ಸೆ.27ರಂದು ಕೆಎಂಸಿ ಆಸ್ಪತ್ರೆಯಿಂದ ವಿಶ್ವ ಹೃದಯ ದಿನದ ವಾಕ್‌ಥಾನ್

Spread the love

 ಸೆ.27ರಂದು ಕೆಎಂಸಿ ಆಸ್ಪತ್ರೆಯಿಂದ ವಿಶ್ವ ಹೃದಯ ದಿನದ ವಾಕ್‌ಥಾನ್ 

ಮಂಗಳೂರು: ವಿಶ್ವ ಹೃದಯ ದಿನದ ಅಂಗವಾಗಿ ಹೃದಯದ ಆರೋಗ್ಯದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕೆಎಂಸಿ ಆಸ್ಪತ್ರೆ ಮಂಗಳೂರು ವತಿಯಿಂದ ‘ವಿಶ್ವ ಹೃದಯ ದಿನ ವಾಕ್‌ಥಾನ್ 2026’ ಆಯೋಜಿಸಲಾಗಿದೆ. ಸೆ.27ರಂದು ಬೆಳಗ್ಗೆ 6.15ಕ್ಕೆ ವಾಕ್‌ಥಾನ್ ನಡೆಯಲಿದೆ ಎಂದು ಕೆಎಂಸಿ ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ. ನರಸಿಂಹ ಪೈ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷದ ವಿಶ್ವ ಹೃದಯ ದಿನದ ‘Don’t Miss a Beat’ ಸಂದೇಶವು ಹೃದಯದ ಆರೋಗ್ಯದ ಬಗ್ಗೆ ಜಾಗೃತಿ ವಹಿಸುವಂತೆ ನೆನಪಿಸುತ್ತದೆ. ನಿಯಮಿತ ಆರೋಗ್ಯ ತಪಾಸಣೆ, ಉತ್ತಮ ಆಹಾರ ಪದ್ಧತಿ, ವ್ಯಾಯಾಮ ಹಾಗೂ ಒತ್ತಡ ನಿಯಂತ್ರಣದ ಮೂಲಕ ಹೃದಯವನ್ನು ಆರೋಗ್ಯವಾಗಿರಿಸಿಕೊಳ್ಳಬಹುದು. ಯುವಜನರಲ್ಲಿಯೂ ಹೃದಯ ಸಂಬಂಧಿತ ಸಮಸ್ಯೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯಕರ ಜೀವನಶೈಲಿಗೆ ಆದ್ಯತೆ ನೀಡಬೇಕು ಎಂದರು.

ಕಾರ್ಡಿಯಾಕ್ ಎಲೆಕ್ಟ್ರೋಫಿಸಿಯಾಲಜಿಸ್ಟ್ ಡಾ. ಮನೀಶ್ ರೈ ಮಾತನಾಡಿ, ರೋಗಿಗಳಿಗೆ ಚಿಕಿತ್ಸೆ ನೀಡುವುದರ ಜತೆಗೆ ಆರೋಗ್ಯದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ. ಕೆಎಂಸಿ ಆಸ್ಪತ್ರೆಯಲ್ಲಿ ಐವರು ಪೂರ್ಣಾವಧಿ ಹೃದ್ರೋಗ ತಜ್ಞರು, ಮೂವರು ಹೃದಯ ಶಸ್ತ್ರಚಿಕಿತ್ಸಕರು, ಒಬ್ಬ ಎಲೆಕ್ಟ್ರೋಫಿಸಿಯಾಲಜಿಸ್ಟ್ ಹಾಗೂ ಎರಡು ಕ್ಯಾಥ್ ಲ್ಯಾಬ್‌ಗಳ ಸೌಲಭ್ಯವಿದೆ ಎಂದು ತಿಳಿಸಿದರು.

ಕೆಎಂಸಿ ಆಸ್ಪತ್ರೆಯ ಉಪ ವ್ಯವಸ್ಥಾಪಕ ರಾಕೇಶ್ ದರ್ಶನ್ ಮಾತನಾಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ವಾಕ್‌ಥಾನ್‌ಗೆ ಚಾಲನೆ ನೀಡಲಿದ್ದಾರೆ. ಕೆಎಂಸಿ ಆಸ್ಪತ್ರೆಯಿಂದ ಆರಂಭವಾಗುವ ವಾಕ್‌ಥಾನ್ ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ಬಲ್ಮಠ ರಸ್ತೆ, ತಾಜ್ ಮಹಲ್, ಮಿಲಾಗ್ರಿಸ್ ಚರ್ಚ್, ಐಎಂಎ ಹಾಲ್, ಅತ್ತಾವರ ಹಾಗೂ ಎಸ್.ಎಲ್. ಮಥಿಯಾಸ್ ರಸ್ತೆಯ ಮೂಲಕ ಮರೇನಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಕಾಪಿಗುಡ್ಡ ತಲುಪಲಿದೆ. ರಾಷ್ಟ್ರೀಯ ಮಟ್ಟದ ಕ್ರೀಡಾಪಟು ಸಾಕ್ಷಿ ಕ್ರಿಸ್ಟಿನಾ ಕಾರ್ಕಾಡ್ ಟಾರ್ಚ್‌ಬೇರರ್ ಆಗಿರಲಿದ್ದಾರೆ ಎಂದರು.

ವಾಕ್‌ಥಾನ್‌ನಲ್ಲಿ ಭಾಗವಹಿಸುವವರು ಕೆಂಪು ಬಣ್ಣದ ಉಡುಪು ಧರಿಸಲು ಪ್ರೋತ್ಸಾಹಿಸಲಾಗಿದ್ದು, ಉತ್ತಮ ಸಂಸ್ಥೆ, ಉತ್ಸಾಹಭರಿತ ಭಾಗವಹಿಸುವಿಕೆ, ಘೋಷಣೆ ಹಾಗೂ ಫಲಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಭಾಗವಹಿಸುವವರಿಗೆ ಉಪಾಹಾರ ಹಾಗೂ ಮರೇನಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಿಂದ ಆರಂಭಿಕ ಸ್ಥಳಕ್ಕೆ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ನೋಂದಣಿ ಉಚಿತವಾಗಿದ್ದು, ಕಡ್ಡಾಯವಾಗಿದೆ. ಆಸಕ್ತರು ತಮ್ಮ ವಿವರಗಳನ್ನು +91 90081 67071 ಸಂಖ್ಯೆಗೆ ವಾಟ್ಸ್‌ಆ್ಯಪ್ ಮೂಲಕ ಕಳುಹಿಸಿ ನೋಂದಾಯಿಸಿಕೊಳ್ಳಬಹುದು ಎಂದರು .

ಪತ್ರಿಕಾಗೋಷ್ಠಿಯಲ್ಲಿ ಕೆಎಂಸಿ ಆಸ್ಪತ್ರೆಯ ಕ್ಲಸ್ಟರ್ ನಿರ್ದೇಶಕ ಪ್ರಮೋದ್ ಕುಂದರ್ ಉಪಸ್ಥಿತರಿದ್ದರು.


Spread the love
Subscribe
Notify of

0 Comments