ವಾಕ್ ವಿತ್ ಕಮಿಷನರ್: ಮಂಗಳೂರಿನಲ್ಲಿ ಫುಟ್‌ಪಾತ್ ಒತ್ತುವರಿ ತೆರವಿಗೆ 7 ದಿನಗಳ ಗಡುವು

Spread the love

ವಾಕ್ ವಿತ್ ಕಮಿಷನರ್: ಮಂಗಳೂರಿನಲ್ಲಿ ಫುಟ್‌ಪಾತ್ ಒತ್ತುವರಿ ತೆರವಿಗೆ 7 ದಿನಗಳ ಗಡುವು

ಹಂಪನಕಟ್ಟೆಯಲ್ಲಿ ಹೋಟೆಲ್ ಪರಿಶೀಲನೆ; ಟ್ರೇಡ್ ಲೈಸೆನ್ಸ್ ಹಾಗೂ ಸ್ವಚ್ಛತೆ ಬಗ್ಗೆ ಅಧಿಕಾರಿಗಳಿಗೆ ಸೂಚನೆ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ರತ್ನಂ ಪಾಂಡೆ ಅವರು ‘ವಾಕ್ ವಿತ್ ಕಮಿಷನರ್’ ಕಾರ್ಯಕ್ರಮದ ಮೂಲಕ ನಗರದ ವಿವಿಧ ಪ್ರದೇಶಗಳಲ್ಲಿ ಸಂಚರಿಸಿ ರಸ್ತೆ, ಫುಟ್‌ಪಾತ್ ಒತ್ತುವರಿ ಹಾಗೂ ಮಳಿಗೆಗಳ ಟ್ರೇಡ್ ಲೈಸೆನ್ಸ್ ಸೇರಿದಂತೆ ವಿವಿಧ ವಿಚಾರಗಳ ಕುರಿತು ಪರಿಶೀಲನೆ ನಡೆಸಿದರು.

ಹಂಪನಕಟ್ಟೆ ಬಳಿ ಪರಿಶೀಲನೆ ನಡೆಸಿದ ವೇಳೆ ಕಾಮತ್ ಹೋಟೆಲ್‌ನ ಟ್ರೇಡ್ ಲೈಸೆನ್ಸ್ ಪರಿಶೀಲಿಸಲಾಯಿತು. ಟ್ರೇಡ್ ಲೈಸೆನ್ಸ್ ವರ್ಗಾವಣೆ ಮಾಡದೇ ಹೋಟೆಲ್ ನಡೆಸುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಮಾಲಕರಿಗೆ ನೋಟಿಸ್ ಜಾರಿಗೊಳಿಸುವಂತೆ ಅಧಿಕಾರಿಗಳಿಗೆ ಆಯುಕ್ತರು ಸೂಚಿಸಿದರು.

ಈ ವೇಳೆ ಹೋಟೆಲ್‌ನ ಅಡುಗೆ ಕೋಣೆಯನ್ನೂ ಪರಿಶೀಲಿಸಿದ ಆಯುಕ್ತರು, ಸ್ವಚ್ಛತೆಯ ಕೊರತೆ ಹಾಗೂ ಫ್ರಿಡ್ಜ್‌ನಲ್ಲಿ ಉಳಿದ ಆಹಾರ ಪದಾರ್ಥಗಳು ಕಂಡುಬಂದ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಂಡು ನೋಟಿಸ್ ನೀಡುವಂತೆ ಸೂಚಿಸಿದರು.

ನಗರದ ಎಲ್ಲಾ ಮಳಿಗೆಗಳ ಟ್ರೇಡ್ ಲೈಸೆನ್ಸ್‌ಗಳನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಆಯುಕ್ತ ರಾಹುಲ್ ರತ್ನಂ ಪಾಂಡೆ ಸೂಚನೆ ನೀಡಿದರು.

‘ವಾಕ್ ವಿತ್ ಕಮಿಷನರ್’ ಕಾರ್ಯಕ್ರಮದ ಸಂದರ್ಭದಲ್ಲಿ ನಗರದ ಹಲವು ಮಳಿಗೆಗಳು ಫುಟ್‌ಪಾತ್ ಒತ್ತುವರಿ ಮಾಡಿಕೊಂಡಿರುವುದು ಆಯುಕ್ತರ ಗಮನಕ್ಕೆ ಬಂದಿದೆ.

ಹಂಪನಕಟ್ಟೆ, ಕೆಬಿ ಕಟ್ಟೆ, ಲೇಡಿಗೋಷನ್ ರಸ್ತೆ ಹಾಗೂ ಕಾರ್‌ಸ್ಟ್ರೀಟ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಕಂಡುಬಂದಿರುವ ಫುಟ್‌ಪಾತ್ ಒತ್ತುವರಿಯನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಆಯುಕ್ತರು, 7 ದಿನಗಳೊಳಗೆ ಒತ್ತುವರಿ ತೆರವುಗೊಳಿಸುವಂತೆ ನಿರ್ದೇಶನ ನೀಡಿದ್ದಾರೆ.

ರಾಜರಾಜಿ ಪಾರ್ಕ್‌ನಲ್ಲಿ ಪ್ರತಿ ಭಾನುವಾರ ಸಾಂಸ್ಕೃತಿಕ ಕಾರ್ಯಕ್ರಮ

ಇದೇ ವೇಳೆ ಮಂಗಳೂರಿನ ರಾಜರಾಜಿ ಪಾರ್ಕ್‌ನಲ್ಲಿ ಆಂಫಿಥಿಯೇಟರ್ ನಿರ್ಮಿಸಲಾಗಿದ್ದು, ಇಲ್ಲಿ ಪ್ರತಿ ಭಾನುವಾರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಯೋಜಿಸಲಾಗಿದೆ ಎಂದು ಆಯುಕ್ತ ರಾಹುಲ್ ರತ್ನಂ ಪಾಂಡೆ ಮಾಹಿತಿ ನೀಡಿದರು.

ಮುಂದಿನ 20 ದಿನಗಳೊಳಗೆ ಕಾರ್ಯಕ್ರಮ ಆರಂಭವಾಗಲಿದ್ದು, ವಿವಿಧ ಕಲಾ ತಂಡಗಳಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು.

ನಗರದ ಸ್ವಚ್ಛತೆ, ಸಾರ್ವಜನಿಕ ಸ್ಥಳಗಳ ಸುವ್ಯವಸ್ಥೆ, ಫುಟ್‌ಪಾತ್‌ಗಳ ಮುಕ್ತ ಬಳಕೆ ಹಾಗೂ ವ್ಯಾಪಾರ ಮಳಿಗೆಗಳ ನಿಯಮಾನುಸರಣೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ‘ವಾಕ್ ವಿತ್ ಕಮಿಷನರ್’ ಕಾರ್ಯಕ್ರಮದ ಮೂಲಕ ಸ್ಥಳ ಪರಿಶೀಲನೆ ಮುಂದುವರಿಸಲಾಗುತ್ತಿದೆ.


Spread the love
Subscribe
Notify of

0 Comments