ಸಂವಿಧಾನಕ್ಕಿಂತ ಹೆಚ್ಚಿನ ಹಕ್ಕುಗಳು ನಮಗೆ ಬೇಡ : ಆರ್ಚ್ ಬಿಷಪ್ ಡಾ.ಪೀಟರ್ ಮಚಾದೊ

Spread the love

ಸಂವಿಧಾನಕ್ಕಿಂತ ಹೆಚ್ಚಿನ ಹಕ್ಕುಗಳು ನಮಗೆ ಬೇಡ : ಆರ್ಚ್ ಬಿಷಪ್ ಡಾ.ಪೀಟರ್ ಮಚಾದೊ

  • ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್‌ ನೀಡಿದ್ದ ಭರವಸೆಗಳನ್ನು ಈಡೇರಿಸಲು ಆಗ್ರಹಿಸಿ ಫ್ರೀಡಂ ಪಾರ್ಕ್‌ನಲ್ಲಿ ಅಲ್ಪಸಂಖ್ಯಾತರು, ಶೋಷಿತರ ಬೃಹತ್ ಸಮಾವೇಶ

ಬೆಂಗಳೂರು: ಹಿಂದಿನ ಸರಕಾರ ತಂದ ಮತಾಂತರ ನಿಷೇಧ ಕಾಯ್ದೆಯು ಧಾರ್ಮಿಕ ಅಲ್ಪಸಂಖ್ಯಾತರ ಅಸ್ತಿತ್ವವನ್ನೇ ಅಪರಾಧೀಕರಿಸುತ್ತದೆ. ಇದು ಸಂವಿಧಾನದ 25ನೇ ವಿಧಿಯ ಆಶಯಗಳಿಗೆ ವಿರುದ್ಧವಾಗಿದೆ. ಸಂವಿಧಾನಕ್ಕಿಂತ ಹೆಚ್ಚಿನ ಹಕ್ಕುಗಳು ನಮಗೆ ಬೇಡ, ಸಂವಿಧಾನ ನೀಡಿದಷ್ಟೇ ಹಕ್ಕುಗಳು ಸಾಕು ಎಂದು ಬೆಂಗಳೂರು ಕ್ರೈಸ್ತ ಮಹಾಧರ್ಮಕ್ಷೇತ್ರದ ಆರ್ಚ್ ಬಿಷಪ್ ಡಾ.ಪೀಟರ್ ಮಚಾದೊ ಹೇಳಿದರು.

ಕಾಂಗ್ರೆಸ್ 2023ರ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುವಂತೆ ಆಗ್ರಹಿಸಿ ‘ಕರ್ನಾಟಕದ ಅಲ್ಪಸಂಖ್ಯಾತರು ಹಾಗೂ ಶೋಷಿತರ ಧ್ವನಿ’ ವೇದಿಕೆಯ ನೇತೃತ್ವದಲ್ಲಿ ನಗರದ ಫ್ರೀಡಂ ಪಾರ್ಕ್ ನಲ್ಲಿ ಗುರುವಾರ ಆಯೋಜಿಸಿದ್ದ ಬೃಹತ್ ಸಾರ್ವಜನಿಕ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಇದೊಂದು ರಾಜಕೀಯ ಅಥವಾ ಧಾರ್ಮಿಕ ಸಭೆಯಲ್ಲ, ಬದಲಾಗಿ ಸಾಮಾಜಿಕವಾಗಿ ಶೋಷಿತರಾದ ಜನರ ಸಮಾವೇಶ. ಹಿಂದಿನ ಸರಕಾರ ತಂದ ಮತಾಂತರ ನಿಷೇಧ ಕಾಯ್ದೆಯು ಸಂವಿಧಾನದ 25ನೇ ವಿಧಿಯ ಆಶಯಗಳಿಗೆ ವಿರುದ್ಧವಾಗಿದ್ದು, ಧಾರ್ಮಿಕ ಅಲ್ಪಸಂಖ್ಯಾತರ ಅಸ್ತಿತ್ವವನ್ನೇ ಅಪರಾಧೀಕರಿಸುತ್ತದೆ. ದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಕಾಯ್ದೆಗಳಿರುವಾಗ ಪ್ರತ್ಯೇಕ ಕಾಯ್ದೆಯ ಅಗತ್ಯವಿಲ್ಲ ಎಂದವರು ಅಭಿಪ್ರಾಯಿಸಿದರು.

