ಉಡುಪಿ: ದೇವಾಲಯಗಳು ದೇವರ ಅಸ್ತಿತ್ವದ ಸ್ಥಳಗಳಾಗಿವೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.
ಅವರು ಗುರುವಾರ ಉಚ್ಚಿಲ ಸೇಕ್ರೆಡ್ ಹಾರ್ಟ್ ಚರ್ಚ್ ಇದರ ನೂತನ ಕಟ್ಟಡದ ಉದ್ಘಾಟನೆ ಮತ್ತು ಆಶೀರ್ವಚನ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಭಾರತೀಯ ಸಂಸ್ಕøತಿಯಲ್ಲಿ ದೇವಾಲಯಗಳಿಗೆ ವಿಶೇಷ ಅರ್ಥವನ್ನು ಕಲ್ಪಿಸಲಾಗಿದ್ದು, ದೇವಾಲಯಗಳು ಮನುಷ್ಯ ಮತ್ತು ದೇವರ ನಡುವೆ ಸಂಬಂಧವನ್ನು ಬೆಸೆಯುವ ಕೊಂಡಿಗಳಾಗಿವೆ. ದೇವಾಲಯಗಳು ನಮ್ಮ ಮನಸ್ಸಿಗೆ ಆಧ್ಯಾತ್ಮಿಕ ಸಂತೋಷದೊಂದಿಗೆ ದೇವರ ಕೃಪಾವರಗಳನ್ನು ಪಡೆಯುವ ಪುಣ್ಯಸ್ಥಳಗಳೂ ಕೂಡ ಆಗಿವೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ವಿನಯ ಕುಮಾರ್ ಸೊರಕೆ ಮಾತನಾಡಿ ಕ್ರೈಸ್ತ ಸಮುದಾಯ ತಮ್ಮ ಧಾರ್ಮಿಕ ಅಗತ್ಯತೆಗಳಿಗೆ ದೇವಾಲಯಗಳನ್ನು ನಿರ್ಮಿಸುವುದರೊಂದಿಗೆ ಶಿಕ್ಷಣ ಮತ್ತು ಆರೋಗ್ಯಕ್ಕೆ ಅತಿ ಹೆಚ್ಚಿನ ಕೊಡುಗೆ ನೀಡಿದ್ದು, ಇದರಿಂದ ಸಮಾಜದಲ್ಲಿ ವಿದ್ಯೆ ಹಾಗೂ ಆರೋಗ್ಯದ ಬೆಳಕನ್ನು ಚೆಲ್ಲುತ್ತಾ ಬಂದಿದ್ದಾರೆ. ಸಮಾಜವು ಸುಶಿಕ್ಷಿತಗೊಳ್ಳುವಲ್ಲಿ ಕ್ರೈಸ್ತ ಸಮುದಾಯದ ಪಾತ್ರ ಮಹತ್ವವಾದದು ಎಂದರು.
ನೂತನ ಚರ್ಚನ್ನು ರಿಬ್ಬನ್ ಕತ್ತರಿಸುವುದರ ಮೂಲಕ ಬರೈಲಿ ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷ ಡಾ ಎಂಟನಿ ಫೆರ್ನಾಂಡಿಸ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಚರ್ಚ್ ನಿರ್ಮಾಣಕ್ಕ ಸಹಕರಿಸಿದ ದಾನಿಗಳನ್ನು, ಪ್ರಾಯೋಜಕರನ್ನು, ಚರ್ಚಿನ ಪ್ರಸ್ತುತ ಹಾಗೂ ಹಿಂದಿನ ಧರ್ಮಗುರುಳನ್ನು, ಚರ್ಚಿನಿಂದ ಇತರ ಕಡೆ ಸೇವೆ ನೀಡುತ್ತಿರುವ ಧರ್ಮಗುರುಗಳನ್ನು ಧರ್ಮಭಗಿನಿಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಗುರುದೀಕ್ಷೆಯ ಬೆಳ್ಳಿ ಹಬ್ಬವನ್ನು ಆಚರಿಸುತ್ತಿರುವ ವಂ ಡೆನಿಸ್ ಡೆಸಾ ಹಾಗೂ ವಂ ಲೆಸ್ಲಿ ಡಿಸೋಜಾರನ್ನು ಕೂಡ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕೊಲ್ಕತ್ತಾದ ಬರೈಪುರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ ಸಾಲ್ವದೊರ್ ಲೋಬೊ, ಧರ್ಮಪ್ರಾಂತ್ಯದ ಶೇಷ್ಟ ಗುರು ಮೊನ್ಞಿಂಜೊರ್ ಬ್ಯಾಪ್ಟಿಸ್ ಮಿನೇಜಸ್, ಉಡುಪಿ ವಲಯ ಪ್ರಧಾನ ಧರ್ಮಗುರು ವಂ ಫ್ರೆಡ್ ಮಸ್ಕರೇನ್ಹಸ್, ಉಚ್ಚಿಲ ಮಹಾಲಕ್ಷ್ಮೀ ದೇವಳದ ಪ್ರಧಾನ ಅರ್ಚಕರಾದ ವೇದಮೂರ್ತಿ ಕೆ ವಿ ರಾಘವೇಂದ್ರ ಉಪಾಧ್ಯ, ಸೈಯ್ಯದ್ ಅರಬಿ ಮಸೀದಿ ಉಚ್ಚಿಲ ಇದರ ಜನಾಬ್ ಅಬ್ದುಲ್ ಹಕೀಂ ಮುಸ್ಲಿಯಾರ್, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ದಕ ಮೊಗವೀರ ಮಹಾಜನ ಸಂಘ ಉಚ್ಚಿಲ ಇದರ ಪ್ರಧಾನ ಕಾರ್ಯದರ್ಶಿ ಸುಧಾಕರ್ ಕರ್ಕೇರಾ, ಚರ್ಚಿನ ಧರ್ಮಗುರು ವಂ ಲಾರೆನ್ಸ್ ರೊಡ್ರಿಗಸ್ ಉಪಸ್ಥಿತರಿದ್ದರು.
ಚರ್ಚ್ ಪಾಲನ ಸಮಿತಿಯ ಉಪಾಧ್ಯಕ್ಷೆ ಶಾಲೆಟ್ ಫುರ್ಟಾಡೊ ಸ್ವಾಗತಿಸಿ ಕಾರ್ಯದರ್ಶಿ ವಿನಯ್ ಕ್ವಾಡ್ರಸ್ ವಂದಿಸಿದರು. ವಂ ಡೆನಿಸ್ ಡೆಸಾ ಕಾರ್ಯಕ್ರಮ ನಿರೂಪಿಸಿದರು.














