ಉಡುಪಿ: ಸ್ನೇಹಿತರಿಂದಲೇ ವ್ಯಕ್ತಿಯ ಬರ್ಬರ ಕೊಲೆ; ಮೂವರು ಆರೋಪಿಗಳ ಬಂಧನ

Spread the love

ಉಡುಪಿ: ಸ್ನೇಹಿತರಿಂದಲೇ ವ್ಯಕ್ತಿಯ ಬರ್ಬರ ಕೊಲೆ; ಮೂವರು ಆರೋಪಿಗಳ ಬಂಧನ

ಉಡುಪಿ: ಆಡಿಯೋವನ್ನು ವೈರಲ್ ಮಾಡಿದ ಕಾರಣಕ್ಕಾಗಿ ಸ್ನೇಹಿತರೇ ಸೇರಿ ವ್ಯಕ್ತಿಯೊಬ್ಬರನ್ನು ಮನೆಗೆ ನುಗ್ಗಿ ಬರ್ಬರವಾಗಿ ಹತ್ಯೆಗೈದ ಘಟನೆ ಉಡುಪಿ ತಾಲೂಕು ಪುತ್ತೂರು ಗ್ರಾಮದ ಸುಬ್ರಮಣ್ಯನಗರ 9ನೇ ಅಡ್ಡರಸ್ತೆಯಲ್ಲಿ ಆ.12ರಂದು ರಾತ್ರಿ 11:30ರ ಸುಮಾರಿಗೆ ನಡೆದಿದೆ.

ವಿನಯ್ ದೇವಾಡಿಗ

ಕೊಲೆಗೀಡಾದ ವ್ಯಕ್ತಿಯನ್ನು ಸ್ಥಳೀಯ ನಿವಾಸಿ ವಿನಯ್ ದೇವಾಡಿಗ (40) ಎಂದು ಗುರುತಿಸಲಾಗಿದೆ.

ಕೊಲೆ ಆರೋಪಿಗಳಾದ ಬ್ರಹ್ಮಾವರ ಕೊಕ್ಕರ್ಣೆಯ ಗಾಂಧಿನಗರ ನಿವಾಸಿಗಳಾದ ಅಜಿತ್(28), ಅಕ್ಷೇಂದ್ರ (34) ಹಾಗೂ ಕೊಕ್ಕರ್ಣೆ ಬೆನಗಲ್ ನಿವಾಸಿ ಪ್ರದೀಪ್ ಆಚಾರ್ಯ ಎಂಬವರು ಪೊಲೀಸರಿಗೆ ಶರಣಾಗಿದ್ದು ಅವರನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಆರೋಪಿಗಳು

ಪೋಲಿಸ್ ಮೂಲಗಳ ಪ್ರಕಾರ ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದ ವಿನಯ್ ದೇವಾಡಿಗ, ಮಂಗಳವಾರ ವೈಯಕ್ತಿಕ ಕೆಲಸದ ನಿಮಿತ್ತ ಉಡುಪಿಗೆ ಹೋಗಿ ಸಂಜೆ 6 ಗಂಟೆಗೆ ಮನೆಗೆ ಬಂದು ಕೋಣೆಯಲ್ಲಿ ಮಲಗಿದ್ದರು ಎನ್ನಲಾಗಿದೆ.

ರಾತ್ರಿ ಮೂವರು ಆರೋಪಿಗಳು ಮನೆಯ ಒಳಗೆ ನುಗ್ಗಿ ಮನೆಯ ಎಲ್ಲಾ ಕಡೆಗಳಲ್ಲಿ ವಿನಯ್ ಗಾಗಿ ಹುಡುಕಾಟ ನಡೆಸಿದ್ದರು. ಈ ವೇಳೆ ಕೋಣೆಯಲ್ಲಿದ್ದ ವಿನಯ್ ಶಬ್ದದಿಂದ ಎಚ್ಚರಗೊಂಡಾಗ ಆರೋಪಿಗಳು ವಿನಯ್ ಬಳಿ ಇದ್ದ ಮೊಬೈಲ್ ನ್ನು ಕಿತ್ತುಕೊಳ್ಳಲು ಪ್ರಯತ್ನಪಟ್ಟರು. ನಂತರ ಅಜಿತ್, ವಿನಯ್ ನನ್ನು ತಪ್ಪಿಸಿಕೊಳ್ಳದಂತೆ ಗಟ್ಟಿಯಾಗಿ ಹಿಡಿದುಕೊಂಡ. ಆಕ್ಷೇಂದ್ರ ಹಾಗೂ ಪ್ರದೀಪ್ ಮಚ್ಚು ಹಾಗೂ ಚಾಕುವಿನಿಂದ ವಿನಯ್ ದೇವಾಡಿಗ ಅವರ ತಲೆಯನ್ನು ಕಡಿದು, ಕೊಲೆ ಮಾಡಿದ್ದಾರೆ. ಬಳಿಕ ಆರೋಪಿಗಳು ಸ್ಕೂಟರ್ ನಲ್ಲಿ ಪರಾರಿಯಾದರು ಎಂದು ದೂರಲಾಗಿದೆ.

ಆರೋಪಿ ಆಕ್ಷೇಂದ್ರನಿಗೆ ಜೀವನ್ ಎಂಬಾತನು ಬೈದಿರುವ ಆಡಿಯೋವನ್ನು ವಿನಯ್ ದೇವಾಡಿಗ ಬೇರೆಯವರಿಗೆ ಶೇರ್ ಮಾಡಿ ವೈರಲ್ ಮಾಡಿರುವುದೇ ಈ ಕೃತ್ಯಕ್ಕೆ ಕಾರಣ ಎನ್ನಲಾಗಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love
Subscribe
Notify of

0 Comments
Inline Feedbacks
View all comments