ನಾವು ಈ ದೇಶದ ಎರಡನೇ ದರ್ಜೆಯ ಪ್ರಜೆಗಳಲ್ಲ, ಶಾಲೆಗಳು ಹಾಗೂ ಆಸ್ಪತ್ರೆಗಳ ಮೂಲಕ ಸಮಾಜದ ಎಲ್ಲ ವರ್ಗಗಳಿಗೂ ಸೇವೆ ಸಲ್ಲಿಸುತ್ತಿದ್ದೇವೆ. ಚುನಾವಣೆಯಲ್ಲಿ ನೀಡಿದ ಆಶ್ವಾಸನೆಗಳನ್ನು ಈಡೇರಿಸಿದರೆ ಮಾತ್ರ ಮುಂದಿನ ಚುನಾವಣೆಯಲ್ಲಿ ಜನರು ನಿಮ್ಮನ್ನು ನಂಬುತ್ತಾರೆ ಎಂದು ಸರಕಾರಕ್ಕೆ ತಿಳಿಸಿದರು.
ಕರ್ನಾಟಕ ರಾಜ್ಯ ಮುಸ್ಲಿಂ ಒಕ್ಕೂಟದ ಸಂಚಾಲಕ ಯಾಸೀನ್ ಮಲ್ಪೆ, ಪಂಚ ಗ್ಯಾರಂಟಿಗಳನ್ನು ಪ್ರಾಮಾಣಿಕವಾಗಿ ಜಾರಿಗೊಳಿಸಿದ ಸರಕಾರ, ಅಲ್ಪಸಂಖ್ಯಾತರು, ದಲಿತರು ಮತ್ತು ರೈತರಿಗೆ ನೀಡಿದ ಭರವಸೆಗಳ ವಿಚಾರದಲ್ಲಿ ಅಪ್ರಾಮಾಣಿಕತೆ ತೋರುತ್ತಿದೆ ಎಂದು ಆರೋಪಿಸಿದರು. ಸಂವಿಧಾನವನ್ನು ಕೈಯಲ್ಲಿ ಹಿಡಿದು ಭಾಷಣ ಮಾಡುವುದಷ್ಟೇ ಮುಖ್ಯವಲ್ಲ, ಸಿಕ್ಕ ಅಧಿಕಾರವನ್ನು ಬಳಸಿ ಸಂವಿಧಾನದ ಆಶಯಗಳಿಗೆ ಬದ್ಧವಾಗಿ ಆಡಳಿತ ನಡೆಸಬೇಕು. ನಮ್ಮನ್ನು ‘ಟೇಕನ್ ಫಾರ್ ಗ್ರಾಂಟೆಡ್’ ಎಂದು ಭಾವಿಸಿದರೆ ಕ್ಷಮಿಸುವುದಿಲ್ಲ, ಮುಂದಿನ ದಾರಿಯ ಬಗ್ಗೆ ಒಟ್ಟಾಗಿ ತೀರ್ಮಾನ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಮೀಯತ್ ಉಲಮಾ-ಎ-ಹಿಂದ್ ರಾಜ್ಯ ಉಪಾಧ್ಯಕ್ಷ ಮುಫ್ತಿ ಆರ್. ಮುಹಮ್ಮದ್ ಹುಸೇನ್ ಸಾಬ್ ಮಾತನಾಡಿ, ಒಳ್ಳೆಯ ಮನುಷ್ಯರು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ, ಆದರೆ ಕಾಂಗ್ರೆಸ್ ಸರಕಾರ ನಮಗೆ ನ್ಯಾಯ ಕೊಡುತ್ತಿಲ್ಲ ಎಂದರು. ದೇಶದ ಸ್ವಾತಂತ್ರ್ಯಕ್ಕಾಗಿ ಮುಸ್ಲಿಮರು ನೀಡಿದ ತ್ಯಾಗವನ್ನು ಸ್ಮರಿಸಿದ ಅವರು, ಪ್ರಜಾಸತ್ತಾತ್ಮಕವಾಗಿ ನಮ್ಮ ಹಕ್ಕುಗಳನ್ನು ಕೇಳುತ್ತಿದ್ದೇವೆ, ಭರವಸೆಗಳನ್ನು ಈಡೇರಿಸಿ ಎಂದು ಆಗ್ರಹಿಸಿದರು.

