಸೇರಿವೆ. ಸುಮಾರು 2,500 ಉದ್ಯೋಗಾವಕಾಶಗಳು ಲಭ್ಯವಾಗುವ ನಿರೀಕ್ಷೆಯಿದ್ದು, 3,000ಕ್ಕೂ ಹೆಚ್ಚು ಅಭ್ಯರ್ಥಿಗಳು ಪಾಲ್ಗೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಿದರು.

ಉತ್ಪಾದನೆ, ಮಾಹಿತಿ ತಂತ್ರಜ್ಞಾನ, ಸೇವಾ ವಲಯ, ಆಡಳಿತ ಮತ್ತು ನಿರ್ವಹಣೆ, ಸೌಲಭ್ಯ ನಿರ್ವಹಣೆ, ಮಾರಾಟ ಮತ್ತು ಮಾರುಕಟ್ಟೆ, ಲೆಕ್ಕಪತ್ರ ಮತ್ತು ಹಣಕಾಸು, ನವೀಕರಿಸಬಹುದಾದ ಇಂಧನ, ವಾಹನೋದ್ಯಮ ಹಾಗೂ ಚಿಲ್ಲರೆ ವ್ಯಾಪಾರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅವಕಾಶಗಳು ಇರಲಿವೆ. ಎಂಜಿನಿಯರಿಂಗ್ ಮತ್ತು ತಾಂತ್ರಿಕ ಹುದ್ದೆಗಳ ಜೊತೆಗೆ ಫಿಟ್ಟರ್, ತಂತ್ರಜ್ಞ ಹಾಗೂ ವಿವಿಧ ಕೌಶಲ್ಯಾಧಾರಿತ ಹುದ್ದೆಗಳಿಗೂ ನೇಮಕಾತಿ ನಡೆಯಲಿದೆ ಎಂದರು.

ಎಂಜಿನಿಯರಿಂಗ್ನ ಎಲ್ಲ ವಿಭಾಗಗಳ ಪದವೀಧರರು, ಡಿಪ್ಲೊಮಾ, ಐಟಿಐ, ಯಾವುದೇ ವಿಷಯದ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದವರು, ಎಂಬಿಎ, ಪಿಯುಸಿ ಮತ್ತು ಎಸ್ಎಸ್ಎಲ್ಸಿ ವಿದ್ಯಾರ್ಹತೆ ಹೊಂದಿರುವ ಉದ್ಯೋಗಾಕಾಂಕ್ಷಿಗಳು ಮೇಳದಲ್ಲಿ ಭಾಗವಹಿಸಬಹುದು. ಅಂತಿಮ ವರ್ಷದ ವಿದ್ಯಾರ್ಥಿಗಳಿಗೂ ಉದ್ಯೋಗಾವಕಾಶಗಳು ಮತ್ತು ಕಂಪನಿಗಳ ನೇಮಕಾತಿ ಅಗತ್ಯಗಳ ಕುರಿತು ತಿಳಿದುಕೊಳ್ಳಲು ಅವಕಾಶವಿದೆ ಎಂದು ಹೇಳಿದರು.

ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ದಾಖಲೆಗಳು ಹಾಗೂ ಬಯೋಡೇಟಾದ ಸುಮಾರು 10 ಪ್ರತಿಗಳನ್ನು ತರಬೇಕು. ಬಯೋಡೇಟಾದಲ್ಲಿ ವಿದ್ಯಾರ್ಹತೆ, ಕೌಶಲ್ಯ ಮತ್ತು ಅನುಭವದ ವಿವರಗಳನ್ನು ಸ್ಪಷ್ಟವಾಗಿ ನಮೂದಿಸಬೇಕು. ಸ್ಥಳದಲ್ಲೇ ನೋಂದಣಿಗೆ ಅವಕಾಶವಿದ್ದು, ನಿಟ್ಟೆ ಎಂಜಿನಿಯರಿಂಗ್ ಕಾಲೇಜಿನ ತಂಡ ನೋಂದಣಿ ಹಾಗೂ ಸಂದರ್ಶನ ಪ್ರಕ್ರಿಯೆಯ ಸಮನ್ವಯದಲ್ಲಿ ಸಹಕರಿಸಲಿದೆ ಎಂದು ತಿಳಿಸಿದರು.

ಅಭ್ಯರ್ಥಿಗಳು ವಿಷಯಜ್ಞಾನ, ತಾಂತ್ರಿಕ ಕೌಶಲ್ಯ ಹಾಗೂ ಸಂವಹನ ಸಾಮರ್ಥ್ಯದ ಕುರಿತು ಪೂರ್ವಸಿದ್ಧತೆ ಮಾಡಿಕೊಂಡು ಬರಬೇಕು. ಕಂಪನಿಗಳ ಅಗತ್ಯ ಮತ್ತು ಆಯ್ಕೆ ಮಾನದಂಡಗಳಿಗೆ ಅನುಗುಣವಾಗಿ ಸಂದರ್ಶನ ಹಾಗೂ ಮುಂದಿನ ಹಂತದ ನೇಮಕಾತಿ ಪ್ರಕ್ರಿಯೆಗಳು ನಡೆಯಲಿವೆ ಎಂದರು.

