ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ಹೆಸರು ತೆಗೆದಿರುವುದು ದೇಶಕ್ಕೆ ಮಾಡಿದ ಅವಮಾನ : ಐವನ್ ಡಿಸೋಜಾ
ಮಂಗಳೂರು: ಕೇಂದ್ರ ಬಿಜೆಪಿ ಸರ್ಕಾರವು ನರೇಗ ಯೋಜನೆಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹೆಸರನ್ನು ತೆಗೆದುಹಾಕಿರುವುದು ಇಡೀ ದೇಶಕ್ಕೆ ಮಾಡಿದ ದೊಡ್ಡ ಅಪಮಾನ. ಇದನ್ನು ವಿರೋಧಿಸಿ, ರಾಜ್ಯಕ್ಕೆ ಯಾರೇ ಕೇಂದ್ರ ಸಚಿವರು ಬಂದರೂ ಕಪ್ಪು ಬಾವುಟ ತೋರಿಸಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಳಮಟ್ಟದಿಂದ ಜನರ ಅಭಿವೃದ್ಧಿಗೆ ನೆರವಾದ ನರೇಗ ಯೋಜನೆಗೆ ತಿದ್ದುಪಡಿ ಮಾಡಿದ್ದಲ್ಲದೆ ಗಾಂಧೀಜಿ ಹೆಸರನ್ನೇ ತೆಗೆದು ಹಾಕಿರುವುದು ಒಕ್ಕೂಟ ವ್ಯವಸ್ಥೆಗೆ ವಿರುದ್ಧ. ಯೋಜನೆಗೆ ಮರಳಿ ಗಾಂಧೀಜಿ ಹೆಸರನ್ನಿಡಬೇಕು ಎಂದು ಆಗ್ರಹಿಸಿದರು.
ಕೇಂದ್ರ ಬಿಜೆಪಿ ಸರ್ಕಾರದ ದ್ವೇಷದ ರಾಜಕಾರಣಕ್ಕೆ ಸ್ಪಷ್ಟ ಉದಾಹರಣೆ ಇದು. ಈ ಮೂಲಕ ದೇಶದ 135 ಕೋಟಿ ಜನರಿಗೆ ಮಾಡಿದ ಅವಮಾನ ಮಾಡಿದ್ದಾರೆ. ನರೇಗ ಅಡಿಯಲ್ಲಿ ಹಿಂದೆ 100 ದಿನ ಇದ್ದ ಉದ್ಯೋಗದ ದಿನಗಳನ್ನು 25 ದಿನ ಏರಿಕೆ ಮಾಡಿದ್ದಕ್ಕೆ ಹೆಸರು ಬದಲಾವಣೆ ಮಾಡಬೇಕಾ ಎಂದು ಐವನ್ ಡಿಸೋಜ ಪ್ರಶ್ನಿಸಿದರು.
ಕೇಂದ್ರ ಸರ್ಕಾರ ಈ ಹಿಂದೆ ನರೇಗದ ಶೇ.50ರಷ್ಟು ಅನುದಾನ ಕಡಿತ ಮಾಡಿದಾಗಲೇ ಯೋಜನೆ ಮುಗಿಸಲು ಮುಂದಾಗಿತ್ತು. ಬಿಜೆಪಿ ಸರ್ಕಾರ ಬಡವರ ಪರ ಇಲ್ಲ. ಜಿಎಸ್‌ಟಿ ಹೆಸರಿನಲ್ಲಿ ರಾಜ್ಯದ ಎಲ್ಲ ಸಂಪನ್ಮೂಲಗಳನ್ನು ಕೇಂದ್ರಕ್ಕೆ ತೆಗೆದುಕೊಂಡು ಹೋಗುತ್ತಾರೆ. ಅದರ ಮೇಲೆ, ಈಗ ಯೋಜನೆಯ ಶೇ.40ರಷ್ಟು ಪಾಲನ್ನು ರಾಜ್ಯಗಳೇ ಭರಿಸಬೇಕು ಎನ್ನುವ ನಿಯಮ ಮಾಡಿದ್ದಾರೆ. ಇದು ದ್ವೇಷ ರಾಜಕಾರಣದ ಪರಮಾವಧಿ ಮಾತ್ರವಲ್ಲ, ಸಂವಿಧಾನದ ಶೇ.100 ದುರುಪಯೋಗ ಎಂದರು.













