ಸುಳ್ಳು ಪ್ರಕರಣದ ಆರೋಪದಿಂದ ಮನನೊಂದು ಯುವಕ ಆತ್ಮಹತ್ಯೆ: ಸುರತ್ಕಲ್ ಠಾಣೆ ಮುಂದೆ ಶವವಿಟ್ಟು ಪ್ರತಿಭಟನೆ
ಮಂಗಳೂರು: ಯುವ ಜೋಡಿಯೊಂದಿಗಿನ ವಾಗ್ವಾದದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದರಿಂದ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿ, ಮೃತದೇಹವನ್ನು ಸುರತ್ಕಲ್ ಪೊಲೀಸ್ ಠಾಣೆಯ ಮುಂದೆ ಇಟ್ಟು ಸ್ಥಳೀಯರು ಮಂಗಳವಾರ ಸಂಜೆ ಪ್ರತಿಭಟನೆ ನಡೆಸಿದರು. ಶಾಸಕ ಭರತ್ ಶೆಟ್ಟಿ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಯುವ ಜೋಡಿಯ ವಿರುದ್ಧವೂ ದೂರು ದಾಖಲಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಮೃತ ಯುವಕನನ್ನು ಹೊಸಬೆಟ್ಟು ನಿವಾಸಿ ಸೋಮನಾಥ ಎಂದು ಗುರುತಿಸಲಾಗಿದೆ. ಎರಡು ದಿನಗಳ ಹಿಂದೆ ಕಾಸರಗೋಡು ಮೂಲದ ಯುವಕ ಮತ್ತು ದೆಹಲಿ ಮೂಲದ ಯುವತಿಯೊಬ್ಬರು ಹೊಸಬೆಟ್ಟು ಬಳಿಯ ಮೀನುಗಾರಿಕಾ ಜೆಟ್ಟಿಯಲ್ಲಿದ್ದಾಗ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವೇಳೆ ಎರಡೂ ಕಡೆಯವರ ನಡುವೆ ವಾಗ್ವಾದ ನಡೆದಿತ್ತು ಎನ್ನಲಾಗಿದೆ. ಈ ಸಂಬಂಧ ಯುವತಿ ನೀಡಿದ ದೂರಿನ ಮೇರೆಗೆ ಸೋಮನಾಥ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು ಎಂದು ತಿಳಿದುಬಂದಿದೆ.
ಇದರಿಂದ ಮನನೊಂದ ಸೋಮನಾಥ ಸೋಮವಾರ ಬೆಳಗ್ಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ತಾವು ಸಾವಿಗೆ ಕಾರಣ ಎಂದು ಉಲ್ಲೇಖಿಸಿ ಡೆತ್ ನೋಟ್ ಬರೆದಿಟ್ಟಿದ್ದರು ಎಂಬ ಮಾಹಿತಿಯೂ ಲಭ್ಯವಾಗಿದೆ. ಆದರೆ, ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.
ವಿಚಾರಣೆಗೆ ಕರೆಸಿದ ಸಂದರ್ಭದಲ್ಲಿ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪವನ್ನು ಮುಂದಿಟ್ಟುಕೊಂಡು ಸ್ಥಳೀಯರು ಪ್ರತಿಭಟನೆ ನಡೆಸಿದರು. ಮಂಗಳವಾರ ಸಂಜೆ ಮೃತದೇಹವನ್ನು ಸುರತ್ಕಲ್ ಪೊಲೀಸ್ ಠಾಣೆಯ ಮುಂದೆ ಇರಿಸಿ ಆಕ್ರೋಶ ವ್ಯಕ್ತಪಡಿಸಿದರು. ನೂರಾರು ಮೊಗವೀರ ಯುವಕರು ಸ್ಥಳದಲ್ಲಿ ಜಮಾಯಿಸಿದ್ದರು. ಶಾಸಕ ಭರತ್ ಶೆಟ್ಟಿ ಕೂಡ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ಪೊಲೀಸರನ್ನು ಪ್ರಶ್ನಿಸಿದರು.