ಪ್ರಗತಿಪರ ಚಿಂತಕ ಶಿವಸುಂದರ್ ಮಾತನಾಡಿ, ಕಳೆದ ಮೂರೂವರೆ ವರ್ಷಗಳ ಕಾಂಗ್ರೆಸ್ ಆಡಳಿತವು ವಿಶ್ವಾಸದ್ರೋಹದ ಕಥೆಯಾಗಿದೆ ಎಂದು ಟೀಕಿಸಿದರು. ಸ್ಥಳೀಯ ಸಂಸ್ಥೆಗಳು ಹಾಗೂ ಜಿಬಿಎ ಚುನಾವಣೆಗಳಿಗೆ ಎಸ್ಐಆರ್ ಪೂರ್ವ ಮತದಾರರ ಪಟ್ಟಿ ಬಳಸುವುದಾಗಿ ಭರವಸೆ ನೀಡಿದ್ದ ಸರಕಾರ, ಈಗ ಎಸ್ಐಆರ್ ಪಟ್ಟಿಯನ್ನೇ ಬಳಸಲು ಮುಂದಾಗಿದೆ. ಇದರಿಂದ ರಾಜ್ಯದ ಒಂದು ಕೋಟಿ ಹಾಗೂ ಬೆಂಗಳೂರಿನ 53 ಲಕ್ಷ ಮತದಾರರು ಹಕ್ಕುಗಳಿಂದ ವಂಚಿತರಾಗಲಿದ್ದು, ಇದರಲ್ಲಿ ಮುಸ್ಲಿಮರು, ಕ್ರೈಸ್ತರು, ದಲಿತರು, ಆದಿವಾಸಿಗಳು, ವಲಸೆ ಕಾರ್ಮಿಕರು ಮತ್ತು ತೃತೀಯಲಿಂಗಿಗಳು ಸೇರಿದ್ದಾರೆ ಎಂದರು. ಜಾನುವಾರು ಹತ್ಯೆ ನಿಷೇಧ ಕಾಯ್ದೆಯಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕವೂ 1,950 ಪ್ರಕರಣಗಳು ದಾಖಲಾಗಿವೆ. ಅನುಪಯುಕ್ತ ರಾಸುಗಳನ್ನು ಮಾರಾಟ ಮಾಡಲು ಸಾಧ್ಯವಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆಕ್ಷೇಪಿಸಿದರು.