ಉದ್ಯೋಗ ಮೇಳದೊಂದಿಗೆ ನಡೆಯುವ ಸ್ಟಡಿ ಅಬ್ರಾಡ್ ಎಕ್ಸ್ಪೋದಲ್ಲಿ ವಿದೇಶಿ ಉನ್ನತ ಶಿಕ್ಷಣದ ಕುರಿತು ಮಾರ್ಗದರ್ಶನ ದೊರೆಯಲಿದೆ. ವಿಶ್ವವಿದ್ಯಾಲಯಗಳು ಹಾಗೂ ಶಿಕ್ಷಣ ಸಲಹೆಗಾರರ ಪ್ರತಿನಿಧಿಗಳಿಂದ ವಿವಿಧ ದೇಶಗಳ ಶಿಕ್ಷಣಾವಕಾಶಗಳು, ಕೋರ್ಸ್ಗಳ ಆಯ್ಕೆ, ಪ್ರವೇಶ ಪ್ರಕ್ರಿಯೆ, ಅಗತ್ಯ ಅರ್ಹತೆಗಳು, ಭಾಷಾ ಅರ್ಹತಾ ಪರೀಕ್ಷೆಗಳು, ಶಿಕ್ಷಣ ಸಾಲ ಮತ್ತು ವೀಸಾ ಪ್ರಕ್ರಿಯೆಯ ಕುರಿತು ಮಾಹಿತಿ ಪಡೆಯಬಹುದು. ಅಂತಿಮ ವರ್ಷದ ವಿದ್ಯಾರ್ಥಿಗಳು, ಪದವೀಧರರು ಹಾಗೂ ವಿದೇಶಿ ಉನ್ನತ ಶಿಕ್ಷಣದ ಆಸಕ್ತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಭರತ್ ಕುಮಾರ್ ಜಿ. ಮನವಿ ಮಾಡಿದರು.

ಟ್ರಸ್ಟ್ ಇದುವರೆಗೆ ಆಯೋಜಿಸಿರುವ ನಾಲ್ಕು ಬೃಹತ್ ಉದ್ಯೋಗ ಮೇಳಗಳ ಮೂಲಕ ಸುಮಾರು 3,500 ಅಭ್ಯರ್ಥಿಗಳು ಉದ್ಯೋಗಕ್ಕೆ ಆಯ್ಕೆಯಾಗಲು ಅಥವಾ ಮುಂದಿನ ಹಂತದ ನೇಮಕಾತಿ ಪ್ರಕ್ರಿಯೆಗೆ ಶಿಫಾರಸು ಪಡೆಯಲು ನೆರವಾಗಿದೆ ಎಂದು ಅಶೋಕ್ ಕುಮಾರ್ ಶೆಟ್ಟಿ ತಿಳಿಸಿದರು.

ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ಮೂಲಕ ಎಂಜಿನಿಯರಿಂಗ್, ಡಿಪ್ಲೊಮಾ, ಐಟಿಐ, ಎಂಬಿಎ ಹಾಗೂ ಪದವಿ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 1,800 ಮಂದಿಗೆ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಸುಮಾರು 440 ಮಂದಿಗೆ ಒಂದು ತಿಂಗಳ ಡಿಜಿಟಲ್ ಸಾಕ್ಷರತೆ ಮತ್ತು ಕಂಪ್ಯೂಟರ್ ತರಬೇತಿ ನೀಡಲಾಗಿದೆ. ಮಹಿಳಾ ಸಬಲೀಕರಣ ಹಾಗೂ ಉದ್ಯಮಶೀಲತೆಯನ್ನು ಉತ್ತೇಜಿಸುವ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

‘ಉದ್ಯಮಶೀಲತೆಯ ಮೂಲಕ ಗ್ರಾಮೀಣಾಭಿವೃದ್ಧಿ’ ಎಂಬ ಧ್ಯೇಯದೊಂದಿಗೆ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ನಿಟ್ಟೆ ವಿಶ್ವವಿದ್ಯಾಲಯ, ಮಾಹೆ ಹಾಗೂ ಬಂಟಕಲ್ ಎಂಜಿನಿಯರಿಂಗ್ ಕಾಲೇಜು ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳು ಸಹಕಾರ ನೀಡುತ್ತಿವೆ. ಉದ್ಯೋಗ ಮೇಳದ ಮಾಹಿತಿಯನ್ನು ಹೆಚ್ಚಿನ ಉದ್ಯೋಗಾಕಾಂಕ್ಷಿಗಳಿಗೆ ತಲುಪಿಸಲು ಶಿಕ್ಷಣ ಸಂಸ್ಥೆಗಳು, ಸಂಘಸಂಸ್ಥೆಗಳು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ವಿನಂತಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ ಖಜಾಂಚಿ ವಿಜಿತ್ ಶೆಟ್ಟಿ ಸ್ವಾಗತಿಸಿದರು. ಟ್ರಸ್ಟಿ ಹಾಗೂ ಕಾರ್ಯಕ್ರಮ ಸಂಯೋಜಕ ಪದ್ಮನಾಭ ಹೆಗ್ಡೆ ವಂದಿಸಿದರು.


Spread the love
Subscribe
Notify of

0 Comments