ಆಂಧ್ರಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಅಪರಾಧಿ ಬಂಧನ
ಮಂಗಳೂರು: ಶಿಕ್ಷೆ ಪ್ರಕಟವಾದ ಬಳಿಕ ತಲೆಮರೆಸಿಕೊಂಡಿದ್ದ ಕುಖ್ಯಾತ ಅಪರಾಧಿಯನ್ನು ಕಡಬ ಪೊಲೀಸರು ಆಂಧ್ರಪ್ರದೇಶದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ದಿನಾಂಕ 31.01.2012ರಂದು ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಪುತ್ತೂರು ತಾಲೂಕಿನ ಕೊಂಬಾರು ಗ್ರಾಮದ ಅಮೈತಡ್ಕ ಎಂಬಲ್ಲಿ ಸಾರ್ವಜನಿಕ ರಸ್ತೆಯ ಸಮೀಪ ಮೋರಿಯ ಅಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ.15/2012, ಕಲಂ 302, 201 ಸಹಿತ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ್ದ ಆಗಿನ ತನಿಖಾಧಿಕಾರಿ ಎಂ.ಎನ್. ಅನುಚೇತ್ ಐಪಿಎಸ್ ಅವರು ಅಗತ್ಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ಸುಳ್ಯ ಅಜ್ಜವರ ನಿವಾಸಿ ಎನ್.ಎಂ. ಅಬ್ದುಲ್ ಅಜೀಜ್ (30) ವಿರುದ್ಧ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಮಾನ್ಯ ಉಚ್ಚ ನ್ಯಾಯಾಲಯದ ದ್ವಿಸದಸ್ಯ ಪೀಠದ ನ್ಯಾಯಮೂರ್ತಿಗಳಾದ ಶ್ರೀನಿವಾಸ್ ಹರೀಶ್ ಕುಮಾರ್ ಹಾಗೂ ವಿಜಯ್ ಕುಮಾರ್ ಎ. ಪಾಟೀಲ್ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ರೂ.2 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದ್ದರು. ಸರ್ಕಾರಿ ಅಭಿಯೋಜಕಿ ಕೆ.ಪಿ. ಯಶೋಧ ಅವರು ಸಮರ್ಥವಾಗಿ ವಾದ ಮಂಡಿಸಿದ್ದರು.
ಶಿಕ್ಷೆ ಪ್ರಕಟವಾದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕಡಬ ಪೊಲೀಸ್ ಉಪನಿರೀಕ್ಷಕ ಜಂಬುರಾಜ್ ಮಹಾಜನ್ ಹಾಗೂ ಸಿಬ್ಬಂದಿಗಳ ತಂಡ ಆಂಧ್ರಪ್ರದೇಶದಲ್ಲಿ ಪತ್ತೆಹಚ್ಚಿ ಬಂಧಿಸಿ, ದಿನಾಂಕ 25-04-2026 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದೆ.













