ತೆಂಕನಿಡಿಯೂರು: ಸರಕಾರದಿಂದ ವಸತಿ ನಿವೇಶನ ಪಡೆದು ಮನೆ ಕಟ್ಟುವವರಿಗೆ ಸಿಹಿಸುದ್ದಿ
ಉಡುಪಿ: ಕಳೆದ ಎರಡು ವರ್ಷಗಳಿಂದ ಸರಕಾರದ ವಸತಿ ನಿವೇಶನದಲ್ಲಿ ಮನೆ ಕಟ್ಟುವವರಿಗೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಆರಂಭಿಕ ಪ್ರಮಾಣಪತ್ರ ಪಡೆಯುವುದು ಕಡ್ಡಾಯವಾಗಿತ್ತು. ಇದರಿಂದ ಗ್ರಾಮೀಣ ಭಾಗದ ಜನರಿಗೆ ಬಹಳಷ್ಟು ತೊಂದರೆ ಆಗುತ್ತಿತ್ತು. ಹೀಗಾಗಿ ನಿಯಮವನ್ನು ಸರಳೀಕರಣಗೊಳಿಸಿ ಪಂಚಾಯತ್ ಮಟ್ಟದಲ್ಲಿಯೇ ಪ್ರಮಾಣ ಪತ್ರ ನೀಡಲು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸೂಚನೆ ನೀಡಿದ್ದಾರೆ ಎಂದು ತೆಂಕನಿಡಿಯೂರು ಗ್ರಾಪಂ ಉಪಾಧ್ಯಕ್ಷ, ಕಾಂಗ್ರೆಸ್ ಮುಖಂಡ ಪ್ರಖ್ಯಾತ್ ಶೆಟ್ಟಿ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮನೆ ಕಟ್ಟಲು ನಗರಾಭಿವೃದ್ಧಿ ಪ್ರಾಧಿಕಾರದಿಂದ ಆರಂಭಿಕ ಪ್ರಮಾಣಪತ್ರ ಪಡೆಯಬೇಕೆಂಬ ನಿಯಮವಿದ್ದರಿಂದ ಗ್ರಾಮೀಣ ಭಾಗದ ‘ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಇದನ್ನು ಮನಗಂಡ ಕಾಂಗ್ರೆಸ್ ಬೆಂಬಲಿತ ತೆಂಕನಿಡಿಯೂರು ಗ್ರಾಪಂ ಅಧ್ಯಕ್ಷರು, ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರು ತಾಪಂ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಿ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ಅವರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಪಂಚಾಯತ್ ಮಟ್ಟದಲ್ಲೇ ಆರಂಭಿಕ ಪ್ರಮಾಣ ಪತ್ರ ನೀಡಲು ನಿರ್ದೇಶನ ನೀಡಿದ್ದಾರೆ. ಇದರಿಂದ ಸರಕಾರಿ ನಿವೇಶನದಲ್ಲಿ ಮನೆ ಕಟ್ಟುವವರಿಗೆ ವರದಾನವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಸತೀಶ್ ನಾಯಕ್, ತೆಂಕನಿಡಿಯೂರು ಗ್ರಾ.ಪಂ.ಅಧ್ಯಕ್ಷೆ ಶೋಭಾ ಡಿ.ನಾಯಕ್, ಪ್ರ.ಕಾರ್ಯದರ್ಶಿ ರಾಜೇಶ್ ಕರ್ಕೇರ, ಸದಸ್ಯರಾದ ಶರತ್ ಶೆಟ್ಟಿ, ರವಿರಾಜ್, ವೆಂಕಟೇಶ್ ಕುಲಾಲ್ ಇದ್ದರು.












