ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಿಂದ ದೇಶದ ಭದ್ರತೆಗೆ ಅಪಾಯ ಒಡ್ಡುವ ಕೆಲಸ – ಕೃಷ್ಣ ಶೆಟ್ಟಿ ಬಜಗೋಳಿ
ಉಡುಪಿ: ರೆಸಾರ್ಟ್ ನಲ್ಲಿ ಯಾವುದೇ ದಾಖಲೆಗಳಿಲ್ಲದಿರುವ ಅಕ್ರಮ ವಿದೇಶಿ ವಲಸಿಗರಿಗೆ ಕೆಲಸ ನೀಡಿರುವ ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರು ದೇಶದ ಭದ್ರತೆಗೆ ಅಪಾಯ ಒಡ್ಡುವ ಕೆಲಸ ಮಾಡಿದ್ದು ಅವರನ್ನು ಕೂಡಲೇ ಪೊಲೀಸರು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸುವಂತೆ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಶೆಟ್ಟಿ ಬಜಗೋಳಿ ಆಗ್ರಹಿಸಿದ್ದಾರೆ.
ದೇಶಪ್ರೇಮದ, ದೇಶದ ಭದ್ರತೆಯ ಬಗ್ಗೆ ಅಕ್ರಮ ನುಸುಳುಕೋರರ ಬಗ್ಗೆ ಭಾಷಣ ಬಿಗಿಯುವ ಬಿಜೆಪಿ ನಾಯಕರು ತಮ್ಮ ಸಂಸ್ಥೆಗಳಲ್ಲಿ ಅಕ್ರಮ ವಲಸಿಗರಿಗೆ ಆಶ್ರಯ ನೀಡಿರುವುದು ಇವರ ಡೋಂಗಿ ದೇಶಪ್ರೇಮವನ್ನು ಸಾಬೀತುಪಡಿಸಿದೆ. ಯುವ ಮೋರ್ಚಾ ಅಧ್ಯಕ್ಷರು ಮಾತೆತ್ತಿದರೆ ಧರ್ಮ, ರಾಷ್ಟ್ರಪ್ರೇಮ ಎಂದು ಮಾಧ್ಯಮಗಳ ಮುಂದೆ ನಿಂತು ಬೊಬ್ಬೆ ಹಾಕುವವರು ತಮ್ಮದೇ ರೆಸಾರ್ಟ್ ನಲ್ಲಿ ಅಕ್ರಮ ನುಸುಳುಕೋರರಿಗೆ ಯಾವುದೇ ರೀತಿಯ ದಾಖಲೆಗಳನ್ನು ಪಡೆಯದೆ ಹೇಗೆ ಅವಕಾಶ ನೀಡಿದ್ದಾರೆ. ಇದರ ಹಿಂದೆ ಇರುವ ನೈಜ ಉದ್ದೇಶವೇನು ಎನ್ನುವುದು ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಬೇಕು.
ಇಂತಹ ಕೃತ್ಯ ಕಾಂಗ್ರೆಸ್ ಪಕ್ಷದ ರೆಸಾರ್ಟ್ ಅಥವ ಸಂಸ್ಥೆಗಳಲ್ಲಿ ನಡೆದಿದ್ದೇ ಆದರೆ ಬಿಜೆಪಿಯ ಸಚಿವೆ ಶೋಭಾ ಕರಂದ್ಲಾಜೆ, ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಶಾಸಕರಾದ ಸುನೀಲ್ ಕುಮಾರ್ ಯಶ್ಪಾಲ್ ಸುವರ್ಣ ಅವರು ಬೀದಿ ರಂಪ ಮಾಡಿ ಇಡೀ ಜಿಲ್ಲೆಯನ್ನೇ ಅಲ್ಲೋಲ ಕಲ್ಲೋಲ ಮಾಡುತ್ತಿದ್ದರು. ಆದರೆ ಅವರದ್ದೇ ಪಕ್ಷದ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿ ಇಂತಹ ಕೃತ್ಯ ಮಾಡಿದ್ದರೂ ಕೂಡ ಮಾತಿಲ್ಲದೆ ಮೌನಕ್ಕೆ ಶರಣಾಗಿದ್ದಾರೆ. ದೇಶಭಕ್ತಿಯ ಬಗ್ಗೆ ಬರೀ ಬುರುಡೆ ಬಿಡುವುದು ಬಿಜೆಪಿಗರ ಚಾಳಿ ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಬಿಜೆಪಿಯ ಶಾಸಕರ ಮೌನ ಧರ್ಮ ರಕ್ಷಣೆ, ದೇಶಪ್ರೇಮ ಇವೆಲ್ಲವೂ ಕೇವಲ ಅಧಿಕಾರ ಹಿಡಿಯಲು ಇವರಿಗೆ ಬೇಕಾಗಿರುವ ಮೆಟ್ಟಿಲುಗಳೇ ಹೊರತು ಬೇರೇನೂ ಅಲ್ಲ ಎನ್ನುವುದನ್ನು ಮತ್ತೆ ಸಾಬೀತುಪಡಿಸಿದೆ. ಉಡುಪಿ ಶಾಸಕರಾದ ಯಶ್ಪಾಲ್ ಸುವರ್ಣರಿಗೆ ನಿಜವಾದ ತಾಕತ್ತು ಇದ್ದರೆ ಮೊದಲು ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರನ್ನು ಅವರ ಸ್ಥಾನದಿಂದ ರಾಜೀನಾಮೆ ಕೊಡಿಸಿ ತನಿಖೆ ಎದುರಿಸಲು ತಿಳಿಸಲಿ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ವಲಸಿಗರು ಯಾರು, ಎಷ್ಟು ಸಮಯದಿಂದ ಇಲ್ಲಿ ವಾಸವಾಗಿದ್ದಾರೆ, ಇವರನ್ನು ಇಲ್ಲಿ ಕೆಲಸಕ್ಕೆ ಇಟ್ಟಿರುವ ಯುವ ಮೋರ್ಚಾ ಅಧ್ಯಕ್ಷರ ಉದ್ದೇಶ ಏನು ಹಾಗೂ ಇವರ ಹಿಂದೆ ಯಾರೆಲ್ಲ ಇದ್ದಾರೆ ಮತ್ತು ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರು ನಡೆಸುವ ರೆಸಾರ್ಟ್ ನಲ್ಲಿ ಯಾವೆಲ್ಲ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎನ್ನುವುದನ್ನು ಕೂಲಂಕುಶವಾಗಿ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.