ಸಿಪಿಐಎಂ ರಾಜ್ಯ ಸಮಿತಿ ಸದಸ್ಯೆ ಕೆ. ನೀಲಾ ಮಾತನಾಡಿ, ರಾಮಮಂದಿರದ ಬೀಗ ತೆಗೆದವರು ಯಾರು ಎಂಬುದು ಜನರಿಗೆ ಮರೆತಿಲ್ಲ, ‘ಮೊಹಬ್ಬತ್ ಕಿ ದುಕಾನ್’ ತೆರೆಯುವುದು ಕೇವಲ ಮಾತಿನಿಂದ ಸಾಧ್ಯವಿಲ್ಲ, ಅದಕ್ಕೆ ದೃಢ ನಿಲುವು ಬೇಕು ಎಂದರು. ಸಾಚಾರ್ ವರದಿ ಬಂದು 19 ವರ್ಷ ಕಳೆದರೂ ಮುಸ್ಲಿಮರ ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿ ಸುಧಾರಿಸಿಲ್ಲ. ಕಾರ್ಪೊರೇಟ್ ಶಕ್ತಿಗಳ ಜೊತೆಗಿನ ಸ್ನೇಹಕ್ಕಾಗಿ ಜಾನುವಾರು ಹತ್ಯೆ ನಿಷೇಧ ಕಾಯ್ದೆಯನ್ನು ವಾಪಸ್ ಪಡೆಯುತ್ತಿಲ್ಲ, ಮೈಸೂರಿನ ಪೊಲೀಸ್ ಠಾಣೆಗೆ ನುಗ್ಗಿದ ಮಾಜಿ ಸಂಸದರ ಹೆಸರನ್ನು ಚಾರ್ಜ್ಶೀಟ್ನಿಂದ ಕೈಬಿಡುವ ಮೂಲಕ ಒಳಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದರು.

ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ಕೊಟ್ಟ ಮಾತನ್ನು ಉಳಿಸಿಕೊಳ್ಳದವರನ್ನು ವಚನಭ್ರಷ್ಟರು ಎನ್ನಬೇಕಾಗುತ್ತದೆ ಎಂದರು. ಬುದ್ಧನ ಕಥೆಯನ್ನು ಉಲ್ಲೇಖಿಸಿದ ಅವರು, ದೊಣ್ಣೆಯಿಂದ ಹೊಡೆಯುವವರ ಮುಂದೆ ಹಾವು ಕನಿಷ್ಠ ಬುಸುಗುಟ್ಟದಿದ್ದರೆ ಉಳಿಗಾಲವಿಲ್ಲ ಎಂದರು. 1935ರಲ್ಲಿ ಅಂಬೇಡ್ಕರ್ ಅವರು ಹೇಳಿದಂತೆ ಮತಾಂತರ ಎಂಬುದು ಮನುಷ್ಯನ ಘನತೆ ಮತ್ತು ಆಯ್ಕೆಯ ಪ್ರಶ್ನೆ. ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಸುಮಾರು 800 ದಲಿತರ ಕೊಲೆಯಾಗಿದ್ದು, ಈ ಬಗ್ಗೆಯೂ ಧ್ವನಿ ಎತ್ತಬೇಕಿದೆ ಎಂದರು.

ಕರ್ನಾಟಕ ರಾಜ್ಯ ರೈತ ಸಂಘದ ಸಂಚಾಲಕ ವೀರಸಂಗಯ್ಯ ಮಾತನಾಡಿ, ರಾಜ್ಯದ 87 ಲಕ್ಷ ರೈತ ಕುಟುಂಬಗಳ ಪೈಕಿ 69 ಲಕ್ಷ ಸಣ್ಣ ರೈತರು ಹೈನುಗಾರಿಕೆಯನ್ನೇ ನಂಬಿದ್ದಾರೆ. ಹಾಲು ನಿಲ್ಲಿಸಿದ ರಾಸುಗಳನ್ನು ಮಾರಾಟ ಮಾಡಿದರೆ 20ರಿಂದ 25 ಸಾವಿರ ರೂಪಾಯಿ ಸಿಗುತ್ತಿತ್ತು, ಈಗ ಕಾಯ್ದೆಯಿಂದಾಗಿ ರೈತರು ಬೀದಿಗೆ ಬಿದ್ದಿದ್ದಾರೆ. ಕಾರ್ಪೊರೇಟ್ ಡೈರಿಗಳಿಗೆ ಅನುಕೂಲ ಮಾಡಿಕೊಡಲು ಹಾಗೂ ಮಾಂಸ ಮತ್ತು ಚರ್ಮೋದ್ಯಮವನ್ನು ನಾಶಪಡಿಸಲು ಈ ಕಾಯ್ದೆ ತರಲಾಗಿದೆ. ಮುಂಬರುವ ಬೆಳಗಾವಿ ಅಧಿವೇಶನದಲ್ಲೇ ಕಾಯ್ದೆ ರದ್ದುಗೊಳಿಸದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು ಎಂದರು.

