ಅಯೋಧ್ಯೆ ತೀರ್ಪು : ಶಾಂತಿ ಸೌಹಾರ್ದತೆಯನ್ನು ಕಾಪಾಡುವಂತೆ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಸೂಚನೆ
ಮಂಗಳೂರು: ಅಯೋಧ್ಯೆಯ ರಾಮ ಜನ್ಮಭೂಮಿ – ಬಾಬರಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ಶೀಘ್ರದಲ್ಲಿಯೇ ತೀರ್ಪು ಪ್ರಕಟಿಸಲಿದ್ದು, ತೀರ್ಪಿನ ವಿಚಾರದಲ್ಲಿ ಜಿಲ್ಲೆಯ ಜನರು ಉದ್ವೇಗಕ್ಕೋಳಗಾಗದೇ ಶಾಂತಿ ಸೌಹಾರ್ದತೆಯನ್ನು ಕಾಪಾಡುವಂತೆ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಸೂಚನೆ ನೀಡಿದ್ದಾರೆ.

ಈ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಿದ ಸಭೆಯಲ್ಲಿ ಮಾತನಾಡಿದ ಅವರು ಶಾಂತಿ ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಎಲ್ಲಾ ಇಲಾಖೆಗಳು ಸಿದ್ದತೆ ನಡೆಸಿದ್ದಾರೆ ಜಿಲ್ಲಾ ವ್ಯಾಪ್ತಿಯಲ್ಲಿ ಯಾವುದೇ ದುರ್ಘಟನೆಗಳು ನಡೆದ ಪಕ್ಷದಲ್ಲಿ ನೇರವಾಗಿ ಅವುಗಳಿಗೆ ಪ್ರತಿಕ್ರಿಯಿಸದೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಹೇಳಿದರು.
ಸುಪ್ರೀಂ ಕೋರ್ಟಿನ ತೀರ್ಪಿಗೆ ದೇಶದ ಎಲ್ಲ ನಾಗರಿಕರೂ ತಲೆಬಾಗಲೇಬೇಕು. ಯಾವುದೇ ಸಮುದಾಯಗಳ ಯುವಕರು ದುಡುಕಬಾರದು. ಉದ್ವೇಗಕ್ಕೆ ಒಳಗಾಗದೆ ಜನತೆ ಶಾಂತಿಯಿಂದ ವರ್ತಿಸಬೇಕು. ಎಲ್ಲ ಸಮುದಾಯಗಳ ಮುಖಂಡರು ಕಿರಿಯರಿಂದ ಹಿರಿಯರವರೆಗೂ ಸಮರ್ಪಕವಾಗಿ ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿದರು.
ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲ ಸಮುದಾಯಗಳ ಪ್ರಮುಖರು ಸಕ್ರಿಯರಾಗಿದ್ದಾರೆ. ಈಗಾಗಲೇ ಅಂತಹವರಿಗೆ ಮಾಹಿತಿ ನೀಡಲಾಗಿದ್ದು, ಸೌಹಾರ್ದ ಕಾಪಾಡುವ ಕೆಲಸವಾಗಬೇಕು. ದೇಶವೇ ಒಂದಾಗಿ ತೀರ್ಪನ್ನು ಸ್ವಾಗತಿಸಬೇಕು. ಇದಕ್ಕೂ ಮೀರಿ ಅತಿರೇಕಕ್ಕೆ ಹೋದರೆ ಪೊಲೀಸರಿಗೆ ಮಾಹಿತಿ ನೀಡಬೇಕು. ಕೂಡಲೇ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪೊಲೀಸ್ ಇಲಾಖೆ ಸರ್ವ ಸಿದ್ಧತೆಯಲ್ಲಿದೆ ಎಂದರು.

ಮೀಲಾದುನ್ನಬಿ-ಟಿಪ್ಪು ಜಯಂತಿ ಒಂದೇ ದಿನ ಬರಲಿವೆ. ಮೀಲಾದುನ್ನಬಿ ಆಚರಣೆಗೆ ಯಾವುದೇ ನಿರ್ಬಂಧವಿಲ್ಲ. ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯನ್ನು ರಾಜ್ಯ ಸರಕಾರವು ಅಧಿಕೃತವಾಗಿ ಆಚರಿಸುತ್ತಿಲ್ಲ. ಸರಕಾರದ ಆದೇಶವನ್ನು ಪಾಲಿಸಲಾಗುವುದು. ಇಲ್ಲಿಯವರೆಗೆ ಯಾವುದೇ ಮೆರವಣಿಗೆಗಳು ನಡೆದಿಲ್ಲ. ವೈಯಕ್ತಿಕವಾಗಿ ಮೆರವಣಿಗೆ ಮಾಡಬಹುದು. ಆದರೆ ವಿಜೃಂಭಣೆ ಇರುವಂತಿಲ್ಲ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ತಿಳಿಸಿದ್ದಾರೆ.













