ಪಿಲಿಕುಳ ವಿಜ್ಞಾನ ಕೇಂದ್ರದಲ್ಲಿ ಇಂದಿನಿಂದ ವಿಶ್ವ ಬಾಹ್ಯಾಕಾಶ ಸಪ್ತಾಹ
ಮಂಗಳೂರು: ವಿಶ್ವ ಬಾಹ್ಯಾಕಾಶ ಸಪ್ತಾಹದ ಅಂಗವಾಗಿ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರಿನ ಯು.ಆರ್. ರಾವ್ ಉಪಗ್ರಹ ಕೇಂದ್ರ (UಖSಅ), ಇಸ್ರೋ ಇವರ ಸಹಯೋಗದೊಂದಿಗೆ ಅಕ್ಟೋಬರ್ 7 ಮತ್ತು 8 ರಂದು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದ ಮಹತ್ವವನ್ನು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಪರಿಚಯಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.
ಪ್ರತಿ ವರ್ಷ ಅಕ್ಟೋಬರ್ 4 ರಿಂದ 10 ರವರೆಗೆ ವಿಶ್ವ ಬಾಹ್ಯಾಕಾಶ ಸಪ್ತಾಹವನ್ನು ಜಾಗತಿಕವಾಗಿ ಆಚರಿಸಲಾಗುತ್ತದೆ. ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನವು ಮಾನವಕುಲದ ಅಭಿವೃದ್ಧಿಗೆ ನೀಡಿರುವ ಕೊಡುಗೆಗಳನ್ನು ಸ್ಮರಿಸುವುದು, ಬಾಹ್ಯಾಕಾಶದ ಶಾಂತಿಯುತ ಅನ್ವೇಷಣೆ ಮತ್ತು ಬಳಕೆಯ ಮಹತ್ವವನ್ನು ಪರಿಚಯಿಸುವುದು ಹಾಗೂ ಸಾರ್ವಜನಿಕರಲ್ಲಿ, ವಿಶೇಷವಾಗಿ ಯುವಜನರಲ್ಲಿ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದ ಕುರಿತು ಅರಿವು ಹಾಗೂ ವೈಜ್ಞಾನಿಕ ಕುತೂಹಲವನ್ನು ಬೆಳೆಸುವುದು ವಿಶ್ವ ಬಾಹ್ಯಾಕಾಶ ಸಪ್ತಾಹದ ಪ್ರಮುಖ ಉದ್ದೇಶಗಳಾಗಿವೆ.
ವಿಶ್ವ ಬಾಹ್ಯಾಕಾಶ ಸಪ್ತಾಹವು ಬಾಹ್ಯಾಕಾಶ ವಿಜ್ಞಾನ, ಉಪಗ್ರಹಗಳು, ಖಗೋಳಶಾಸ್ತ್ರ ಹಾಗೂ ಬಾಹ್ಯಾಕಾಶ ತಂತ್ರಜ್ಞಾನದಲ್ಲಿನ ಬೆಳವಣಿಗೆಗಳ ಕುರಿತು ತಿಳಿದುಕೊಳ್ಳಲು ಮತ್ತು ಯುವಜನರಲ್ಲಿ ವೈಜ್ಞಾನಿಕ ಆಸಕ್ತಿ ಹಾಗೂ ಕುತೂಹಲವನ್ನು ಬೆಳೆಸಲು ಉತ್ತಮ ವೇದಿಕೆಯನ್ನು ಒದಗಿಸುತ್ತದೆ.
ಎರಡು ದಿನಗಳ ವಿಶ್ವ ಬಾಹ್ಯಾಕಾಶ ಸಪ್ತಾಹದ ಅಂಗವಾಗಿ ಇಸ್ರೋ ವತಿಯಿಂದ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಮಾದರಿಗಳ ಪ್ರದರ್ಶನ, ಇಸ್ರೋ ವಿಜ್ಞಾನಿಗಳೊಂದಿಗೆ ವಿದ್ಯಾರ್ಥಿಗಳ ಸಂವಾದ, ಇಸ್ರೋ ವಿಜ್ಞಾನಿಗಳು ಮತ್ತು ತಜ್ಞರಿಂದ ಉಪನ್ಯಾಸ, ಉಪಗ್ರಹ ಮಾದರಿ ತಯಾರಿಕಾ ಸ್ಪರ್ಧೆ, ರಸಪ್ರಶ್ನೆ, ಸ್ಮರಣಶಕ್ತಿ ಪರೀಕ್ಷಾ ಸ್ಪರ್ಧೆ, ವಾಟರ್ ರಾಕೆಟ್ ಪ್ರಾತ್ಯಕ್ಷಿಕೆ, ವಿಜ್ಞಾನ ಕೇಂದ್ರದ ಗ್ಯಾಲರಿಗಳ ವೀಕ್ಷಣೆ, ತಾರಾಲಯ ಪ್ರದರ್ಶನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮವನ್ನು ಮುಖ್ಯವಾಗಿ ವಿವಿಧ ಶಾಲೆಗಳು ಮತ್ತು ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗಾಗಿ ಆಯೋಜಿಸಲಾಗಿದೆ. ಈಗಾಗಲೇ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಹ್ವಾನಿಸಲಾಗಿದೆ. ವಿದ್ಯಾರ್ಥಿಗಳು ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದ ಕುರಿತು ತರಗತಿಯ ಹೊರಗೆ ನೇರ ಅನುಭವ ಹಾಗೂ ಪ್ರಾಯೋಗಿಕ ಅರಿವು ಪಡೆಯಲು ಈ ಕಾರ್ಯಕ್ರಮ ಉತ್ತಮ ಅವಕಾಶವನ್ನು ಒದಗಿಸಲಿದೆ.
ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೂ ಮುಕ್ತ ಆಹ್ವಾನವಿದ್ದು, ಬಾಹ್ಯಾಕಾಶ ವಿಜ್ಞಾನ, ಖಗೋಳಶಾಸ್ತ್ರ ಹಾಗೂ ವಿಜ್ಞಾನದಲ್ಲಿ ಆಸಕ್ತಿ ಹೊಂದಿರುವ ಸಾರ್ವಜನಿಕರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿವಿಧ ಚಟುವಟಿಕೆಗಳ ಅನುಭವವನ್ನು ಪಡೆಯಬಹುದು. ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರಿಗೂ ಪ್ರವೇಶ ಉಚಿತವಾಗಿರುತ್ತದೆ. ಎಂದು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













