ಉಡುಪಿ ಉಚ್ಚಿಲ ದಸರಾ: ಕಿನ್ನಿಪಿಲಿ ನಲಿಕೆಯಲ್ಲಿ ಪುಟಾಣಿಗಳ ಹುಲಿವೇಷದ ಸಂಭ್ರಮ

Spread the love

ಉಡುಪಿ ಉಚ್ಚಿಲ ದಸರಾ: ಕಿನ್ನಿಪಿಲಿ ನಲಿಕೆಯಲ್ಲಿ ಪುಟಾಣಿಗಳ ಹುಲಿವೇಷದ ಸಂಭ್ರಮ

ಉಡುಪಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ಉಡುಪಿ ಉಚ್ಚಿಲ ದಸರಾ-2026 ಮಹೋತ್ಸವದ ಏಳನೇ ದಿನವಾದ ಶನಿವಾರ, ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ ವತಿಯಿಂದ ಪುಟಾಣಿಗಳಿಗಾಗಿ ಆಯೋಜಿಸಿದ್ದ ‘ಕಿನ್ನಿಪಿಲಿ ನಲಿಕೆ’ ಸ್ಪರ್ಧೆ ಸಂಭ್ರಮದಿಂದ ನಡೆಯಿತು.

ಉಚ್ಚಿಲ ದಸರಾ ಮುಖ್ಯ ವೇದಿಕೆಯಾದ ಶ್ರೀಮತಿ ಶಾಲಿನಿ ಡಾ. ಜಿ. ಶಂಕರ್ ಸಭಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ ನಾಲ್ಕು ವಿಭಾಗಗಳಲ್ಲಿ ಒಟ್ಟು 178 ಪುಟಾಣಿಗಳು ಭಾಗವಹಿಸಿದರು. ಸಹಸ್ರಾರು ಪ್ರೇಕ್ಷಕರು ಮಕ್ಕಳ ಹುಲಿವೇಷದ ನೃತ್ಯವನ್ನು ವೀಕ್ಷಿಸಿ, ಚಪ್ಪಾಳೆ ತಟ್ಟುವ ಮೂಲಕ ಸ್ಪರ್ಧಿಗಳಿಗೆ ಪ್ರೋತ್ಸಾಹ ನೀಡಿದರು.

ಬಹುಮಾನ ವಿತರಿಸಿದ ಉಡುಪಿ ಶಾಸಕ ಹಾಗೂ ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಯಶಪಾಲ್ ಎ. ಸುವರ್ಣ ಮಾತನಾಡಿ, ಉಚ್ಚಿಲ ದಸರಾ ಸಂಭ್ರಮದಲ್ಲಿ ಪುಟಾಣಿಗಳಿಗೂ ತಮ್ಮ ಪ್ರತಿಭೆ ಪ್ರದರ್ಶಿಸಲು ವೇದಿಕೆ ಕಲ್ಪಿಸುವ ಉದ್ದೇಶದಿಂದ ಈ ಸ್ಪರ್ಧೆ ಆಯೋಜಿಸಲಾಗಿದೆ. ತುಳುನಾಡಿನ ಸಂಸ್ಕೃತಿಯ ಪ್ರತೀಕವಾದ ಹುಲಿವೇಷ ಕುಣಿತದ ಮೂಲಕ ಪುಟಾಣಿಗಳಿಗೆ ರಂಗಪ್ರವೇಶದ ಅವಕಾಶ ನೀಡಲಾಗಿದೆ. ನಿರೀಕ್ಷೆಗೂ ಮೀರಿದ ರೀತಿಯಲ್ಲಿ ಮಕ್ಕಳು ತಮ್ಮ ಪ್ರತಿಭೆ ಪ್ರದರ್ಶಿಸಿದ್ದು, ಶ್ರೀ ಮಹಾಲಕ್ಷ್ಮೀ ತಾಯಿ ಎಲ್ಲ ಮಕ್ಕಳಿಗೂ ಉತ್ತಮ ಭವಿಷ್ಯ ಕರುಣಿಸಲಿ ಎಂದು ಹಾರೈಸಿದರು.

