ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಬಂಧನಕ್ಕೆ ಆಗ್ರಹಿಸಿ ಮಂಗಳೂರಿನ ರಾಜಾಜಿ ಪಾರ್ಕ್ ಬಳಿ ಕಾಂಗ್ರೆಸ್‌ ಪ್ರತಿಭಟನೆ

Spread the love

ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಬಂಧನಕ್ಕೆ ಆಗ್ರಹಿಸಿ ಮಂಗಳೂರಿನ ರಾಜಾಜಿ ಪಾರ್ಕ್ ಬಳಿ ಕಾಂಗ್ರೆಸ್‌ ಪ್ರತಿಭಟನೆ

ಮಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಜನಸೇವೆ ಮಾಡಿದವರಿಗೆ ಮನ್ನಣೆ ಸಿಗುತ್ತದೆ. ಆದರೆ, ಬಿಜೆಪಿ ದ್ವೇಷ ಭಾಷಣ ಮಾಡುವವರಿಗೆ ಮಣೆ ಹಾಕುತ್ತದೆ. ಈ ಕಾರಣದಿಂದಾಗಿಯೇ ಯಶ್ ಪಾಲ್ ರಂತಹ ತಿಳಿಗೇಡಿಗಳಿಗೂ ಟಿಕೆಟ್ ಸಿಗುತ್ತದೆ. ರಾಹುಲ್ ಗಾಂಧಿ ಅವರನ್ನು ಟೀಕಿಸಿದ ಯಶ್ ಪಾಲ್ ಸುವರ್ಣ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ, ಬಂಧಿಸಬೇಕು ಮತ್ತು ಅವರ ಶಾಸಕತ್ವ ರದ್ದುಪಡಿಸಬೇಕು ಎಂದು ಕಾಂಗ್ರೆಸ್ ಮುಖಂಡ ರಮಾನಾಥ ರೈ ಆಗ್ರಹಿಸಿದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಉಡುಪಿಯ ಶಾಸಕ ಯಶ್ ಪಾಲ್‌ ಸುವರ್ಣ ನೀಡಿರುವ ಹೇಳಿಕೆ ಖಂಡಿಸಿ ಕಾಂಗ್ರೆಸ್‌ ಜಿಲ್ಲಾ ಸಮಿತಿ ವತಿಯಿಂದ ಶನಿವಾರ ಇಲ್ಲಿನ ರಾಜಾಜಿ ಪಾರ್ಕ್‌ನ ಮಹಾತ್ಮ ಗಾಂಧಿ ಪ್ರತಿಮೆ ಎದುರು ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿಸಿ ರಾಹುಲ್ ಗಾಂಧಿ ಪ್ರತಿಭಟನೆ ನಡೆಸಿದಾಗ ಅವರನ್ನು ದೇಶದ್ರೋಹಿ ಎಂದು ಬಿಂಬಿಸುವ ಪ್ರಯತ್ನ ನಡೆಯಿತು. ಆದರೆ, ನನ್ನ ಅಭಿಪ್ರಾಯದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿಸಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ಬೆಂಬಲಿಸದವರು ದೇಶದ್ರೋಹಿಗಳು ಎಂದರು.

ಕಾಂಗ್ರೆಸ್‌ ಮುಖಂಡ ಎಂ.ಜಿ. ಹೆಗಡೆ ಮಾತನಾಡಿ, ‘ಸೋನಿಯಾ ಗಾಂಧಿ ಅವರನ್ನು ಟೀಕಿಸಿದಾಗ, ಅನೇಕ ಹೋರಾಟಗಾರರ ತಾಯಂದಿರು, ಅಕ್ಕ-ತಂಗಿಯರನ್ನು ಫೇಸ್ ಬುಕ್ ಗೋಡೆಗೆ ತಂದು ಟೀಕಿಸಿ, ಚಾರಿತ್ರ್ಯ ಹರಣ ಮಾಡಿದಾಗ ಮೌನ ವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಈಗ ತಮ್ಮ ತಾಯಿ ಟೀಕಿಸಿದ್ದು ನೋವಾಯಿತೆಂದು ನಡು ರಾತ್ರಿ ವಿಡಿಯೊ ಮಾಡಿ ಹಾಕುತ್ತಾರೆ. ಹಿಂದೆ ನಿಮ್ಮದೇ ಪಕ್ಷದವರು ಮಹಿಳೆಯರನ್ನು ಟೀಕಿಸಿದಾಗ ವಿಡಿಯೊ ಮಾಡಬೇಕು ಎಂದು ಅನ್ನಿಸಿರಲಿಲ್ಲವೇ ಎಂದು ಪ್ರಶ್ನಿಸಿದರು.

ಯಶ್ ಪಾಲ್ ಸುವರ್ಣ ಪ್ರತಿಕೃತಿಯನ್ನು ರಸ್ತೆ ನಡುವೆ ತಂದಿಟ್ಟು ದಹನ ಮಾಡಲಾಯಿತು. ಯಶ್ ಪಾಲ್ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ ಕುಮಾರ್, ಮುಖಂಡರಾದ ಜೆ.ಆ‌ರ್. ಲೋಬೊ, ಮಿಥುನ್ ರೈ, ಇನಾಯತ್ ಅಲಿ, ಪದ್ಮರಾಜ ಪೂಜಾರಿ, ಶಾಲೆಟ್ ಪಿಂಟೊ, ಅಪ್ಪಿ ಹಾಜರಿದ್ದರು.


Spread the love
Subscribe
Notify of

0 Comments