ಕಾಪು ವೆಲ್ನೆಸ್ ಸೆಂಟರ್’ನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ: ಆರೋಪಿ ಬಂಧನ
ಉಡುಪಿ: ಕಾಪು ತಾಲೂಕಿನ ಮೂಳೂರು ಗ್ರಾಮದಲ್ಲಿರುವ ‘ಸುನಂದಾ ವೆಲ್ನೆಸ್ ಸೆಂಟರ್’ ನಲ್ಲಿ ಕೌನ್ಸಿಲಿಂಗ್ಗೆ ಬಂದಿದ್ದ ಮಹಿಳೆಗೆ ದೈಹಿಕ ಸ್ಪರ್ಶ ಮಾಡಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ, ಆರೋಪಿ ನಿರಂಜನ ಶೇಖರ ಶೆಟ್ಟಿ (52) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಡಾ. ಹರ್ಷ ಪ್ರಿಯಂವದಾ ಐಪಿಎಸ್ (ಸಹಾಯಕ ಪೊಲೀಸ್ ಅಧೀಕ್ಷಕರು, ಕಾರ್ಕಳ ಉಪ ವಿಭಾಗ) ಮತ್ತು ಅಜ್ಮತ್ ಅಲಿ (ಪೋಲೀಸ್ ವೃತ್ತ ನಿರೀಕ್ಷಕರು, ಕಾಪು ವೃತ್ತ) ಅವರ ಮಾರ್ಗದರ್ಶನದಲ್ಲಿ, ಕಾಪು ಪೊಲೀಸ್ ಠಾಣೆಯ ಪಿ.ಎಸ್.ಐ ಶುಭಕರ ಹಾಗೂ ತನಿಖಾಧಿಕಾರಿ ಉಪ ನಿರೀಕ್ಷಕರು ಮತ್ತು ಸಿಬ್ಬಂದಿ ಈ ಪ್ರಕರಣದ ಪತ್ತೆ ಕಾರ್ಯ ನಡೆಸಿದ್ದಾರೆ.
ದಾಂಪತ್ಯ ಸಮಸ್ಯೆಗಳ ಹಿನ್ನೆಲೆಯಲ್ಲಿ, ಸಂತ್ರಸ್ಥ ಮಹಿಳೆ ಕೌನ್ಸಿಲಿಂಗ್ಗಾಗಿ ಕಂಕಣಗುತ್ತು ಕಂಪೌಂಡ್ನಲ್ಲಿರುವ ವೆಲ್ನೆಸ್ ಸೆಂಟರ್ಗೆ ಭೇಟಿ ನೀಡಿದ್ದರು. ಈ ವೇಳೆ ಕೌನ್ಸಿಲರ್ ಆಗಿದ್ದ ನಿರಂಜನ ಶೇಖರ ಶೆಟ್ಟಿ ಅವರು ಕೌನ್ಸಿಲಿಂಗ್ ಹೆಸರಿನಲ್ಲಿ ದೈಹಿಕ ಸ್ಪರ್ಶ ಮಾಡಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ದೂರು ದಾಖಲಾಗಿದೆ.
ಘಟನೆ ಬಳಿಕ ಮಹಿಳೆ ಕಾಪು ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ನೀಡಿದ ಹಿನ್ನೆಲೆಯಲ್ಲಿ, ಅಪರಾಧ ಸಂಖ್ಯೆ 151/2025, ಕಲಂ 74, 75(1), 75(2), 79 BNS ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಪೊಲೀಸರು ಆರೋಪಿ ನಿರಂಜನ ಶೇಖರ ಶೆಟ್ಟಿಯನ್ನು ದಸ್ತಗಿರಿ ಮಾಡಿದ್ದು, ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.
ಪತ್ತೆ ಕಾರ್ಯದಲ್ಲಿ ಪಿ.ಎಸ್.ಐ ಶುಭಕರ (ತನಿಖೆ), ಕಾಪು ಪೊಲೀಸ್ ಠಾಣೆ, ಹೆಚ್.ಸಿ 28 ನಾರಾಯಣ, ಪಿ.ಸಿ 2494 ರಘು, ತನಿಖಾ ಸಹಾಯಕ ಹೆಚ್.ಸಿ 1166 ವಿಕ್ರಮ್, ಪಿ.ಸಿ 2687 ಸ್ವಾಮಿ ಡಿ.ಎಸ್ ಭಾಗವಹಿಸಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.













