ಉಡುಪಿ ಜಿಲ್ಲೆಯಲ್ಲಿ ಭತ್ತದ ಬೆಳೆ ಉತ್ತಮ – ಕೃಷಿ ಇಲಾಖೆ ಮಾಹಿತಿ

Spread the love

ಉಡುಪಿ ಜಿಲ್ಲೆಯಲ್ಲಿ ಭತ್ತದ ಬೆಳೆ ಉತ್ತಮ – ಕೃಷಿ ಇಲಾಖೆ ಮಾಹಿತಿ

ಉಡುಪಿ: ಜಿಲ್ಲೆಯಲ್ಲಿ ಇದುವರೆಗೆ 4100 ಮಿಮೀ ವಾಡಿಕೆ ಮಳೆ ಬರಬೇಕಾಗಿದ್ದು, ಪ್ರಸ್ತುತ 4400 ಮಿಮೀ ಮಳೆ ಯಾಗಿದ್ದು, ಜಿಲ್ಲೆಯಾದ್ಯಂತ ಬಹಳ ಉತ್ತಮ ಭತ್ತದ ಬೆಳೆ ಬಂದಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗುರುವಾರ, ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಜಿ.ಪಂ ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಈ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಈ ಬಾರಿ ಮಳೆ ಬಿಟ್ಟು ಬಿಟ್ಟು ಬಂದಿದ್ದು, ಭತ್ತದ ಬೆಳೆಗೆ ಪೂರಕವಾಗಿದೆ, 35470 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಫಸಲು ಉತ್ತಮವಾಗಿ ಬಂದಿದ್ದು, ಜಿಲ್ಲೆಯಲ್ಲಿ ರಸಗೊಬ್ಬರದ ಕೊರತೆ ಇಲ್ಲವಾಗಿದ್ದು, ಹಿಂಗಾರು ಬೆಳಗೆ ಅಗತ್ಯವಿರುವ ಭಿತ್ತನೆ ಬೀಜದ ದಾಸ್ತಾನು ಇದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ ಮಾಹಿತಿ ನೀಡಿದರು.

ಗ್ರಾಮ ಪಂಚಾಯತ್ಗಳ ವ್ಯಾಪ್ತಿಯಲ್ಲಿ ಬಿ.ಎಸ್.ಎನ್.ಎಲ್ ಸೇರಿದಂತೆ ಸುಮಾರು 500 ಮೊಬೈಲ್ ಟವರ್ಗಳಿದ್ದು, ಎಲ್ಲಾ ಟವರ್ಗಳಿಂದ ನಿಗಧಿತ ತೆರಿಗೆಯನ್ನು ವಸೂಲಿ ಮಾಡುವಂತೆ ಸೂಚಿಸಿದ ಅಧ್ಯಕ್ಷ ದಿನಕರ ಬಾಬು, ಗ್ರಾಮ ಪಂಚಾಯತ್ಗಳ ತೆರಿಗೆ ಸಂಗ್ರಹದ ಕುರಿತು ಪಂಚತಂತ್ರ ತಂತ್ರಾಂಶದ ಮೂಲಕವೇ ದಾಖಲು ಮಾಡುವಂತೆ ಸೂಚಿಸಿದರು.

ಕುಡಿಯುವ ನೀರು ಯೋಜನೆ ಕುರಿತು ಕೈಗೊಳ್ಳಲಾಗುವ ಕಾಮಗಾರಿಗಳನ್ನು ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಮತ್ತು ಕಾಲು ಸಂಕಗಳ ಕಾಮಗಾರಿಗಳನ್ನು ಶೀಘ್ರದಲ್ಲಿ ಮುಗಿಸುವಂತೆ ಮತ್ತು ಬೆಳ್ಮಣ್ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ಅಪಘಾತ ತಡೆಗೋಡೆಗಳನ್ನು ಆದ್ಯತೆಯ ಮೇಲೆ ನಿರ್ಮಿಸುವಂತೆ ಅಧ್ಯಕ್ಷರು ಹೇಳಿದರು.

ಜಿಲ್ಲೆಯ ಶಾಲಾ ಮಕ್ಕಳಿಗೆ ಸಮವಸ್ತ್ರ ಮತ್ತು ಪುಸ್ತಕಗಳನ್ನು ಸಂಪೂರ್ಣವಾಗಿ ವಿತರಿಸಲಾಗಿದ್ದು, ಶೂ ಖರೀದಿ ಮತ್ತು ವಿತರಣೆ ಕಾರ್ಯ ಎಸ್.ಡಿ.ಎಂ.ಸಿ ಮೂಲಕ ಪ್ರಗತಿಯಲ್ಲಿದೆ ಎಂದು ಡಿಡಿಪಿಐ ಶೇಷಶಯನ ಕಾರಿಂಜ ಮಾಹಿತಿ ನೀಡಿದರು.

