ಉಡುಪಿ ಉಚ್ಚಿಲ ದಸರಾ –2026: ಶಾರದಾ ಮಾತೆ ವೇಷಭೂಷಣ ಸ್ಪರ್ಧೆಯಲ್ಲಿ ಮಲ್ಪೆಯ ತಪಸ್ಯಾ ನಾಗಪ್ರಸಾದ್ ಪ್ರಥಮ
ಉಚ್ಚಿಲ: ಉಡುಪಿ ಉಚ್ಚಿಲ ದಸರಾ–2026ರ ಅಂಗವಾಗಿ ಶುಕ್ರವಾರ ನಡೆದ ಮಕ್ಕಳ ಶ್ರೀ ಶಾರದಾ ಮಾತೆ ವೇಷಭೂಷಣ ಸ್ಪರ್ಧೆಯಲ್ಲಿ ಮಲ್ಪೆಯ ತಪಸ್ಯಾ ನಾಗಪ್ರಸಾದ್ ಪ್ರಥಮ ಸ್ಥಾನ ಪಡೆದು, ಪ್ರಶಸ್ತಿಯೊಂದಿಗೆ 8 ಸಾವಿರ ರೂ. ನಗದು ಬಹುಮಾನ ಪಡೆದರು.
ಕಿದಿಯೂರಿನ ಸಾನಿಕಾ ದ್ವಿತೀಯ ಸ್ಥಾನ ಪಡೆದು 6 ಸಾವಿರ ರೂ. ಹಾಗೂ ಸುರತ್ಕಲ್ನ ಪ್ರಶ್ನೆ ಎಸ್. ಪುತ್ರನ್ ತೃತೀಯ ಸ್ಥಾನ ಪಡೆದು 4 ಸಾವಿರ ರೂ. ನಗದು ಬಹುಮಾನಕ್ಕೆ ಭಾಜನರಾದರು.

ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ವ್ಯವಸ್ಥಾಪನಾ ಮಂಡಳಿಯ ಆಡಳಿತದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ಪಂಚಮ ವರ್ಷದ ಉಡುಪಿ ಉಚ್ಚಿಲ ದಸರಾ ಸಂಭ್ರಮೋತ್ಸವದ ಅಂಗವಾಗಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ 3ರಿಂದ 9 ವರ್ಷದೊಳಗಿನ 76 ಮಕ್ಕಳು ಶಾರದಾ ಮಾತೆಯ ವೇಷ ಧರಿಸಿ ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸಿದರು. ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ಸ್ಪರ್ಧೆಯಲ್ಲಿ ಮಕ್ಕಳ ಆಕರ್ಷಕ ವೇಷಭೂಷಣ ಪ್ರೇಕ್ಷಕರ ಮನಗೆದ್ದಿತು. ದಸರಾ ಸಂದರ್ಭದಲ್ಲಿ ಮಲ್ಲಿಗೆ ಹೂವಿನ ಬೆಲೆ ಹೆಚ್ಚಿದ್ದರೂ, ಪೋಷಕರು ಮಕ್ಕಳಿಗೆ ಮಲ್ಲಿಗೆ ಮುಡಿಸಿ, ಸುಂದರವಾಗಿ ಅಲಂಕರಿಸಿ ಪ್ರೋತ್ಸಾಹಿಸಿದ್ದು ಮೆಚ್ಚುಗೆಗೆ ಪಾತ್ರವಾಯಿತು. ಭಾಗವಹಿಸಿದ ಎಲ್ಲ ಮಕ್ಕಳಿಗೂ ದೇವಸ್ಥಾನದ ವತಿಯಿಂದ ತಲಾ 1 ಸಾವಿರ ರೂ. ನೀಡಿ ಪುರಸ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಸುಗುಣಾ ಕರ್ಕೇರ, ಯುವರಾಜ್ ಕಿದಿಯೂರು, ದಸರಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸತೀಶ್ ಕುಂದರ್, ಪದಾಧಿಕಾರಿಗಳಾದ ಯಜೇಶ್ ಕರ್ಕೇರ, ಮಿತ್ರಪಟ್ಟ ಶಂಕರ ಸಾಲ್ಯಾನ್ ಹಾಗೂ ದಿನೇಶ್ ಎರ್ಮಾಳು ಉಪಸ್ಥಿತರಿದ್ದರು. ವಿದುಷಿ ರಷ್ಟಿ ಸರಳಾಯ ಮತ್ತು ವಿದುಷಿ ದೀಪ್ತಿ ಎಸ್. ಜೋಗಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಸುಷ್ಮಾ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು. ಮಹಾಜನ ಸಂಘದ ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು ಸ್ವಾಗತಿಸಿ, ವಂದಿಸಿದರು.