ಸಮಾವೇಶದ ಅಂತ್ಯದಲ್ಲಿ ಕೆ.ಆರ್. ಸುಹೈಲ್ ಅಹ್ಮದ್ ನಿರ್ಣಯಗಳನ್ನು ಮಂಡಿಸಿದರು. ದೆಹಲಿಯಲ್ಲಿ ರಾಹುಲ್ ಗಾಂಧಿ ಸಂವಿಧಾನ ಉಳಿವಿಗಾಗಿ ಹೋರಾಡುತ್ತಿದ್ದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ವೋಟ್ ಬ್ಯಾಂಕ್ ಆಗಿರುವ ಅಲ್ಪಸಂಖ್ಯಾತರೇ ಬೀದಿಗಿಳಿಯುವಂತಾಗಿದೆ. ಯಾವುದೇ ಫಿಕ್ಸೆಡ್ ಡೆಪಾಸಿಟ್ ಅನ್ನು ಐದು ವರ್ಷಗಳಲ್ಲಿ ಹಿಂಪಡೆಯಬಹುದು ಎಂಬುದನ್ನು ಕಾಂಗ್ರೆಸ್ ಮರೆಯಬಾರದು ಎಂದರು. ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆಗೆ 2022ರಲ್ಲಿ ಬಿಜೆಪಿ ಸರಕಾರ ತಂದಿರುವ ತಿದ್ದುಪಡಿಯನ್ನು ಕಾಂಗ್ರೆಸ್ ಸರಕಾರ ರದ್ದುಗೊಳಿಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ನೀಡಿರುವ ಹೇಳಿಕೆಯನ್ನು ಉಲ್ಲೇಖಿಸುತ್ತಲೇ, ಕಾದು ನೋಡುವ ತಂತ್ರದೊಂದಿಗೆ ಹೋರಾಟ ಮುಂದುವರಿಸುವುದಾಗಿ ತಿಳಿಸಿದರು.

ಮತಾಂತರ ನಿಷೇಧ ಕಾಯ್ದೆ-2022 ರದ್ದುಗೊಳಿಸಿ ದಾಖಲಾದ ಪ್ರಕರಣಗಳನ್ನು ಹಿಂಪಡೆಯುವುದು, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ದ್ವೇಷ ಭಾಷಣಗಳ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸುವುದು, ಜಾನುವಾರು ಹತ್ಯೆ ನಿಷೇಧ ಕಾಯ್ದೆ-2020 ರದ್ದುಗೊಳಿಸಿ ಗುಂಪು ಹಲ್ಲೆ ತಡೆಗೆ ತೆಹಸೀನ್ ಪೂನಾವಾಲಾ ತೀರ್ಪು ಜಾರಿಗೊಳಿಸುವುದು, ಅರ್ಹ ಮುಸ್ಲಿಮರಿಗೆ 2ಬಿ ಮೀಸಲಾತಿ ಮರುಸ್ಥಾಪಿಸಿ ಕ್ರೈಸ್ತ ಸಮುದಾಯಕ್ಕೆ ಒಬಿಸಿ ಪಟ್ಟಿಯಲ್ಲಿ ಶೇ.1ರಷ್ಟು ಪ್ರತ್ಯೇಕ ಮೀಸಲಾತಿ ನೀಡುವುದು ಹಾಗೂ ಮುಖ್ಯಮಂತ್ರಿಗಳು ಕಾಲಮಿತಿ ನಿಗದಿಪಡಿಸಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕೆಂಬ ಐದು ನಿರ್ಣಯಗಳನ್ನು ಸಭೆ ಅಂಗೀಕರಿಸಿತು.


Spread the love
Subscribe
Notify of

0 Comments