ಮೀನುಗಾರರ ಆಗಸ್ಟ್ ಮಾಹೆಯ ಡೀಸೆಲ್ ಸಬ್ಸಿಡಿ ಮೊತ್ತ ಬಂದಿದ್ದು, 10 ದಿನಗಳಲ್ಲಿ ಫಲಾನುಭವಿಗಳ ಖಾತೆಗೆ ಜಮೆ ಆಗಲಿದೆ ಎಂದು ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕ ಪಾಶ್ರ್ವನಾಥ್ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 1,050 ಪಂಪ್ ಸೆಟ್ಗಳಿಗೆ ವಿದ್ಯುತ್ ಒದಗಿಸಲಾಗಿದೆ ಮತ್ತು ಸೌಭಾಗ್ಯ ಯೋಜನೆಯಡಿ 1,400 ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ ಎಂದು ಮೆಸ್ಕಾಂ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.

ಹಣ್ಣಿನ ಸಸಿಗಳ ವಿತರಣೆಯಲ್ಲಿ 13,25,000 ಸಸಿ ವಿತರಣೆಯ ಗುರಿ ಹೊಂದಿದ್ದು, ಅದರಲ್ಲಿ 10,24,000 ಸಸಿಗಳನ್ನು ವಿತರಣೆ ಮಾಡಿ ಶೇಕಡಾ 77 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕಿ ಭುವನೇಶ್ವರಿ ಸಭೆಗೆ ತಿಳಿಸಿದರು.

ಸಸಿ ಬೆಳೆಸುವ ಮತ್ತು ನೆಡು ತೋಪು ನೆಡುವ ಕಾರ್ಯದಲ್ಲಿ ಶೇಕಡಾ 100% ರಷ್ಟು ಸಾಧನೆ ಮಾಡಲಾಗಿದೆ ಮತ್ತು ತಾಲೂಕು ಮಟ್ಟದಲ್ಲಿ ಫಲಾನುಭವಿಗಳ ಆಯ್ಕೆ ನಡೆದಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಲಸಿಕಾ ಕಾರ್ಯಕ್ರಮದಡಿ ಪೆಂಟಾವೇಲೆಂಟ್ ಮತ್ತು ಪೋಲಿಯೋ ಲಸಿಕೆಯಲ್ಲಿ 96% ಮತ್ತು ಬಿ.ಸಿ.ಜಿ ಮತ್ತು ದಡಾರ ಲಸಿಕೆಯಲ್ಲಿ 97% ಸಾಧನೆಯನ್ನು ಮಾಡಲಾಗಿದೆ ಎಂದು ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ಎಂ.ಜಿ.ರಾಮ ಸಭೆಗೆ ತಿಳಿಸಿದರು.

ಕಾಲುಬಾಯಿ ರೋಗ ತಡೆಯಲು ಜಾನುವಾರುಗಳಿಗೆ 16 ನೇ ಸುತ್ತಿನ ಲಸಿಕೆ ಆರಂಭಿಸಲಾಗುವುದು ಎಂದು ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ. ಸರ್ವೋತ್ತಮ ಉಡುಪ ಮಾಹಿತಿ ನೀಡಿದರು.

ಸಕಾಲ ಅರ್ಜಿ ಅಂಗೀಕಾರ ಮತ್ತು ವಿತರಣೆಯನ್ನು ಕಡ್ಡಾಯವಾಗಿ ಆನ್ ಲೈನ್ ಮೂಲಕವೇ ಮಾಡಬೇಕು. ಶೂನ್ಯ ಫಲಿತಾಂಶ ದಾಖಲಿಸಿದ ಜಿಲ್ಲೆಯಲ್ಲಿ 98 ಗ್ರಾಮ ಪಂಚಾಯತ್ಗಳಿಗೆ ಈಗಾಗಲೇ ಈ ಬಗ್ಗೆ ನೋಟಿಸ್ ನೀಡಲಾಗಿದೆ ಎಂದು ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್ ರಾವ್ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ.ಕೆ.ಶೆಟ್ಟಿ, ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.


Spread the love