ಅ.17ರ ಕಾರ್ಯಕ್ರಮಗಳು
ದಸರಾ ಸಂಭ್ರಮೋತ್ಸವದ ಏಳನೇ ದಿನವಾದ ಅಕ್ಟೋಬರ್ 17ರಂದು ಶ್ರೀ ಕಾಲರಾತ್ರಿ ದೇವಿಯ ಆರಾಧನೆ ನಡೆಯಲಿದೆ. ಬೆಳಗ್ಗೆ ಉದಯ ಪೂಜೆ, 9ಕ್ಕೆ ನಿತ್ಯ ಚಂಡಿಕಾ ಹೋಮ, ಮಧ್ಯಾಹ್ನ 12ಕ್ಕೆ ನವದುರ್ಗೆಯರಿಗೆ ಮಹಾಮಂಗಳಾರತಿ, 12.30ರಿಂದ ಮಹಾಪೂಜೆ ಹಾಗೂ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.30ರಿಂದ ಪ್ರಸಾದ ವಿತರಣೆ, ರಾತ್ರಿ 7.30ರಿಂದ ನವದುರ್ಗೆಯರಿಗೆ ಮಹಾಪೂಜೆ ಹಾಗೂ 8.30ಕ್ಕೆ ಶ್ರೀ ಚಂಡಿಕಾ ಕಲ್ಪೋಕ್ತ ಪೂಜೆ ನಡೆಯಲಿದೆ.
ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ ವತಿಯಿಂದ ಮೊಗವೀರ ಭವನದಲ್ಲಿ ಬೆಳಗ್ಗೆ 10ರಿಂದ ‘ಉಡುಪಿ ಉಚ್ಚಿಲ ದಸರಾ’ ವಿಷಯದಲ್ಲಿ ಚಿತ್ರಕಲಾ ಸ್ಪರ್ಧೆ ನಡೆಯಲಿದೆ. ಮುಖ್ಯ ವೇದಿಕೆಯಾದ ಶ್ರೀಮತಿ ಶಾಲಿನಿ ಡಾ. ಜಿ. ಶಂಕರ್ ಸಭಾಂಗಣದಲ್ಲಿ ಬೆಳಗ್ಗೆ 9.30ರಿಂದ ಭಜನಾ ಸಂಕೀರ್ತನೆ, ಮಧ್ಯಾಹ್ನ 12ರಿಂದ ಬ್ಯಾಂಕ್ ವತಿಯಿಂದ ಪೊಣ್ಣುಪಿಲಿ ನಲಿಕೆ ಸ್ಪರ್ಧೆ ಆಯೋಜಿಸಲಾಗಿದೆ.
ಸಂಜೆ 5ರಿಂದ ಧಾರ್ಮಿಕ ಪ್ರವಚನ, 5.45ರಿಂದ ಸುಮಂಗಲೆಯರಿಂದ ಸಾಮೂಹಿಕ ಕುಂಕುಮಾರ್ಚನೆ ಹಾಗೂ 6.30ರಿಂದ ‘ಮಿಸ್ಟರ್ ಉಡುಪಿ ಉಚ್ಚಿಲ ದಸರಾ–2026’ ಪ್ರಶಸ್ತಿಗಾಗಿ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ ನಡೆಯಲಿದೆ.












