ಕೌಶಲಾಭಿವೃದ್ಧಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ದ.ಕ. ಡಿಸಿ ಸೂಚನೆ
ಮಂಗಳೂರು: ಜಿಲ್ಲೆಯ ಕೌಶಲ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದ ವರದಿಯನ್ನು ಜಿಲ್ಲಾಧಿಕಾರಿ ದರ್ಶನ ಎಚ್.ವಿ. ಅಧ್ಯಕ್ಷತೆಯಲ್ಲಿ ನಡೆದ ದ.ಕ. ಜಿಲ್ಲಾ ಕೌಶಲ್ಯ ಮಿಷನ್ ಸಭೆಯಲ್ಲಿ ಮಂಡಿಸಲಾಯಿತು.
ಯೋಜನಾ ವರದಿಯ ನೋಡೆಲ್ ಅಧಿಕಾರಿಯೂ ಆಗಿರುವ ಉಪನ್ಯಾಸಕ ಹರೀಶ್ ಸಿ.ಪಿ. ಯೋಜನಾ ವರದಿಯನ್ನು ಸಭೆಗೆ ಮಂಡಿಸಿದರು.
ವರದಿಯನ್ನು ಜಿಲ್ಲೆಯ ಕೈಗಾರಿಕೆಗಳು, ಶಿಕ್ಷಣ ಸಂಸ್ಥೆಗಳು ವಿವಿಧ ಸರಕಾರಿ ಇಲಾಖೆಗಳು ಮತ್ತು ವಿದ್ಯಾರ್ಥಿಗಳಿಂದ ಸಂಗ್ರಹಿಸಲಾದ ದತ್ತಾಂಶವನ್ನು ಕ್ರೋಢೀಕರಿಸಿ ಸಿದ್ಧಪಡಿಸಲಾಗಿದ್ದು, ಜಿಲ್ಲೆಯ ಕೈಗಾರಿಕೆಗಳಿಗೆ ಭವಿಷ್ಯದಲ್ಲಿ ಬೇಕಿ ರುವ ಕೌಶಲಗಳ ಬೇಡಿಕೆ ಮತ್ತು ಜಿಲ್ಲೆಯ ಶಿಕ್ಷಣ ಸಂಸ್ಥೆಗಳಿಂದ ಪೂರೈಕೆ ಸರಪಳಿ ಕುರಿತು ಅಧ್ಯಯನ ಕೈಗೊಂಡು ವಿದ್ಯಾರ್ಥಿಗಳಿಗೆ ಪದವಿಯ ಅಂತಿಮ ಹಂತದಲ್ಲಿ ತಾವು ಓದುತ್ತಿರುವ ಸಂಸ್ಥೆಗಳ ಪ್ಲೇಸ್ಮೆಂಟ್ ಘಟಕಗಳ ಮೂಲಕ ವಿವಿಧ ಕಂಪನಿಗಳಿಗೆ ಆಯ್ಕೆಗೊಂಡ ಶೇ.ಅಂಕಿ-ಅಂಶಗಳು ಮತ್ತು ಸರಾಸರಿ ಸಂಬಳ ಮತ್ತು ವಿದ್ಯಾರ್ಥಿಗಳು ಬಯ ಸುವ ಅನೂಕೂಲತೆಗಳ ಸಹಿತ ವಿವಿಧ ಇಲಾಖೆಗಳ ಮೂಲಕ ಹಮ್ಮಿಕೊಂಡಿರುವ ಕೌಶಲಾಭಿವೃದ್ಧಿ ಯೋಜನೆಗಳು ಮತ್ತು ಫಲಾನುಭವಿಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು.
ವಿದ್ಯಾಸಂಸ್ಥೆಗಳಲ್ಲಿ ಶಿಕ್ಷಣ ಪಡೆದು ಹೊರಬರುತ್ತಿರುವ ವಿದ್ಯಾರ್ಥಿಗಳಲ್ಲಿ ಕಂಡು ಬರುತ್ತಿರುವ ಕೌಶಲದ ಕೊರತೆ ಮತ್ತು ಅದರ ಹಿಂದಿನ ಕಾರಣಗಳ ಬಗ್ಗೆ ಪರಾಮರ್ಶೆ ನಡೆಸಿ ಕೌಶಲ ಹೆಚ್ಚಿಸಲು ವಿವಿಧ ಇಲಾಖೆಗಳ ಸಹಯೋಗ ದಲ್ಲಿ ಜಾರಿಗೊಳಿಸಲಾದ ವಿವಿಧ ರಾಜ್ಯ ಮತ್ತು ಕೇಂದ್ರ ಸರಕಾರಗಳ ಪ್ರಾಯೋಜಿತ ಕೌಶಲ ಅಭಿವೃದ್ಧಿ ಯೋಜನೆ ಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಕ್ರಮವಹಿಸಲು ನಿರ್ದೇಶನ ಜಿಲ್ಲಾಧಿಕಾರಿ ನೀಡಿದರು.
ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ನಿಪುಣ ಯೋಜನೆಯ ಬಗ್ಗೆ ಕೈಗಾರಿಕೆಗಳ ಸಹಭಾಗಿತ್ವದಲ್ಲಿ ನೈಪುಣ್ಯತೆ ಮತ್ತು ಕೌಶಲತೆ ಹೆಚ್ಚಿಸಲು ವಿಫುಲ ಅವಕಾಶಗಳಿವೆ. ಈ ಬಗ್ಗೆ ಜಿಲ್ಲೆಯ ಕೈಗಾರಿಕೆಗಳು ಪಾಲುದಾರಿಕೆ ಹೊಂದಲು ಹೆಚ್ಚಿನ ಮಟ್ಟದ ಪ್ರಚಾರ ನೀಡಲು ಮತ್ತು ಕೈಗಾರಿಕಾ ಸಂಘಗಳ ಪ್ರತಿನಿಧಿಗಳನ್ನು ಒಳಗೊಂಡ ತಂಡ ರಚಿಸಲು ಮಾರ್ಗದರ್ಶನ ನೀಡಿದರು.
ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ ಜಯಲಕ್ಷ್ಮಿ, ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಪ್ರದೀಪ್ ಡಿಸೋಜ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗೋಕುಲ್‌ದಾಸ್ ನಾಯಕ್, ಜಿಪಂ ಯೋಜನಾ ನಿರ್ದೇಶಕ ಕೆ.ಇ. ಜಯರಾಂ, ಕೆಸಿಸಿಐ ಅಧ್ಯಕ್ಷ ಪಿ.ಬಿ. ಅಹ್ಮದ್ ಮುದಸ್ಸರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.













