ಅಂಬ್ಲಮೊಗರು: ನಾಲೆಯ ಕೆಸರಿನಲ್ಲಿ ಹೂತು ಪ್ರಥಮ ಪಿಯುಸಿ ವಿದ್ಯಾರ್ಥಿ ದಾರುಣ ಸಾವು
ಮಂಗಳೂರು: ಬೇಸಿಗೆ ರಜೆಯಲ್ಲಿ ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಬಾಲಕನೋರ್ವ ನಾಲೆಯ ಕೆಸರಿನಲ್ಲಿ ಸಿಲುಕಿ ಸಾವನ್ನಪ್ಪಿದ ಘಟನೆ ಅಂಬ್ಲಮೊಗರು ಗ್ರಾಮದ ಖಂಡಿಲ ಎಂಬಲ್ಲಿ ಶನಿವಾರ ನಡೆದಿದೆ. ಅಂಬ್ಲಮೊಗರು ಜರಿ ಹೌಸ್ ನಿವಾಸಿ, ರಿಕ್ಷಾ ಚಾಲಕ ಶಿವರಾಮ್ ಅವರ ಪುತ್ರ ಸೃಜನ್ (17) ಮೃತಪಟ್ಟ ದುರ್ದೈವಿ.
ಇತ್ತೀಚೆಗಷ್ಟೇ ಪ್ರಥಮ ಪಿಯುಸಿ ಮುಗಿಸಿದ್ದ ಸೃಜನ್, ಶನಿವಾರ ಮಧ್ಯಾಹ್ನ ಮೂವರು ಸ್ನೇಹಿತರೊಂದಿಗೆ ಖಾಸಗಿ ವಿಶ್ವವಿದ್ಯಾಲಯಕ್ಕೆ ಸೇರಿದ ಜಮೀನಿನ ಕೆರೆಯಲ್ಲಿ ನೀರಾಟವಾಡಲು ತೆರಳಿದ್ದನು. ಕೆರೆಯಿಂದ ಮೇಲೆ ಬಂದ ಬಳಿಕ ಪಕ್ಕದ ನಾಲೆಯಲ್ಲಿ ಕಾಲು ತೊಳೆಯಲು ಇಳಿದಾಗ, ಭಾರೀ ಪ್ರಮಾಣದಲ್ಲಿದ್ದ ಕೆಸರಿನ ಹೂಳಿನಲ್ಲಿ ಸೃಜನ್ ಕಾಲುಗಳು ಹೂತುಹೋಗಿವೆ. ಸ್ನೇಹಿತರು ರಕ್ಷಿಸಲು ಪ್ರಯತ್ನಿಸಿದರಾದರೂ ಸಾಧ್ಯವಾಗಲಿಲ್ಲ.
ಘಟನೆಯಿಂದ ಬೆದರಿದ ಸ್ನೇಹಿತರು ಯಾರಿಗೂ ವಿಷಯ ತಿಳಿಸದೆ ಮನೆಗೆ ಮರಳಿದ್ದರು. ರಾತ್ರಿ 8 ಗಂಟೆಯಾದರೂ ಮಗ ಮನೆಗೆ ಬಾರದಿದ್ದಾಗ ಪೋಷಕರು ಹುಡುಕಾಟ ನಡೆಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಅಗ್ನಿಶಾಮಕ ದಳ ಮತ್ತು ಕೊಣಾಜೆ ಪೊಲೀಸರು ಸ್ಥಳಕ್ಕೆ ಧಾವಿಸಿದರು. ನಿರ್ಜನ ಪ್ರದೇಶದಲ್ಲಿ ಬೆಳಕಿನ ವ್ಯವಸ್ಥೆ ಇಲ್ಲದ ಕಾರಣ, ಟಿಪ್ಪರ್ ಲಾರಿಗಳ ಹೆಡ್‌ಲೈಟ್ ಬೆಳಕಿನಲ್ಲಿ ಮಧ್ಯರಾತ್ರಿಯವರೆಗೆ ಶೋಧ ಕಾರ್ಯ ನಡೆಸಿ ಮೃತದೇಹವನ್ನು ಹೊರತೆಗೆಯಲಾಯಿತು. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













