ಇನ್ಫೋಬ್ಲಾಕ್ಸ್ ಒಎಸ್ಎಸ್ ತಂಡದಿಂದ ಹೆಮ್ಮಾಡಿ ಸರಕಾರಿ ಪ್ರಾಥಮಿಕ ಶಾಲೆಗೆ ಪ್ರಿಂಟರ್ ಕೊಡುಗೆ
ಕುಂದಾಪುರ: ಬೆಂಗಳೂರಿನ ಇನ್ಫೋಬ್ಲಾಕ್ಸ್ ಒಎಸ್ಎಸ್ ತಂಡದ ಸಿಎಸ್ಆರ್ ಕಾರ್ಯಕ್ರಮದಡಿಯಲ್ಲಿ ಹೆಮ್ಮಾಡಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಪ್ರಿಂಟರ್ ಅನ್ನು ಬುಧವಾರ ಹಸ್ತಾಂತರಿಸಲಾಯಿತು.
ಇನ್ಫೋಬ್ಲಾಕ್ಸ್ ಇಂಡಿಯಾದ ಒಎಸ್ಎಸ್ ತಂಡದ ಪ್ರತಿನಿಧಿ ಮಹೇಶ್ ಪೂಜಾರಿ ಪ್ರಿಂಟರ್ ಅನ್ನು ಶಾಲಾ ಮುಖ್ಯೋಪಾಧ್ಯಾಯಿನಿಗೆ ಹಸ್ತಾಂತರಿಸಿದರು.
ಪ್ರಿಂಟರ್ ಸ್ವೀಕರಿಸಿ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮೀ, ಪರೀಕ್ಷಾ ತಯಾರಿಯ ಸಮಯದಲ್ಲಿ ಹಾಗೂ ಪೋಷಕರೊಂದಿಗೆ ದಿನನಿತ್ಯದ ಸಂಪರ್ಕಕ್ಕಾಗಿ ಮುದ್ರಣ ವ್ಯವಸ್ಥೆ ತುಂಬ ಸಹಾಯಕವಾಗಲಿದೆ ಎಂದ ಅವರು, ಪ್ರಿಂಟರ್ ಕೊಡುಗೆಯಾಗಿ ನೀಡಿದ ಸಂಸ್ಥೆಗೆ ಧನ್ಯವಾದ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಇನ್ಫೋಬ್ಲಾಕ್ಸ್ ಇಂಡಿಯಾದ ಒಎಸ್ಎಸ್ ತಂಡದ ಪ್ರತಿನಿಧಿ ಮಹೇಶ್ ಪೂಜಾರಿ, ಕಲಿತ ಶಾಲೆಗೆ ಕೊಡುಗೆ ನೀಡುವ ಅವಕಾಶ ದೊರೆತಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ. ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ವಸ್ತುಗಳನ್ನು ಕೊಡಲು ನಮ್ಮ ಸಂಸ್ಥೆ ಸದಾ ಪ್ರಯತ್ನಿಸುತ್ತದೆ ಎಂದರು.
ಈ ವೇಳೆ ಪ್ರಗತಿ ಮಹಿಳಾ ವಿವಿದೋದ್ದೇಶ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಕುಲಾಲ್, ಎಸ್ಡಿಎಂಸಿ ಅಧ್ಯಕ್ಷೆ ಭಾರತಿ ಆಚಾರ್ಯ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶ್ರೀಕಾಂತ ಹೆಮ್ಮಾಡಿ ಮತ್ತಿತರರು ಇದ್ದರು.













