ಉಡುಪಿ |ಎಲ್ ವಿ ಟಿ ದೇವಸ್ಥಾನದ ಕೆರೆಯಲ್ಲಿ ಮುಳುಗಿ ವಿದ್ಯಾರ್ಥಿ ಮೃತ್ಯು

Spread the love

ಉಡುಪಿ |ಎಲ್ ವಿ ಟಿ ದೇವಸ್ಥಾನದ ಕೆರೆಯಲ್ಲಿ ಮುಳುಗಿ ವಿದ್ಯಾರ್ಥಿ ಮೃತ್ಯು

ಉಡುಪಿ: ತೆಂಕಪೇಟೆಯ ಶ್ರೀಲಕ್ಷ್ಮೀವೆಂಕಟರಮಣ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿದ್ಯಾರ್ಥಿಯೊಬ್ಬ ಮೃತಪಟ್ಟ ದಾರುಣ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಬೆಳ್ಳಂಪಳ್ಳಿ ಕುಕ್ಕಿಕಟ್ಟೆ ನಿವಾಸಿ ಕೃಷ್ಣ ನಾಯಕ್ ಅವರ ಪುತ್ರ ಆದಿತ್ಯ ನಾಯಕ್ (15) ಎಂದು ಗುರುತಿಸಲಾಗಿದೆ.

ದೇವಸ್ಥಾನದಲ್ಲಿ ಭಜನಾ ಕಾರ್ಯಕ್ರಮ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಆದಿತ್ಯ ತನ್ನ ಸಂಬಂಧಿಯೊಂದಿಗೆ ದೇವಸ್ಥಾನಕ್ಕೆ ಬಂದಿದ್ದನು. ಈ ವೇಳೆ ಭಕ್ತರು ಕೆರೆಯಲ್ಲಿ ಈಜುತ್ತಿದ್ದುದನ್ನು ಕಂಡು ಆದಿತ್ಯ ಕೂಡ ನೀರಿಗೆ ಇಳಿದಿದ್ದಾನೆ ಎನ್ನಲಾಗಿದೆ. ಕೆರೆಯ ಮಧ್ಯಭಾಗದಲ್ಲಿ ಈಜುತ್ತಿದ್ದಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದನು.

ತಕ್ಷಣ ದೇವಸ್ಥಾನದವರು ಮುಳುಗು ತಜ್ಞ ಈಶ್ವರ ಮಲ್ಪೆ ಅವರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಅವರು ಕೆರೆಗೆ ಇಳಿದು ಹುಡುಕಾಟ ನಡೆಸಿದರು. ಸುಮಾರು ಒಂದು ಗಂಟೆಗಳ ಕಾರ್ಯಾಚರಣೆಯ ಬಳಿಕ ಆದಿತ್ಯನನ್ನು ನೀರಿನಿಂದ ಮೇಲಕ್ಕೆತ್ತಲಾಯಿತು.

ತೀವ್ರ ಅಸ್ವಸ್ಥಗೊಂಡಿದ್ದ ಆತನನ್ನು ಕೂಡಲೇ ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಉಡುಪಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.


Spread the love
Subscribe
Notify of

0 Comments