ಪೊಲೀಸ್ ಠಾಣೆ ಹೆದ್ದಾರಿಯ ಪಕ್ಕದಲ್ಲಿರುವುದರಿಂದ ಪ್ರತಿಭಟನೆಯ ವೇಳೆ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿ ಸಂಚಾರ ದಟ್ಟಣೆ ಕಾಣಿಸಿಕೊಂಡಿತು. ರಾತ್ರಿ ವೇಳೆ ಬೀಚ್ ಪ್ರದೇಶದಲ್ಲಿ ಯುವ ಜೋಡಿಗಳು ಅನುಮಾನಾಸ್ಪದವಾಗಿ ತಿರುಗಾಡುವುದು, ಮಾದಕ ವಸ್ತುಗಳ ಸೇವನೆ ಮತ್ತು ಅತಿರೇಕದ ವರ್ತನೆಗಳು ನಡೆಯುತ್ತಿವೆ ಎಂದು ಸ್ಥಳೀಯರು ಆರೋಪಿಸಿ, ಬೀಚ್ ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕಲ್ಪಿಸುವಂತೆ ಒತ್ತಾಯಿಸಿದರು.
ಸೋಮನಾಥ ಅವರಿಗೆ ಮದ್ಯಪಾನದ ಚಟವಿದ್ದು, ಅಕ್ಟೋಬರ್ 25ರಂದು ಬೀಚ್ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಯುವ ಜೋಡಿಯನ್ನು ಪ್ರಶ್ನಿಸಿದ್ದರು. ಈ ಘಟನೆಯ ಬಳಿಕ ದೂರು ದಾಖಲಾಗಿದ್ದರಿಂದ ಅವರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಯುವ ಜೋಡಿಯ ದೂರಿನ ಆಧಾರದಲ್ಲಿ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂಬ ಆರೋಪವನ್ನೂ ಪ್ರತಿಭಟನಾಕಾರರು ಮಾಡಿದ್ದಾರೆ.
ಶಾಸಕ ಭರತ್ ಶೆಟ್ಟಿ ಸಾರ್ವಜನಿಕರು ಮತ್ತು ಪೊಲೀಸರೊಂದಿಗೆ ಮಾತುಕತೆ ನಡೆಸಿ, ಎರಡೂ ಕಡೆಯವರಿಂದ ದೂರು ಪಡೆದು ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಯುವ ಜೋಡಿಯ ವಿರುದ್ಧವೂ ದೂರು ನೀಡುವಂತೆ ತಿಳಿಸಲಾಗಿದ್ದು, ದೂರು ಸ್ವೀಕರಿಸಿದ ಬಳಿಕ ಪ್ರಕರಣ ದಾಖಲಿಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಪೋಸ್ಟ್ಮಾರ್ಟಂ ಪ್ರಕ್ರಿಯೆ ಮುಗಿದ ಬಳಿಕ ಮೃತದೇಹವನ್ನು ಆಸ್ಪತ್ರೆಯಿಂದ ಕೊಂಡೊಯ್ಯುವ ಸಂದರ್ಭದಲ್ಲಿ ಠಾಣೆಯ ಮುಂದೆ ಪ್ರತಿಭಟನೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಯುವ ಜೋಡಿಯ ವಿರುದ್ಧವೂ ಪ್ರಕರಣ ದಾಖಲಿಸಬೇಕೆಂಬ ಬೇಡಿಕೆ ಹಿನ್ನೆಲೆಯಲ್ಲಿ ದೂರು ನೀಡುವಂತೆ ಸೂಚಿಸಲಾಗಿದ್ದು, ಬಳಿಕ ಮೃತದೇಹವನ್ನು ಕೊಂಡೊಯ್ಯಲಾಗಿದೆ. ರಾತ್ರಿ ಸುಮಾರು 9 ಗಂಟೆಯ ವೇಳೆಗೆ ಸಂಚಾರವನ್ನು ಸಹಜ ಸ್ಥಿತಿಗೆ ತರಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.