ಕಿನ್ನಿಪಿಲಿ ನಲಿಕೆ ಸ್ಪರ್ಧೆಯ ಫಲಿತಾಂಶ

0–2 ವರ್ಷ ವಿಭಾಗ (50 ಸ್ಪರ್ಧಿಗಳು): ಪ್ರಥಮ – ವಿಹಾ ಪಿ. ಸುವರ್ಣ, ದ್ವಿತೀಯ – ಸುಶನ್ಯಾ ಎಸ್. ಕಟಪಾಡಿ, ತೃತೀಯ – ಪಾರ್ಥವ್ ಸುವರ್ಣ ಎಸ್.
2–4 ವರ್ಷ ವಿಭಾಗ (48 ಸ್ಪರ್ಧಿಗಳು): ಪ್ರಥಮ – ವಕಿತ್ ವಿ. ಎಕ್ಕಾರ್, ದ್ವಿತೀಯ – ಶಿವಿನ್ ನಿಖಿಲ್. ತೃತೀಯ ಆದಿತ್ಯ ಕೃಷ್ಣ ಉಪಾಧ್ಯ
4–6 ವರ್ಷ ವಿಭಾಗ (45 ಸ್ಪರ್ಧಿಗಳು): ಪ್ರಥಮ – ನಮಿಷ್, ದ್ವಿತೀಯ – ಅದೈತ್ ಕೋಟ್ಯಾನ್, ತೃತೀಯ – ಪ್ರಿಯಾಂಶ್.
6–8 ವರ್ಷ ವಿಭಾಗ (35 ಸ್ಪರ್ಧಿಗಳು): ಪ್ರಥಮ – ಶ್ರೀಶೈಲ, ದ್ವಿತೀಯ – ಶಾಸ್ತ್ರ ಜಿ. ಸಾಲ್ಯಾನ್, ತೃತೀಯ – ಶ್ರೀಹಾನ್ ಕೆ. ಬಂಗೇರ ಮತ್ತು ದೇಶನ್ವಿಕೆ ಸಾಲ್ಯಾನ್.

ವಿಜೇತರಿಗೆ ನಗದು ಬಹುಮಾನದೊಂದಿಗೆ ಪ್ರಶಸ್ತಿ ಫಲಕ ವಿತರಿಸಲಾಯಿತು. ಭಾಗವಹಿಸಿದ ಎಲ್ಲ ಸ್ಪರ್ಧಾಳುಗಳಿಗೂ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಸಂಘದ ಮುಂಬಯಿ ಸಮಿತಿಯ ಅಧ್ಯಕ್ಷ ವೇದಪ್ರಕಾಶ್ ಶ್ರೀಯಾನ್, ಮಹಿಳಾ ಮೊಗವೀರ ಮಹಾಜನ ಸಂಘದ ಅಧ್ಯಕ್ಷೆ ಕವಿತಾ ಶರತ್, ಯುವರಾಜ್ ಮಸ್ಕತ್, ಕಿಶೋರ್ ಪಡುಕರೆ, ಮಲ್ಪೆ ಯಾಂತ್ರಿಕ ಟ್ರಾಲ್ ದೋಣಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಕಾಮಚಂದ್ರ ಕುಂದರ್, ಉಚ್ಚಿಲ ದಸರಾ ಮಹೋತ್ಸವ ಸಮಿತಿಯ ಅಧ್ಯಕ್ಷ ವಿನಯ ಕರ್ಕೇರ, ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷ ವಾಸುದೇವ ಸಾಲ್ಯಾನ್, ನಿರ್ದೇಶಕರಾದ ಶಶಿಕಾಂತ್ ಪಡುಬಿದ್ರಿ, ಶೋಭೇಂದ್ರ ಸಾಲ್ಯಾನ್, ವನಜಾ ಪುತ್ರನ್, ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಶರತ್ ಕುಮಾರ್ ಶೆಟ್ಟಿ, ಸಹಾಯಕ ಪ್ರಧಾನ ವ್ಯವಸ್ಥಾಪಕಿ ಶಾರಿಕಾ ಕಿರಣ್ ಹಾಗೂ ಆನಂದ ಸೆಲ್ವಂ ಉಪಸ್ಥಿತರಿದ್ದರು.

ಬ್ಯಾಂಕ್ ಸಿಬ್ಬಂದಿ ವಿಜೇತಾ  ಕಾರ್ಯಕ್ರಮ ನಿರೂಪಿಸಿದರು.


Spread the love
Subscribe
Notify of

0 Comments