ಎಣ್ಣೆ ಸಿಕ್ತು ಅಣ್ಣಾ! ಜಿಲ್ಲೆಯಲ್ಲಿ ಮದ್ಯ ಮಾರಾಟ ಆರಂಭ- ಸಾಮಾಜಿಕ ಅಂತರ ಕಾಯ್ದುಕೊಂಡು ಎಣ್ಣೆ ಖರೀದಿಸಿದ ಮದ್ಯಪ್ರಿಯರು
ಉಡುಪಿ: ಸುಮಾರು ಐವತ್ತು ದಿನಗಳಿಂದ ಮದ್ಯದ ಘಾಟಿನ ಸುಳಿವಿಲ್ಲದೆ ಬರಗೆಟ್ಟವರಂತಾಗಿರುವ ಎಣ್ಣೆಪ್ರಿಯರು ‘ಅಮಲು ತೈಲ’ಕ್ಕಾಗಿ ಬೆಳಿಗ್ಗಿನಿಂದಲೇ ಉಡುಪಿಯ ವಿವಿಧ ವೈನ್ ಶಾಪ್ ಗಳಲ್ಲಿ ಸಾಲು ಸಾಲಾಗಿ ನಿಂತಿದ್ದಾರೆ.

ಕೊರೊನಾ ವೈರಸ್ ಹತೋಟಿಗೆ ತರುವ ನಿಟ್ಟಿನಲ್ಲಿ ಲಾಕ್ಡೌನ್ ಘೋಷಣೆಯಾದ ಬಳಿಕ ಮುಚ್ಚಿದ್ದ ಬಾರ್ಗಳು 50 ದಿನಗಳ ಬಳಿಕ ಮತ್ತೆ ಓಪನ್ ಆಗುತ್ತಿವೆ. ಬಾರ್ ತೆರೆಯಬೇಕು, ಪಾರ್ಸೆಲ್ ವ್ಯವಸ್ಥೆ ಮಾಡಬೇಕು ಎಂಬ ಕೂಗು ನಿತ್ಯದ್ದಾಗಿತ್ತು. ಜನರ ಒತ್ತಡಕ್ಕೆ ಮಣಿದ ಸರಕಾರ ಸೋಮವಾರದಿಂದ ಮದ್ಯ ಮಾರಾಟಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.
ರಾಜ್ಯ ಸರಕಾರ ಬೆಳಿಗ್ಗೆ 9 ಗಂಟೆಯಿಂದ 7 ರವರೆಗೆ ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ನೀಡಿದರೆ ಉಡುಪಿ ಜಿಲ್ಲೆಯಲ್ಲಿ ಅದನ್ನು ಬೆಳಿಗ್ಗೆ 9ರಿಂದ 1 ಗಂಟಗೆ ಸೀಮಿತಿಗೊಳಿಸಿದೆ. ಆದ್ದರಿಂದ ಬೆಳಿಗ್ಗೆ 5 ಗಂಟೆಯಿಂದಲೇ ಜನರು ಮದ್ಯದಂಗಡಿಗಳ ಮುಂದೆ ಕ್ಯೂ ನಿಂತ ದೃಶ್ಯ ಸಾಮಾನ್ಯವಾಗಿತ್ತು.

ಒಬ್ಬರಿಂದ ಒಬ್ಬರಿಗೆ ಕನಿಷ್ಠ ಆರು ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಮತ್ತು ಐದಕ್ಕಿಂತ ಹೆಚ್ಚು ಜನರು ಸ್ಥಳದಲ್ಲಿ ಇರುವಂತಿಲ್ಲ ಸರಕಾರದ ಆದೇಶವನ್ನು ಜನರೂ ಕೂಡ ಪಾಲನೆ ಮಾಡುತ್ತಿದ್ದು ಮದ್ಯವನ್ನು ಪಾರ್ಸೆಲ್ ಕೊಂಡಯ್ಯಲು ಮಾತ್ರ ಅವಕಾಶ ನೀಡಲಾಗಿದೆ.
ಉಡುಪಿಯ ಕೆಲವು ವೈನ್ ಶಾಪ್ ಗಳಲ್ಲಿ ಪಾನ ಪ್ರಿಯರು ಹೆಚ್ಚು ಜಮಾವಣೆಯಾಗುತ್ತಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಎಚ್ಚರಿಕೆ ನೀಡಿದರು.













