ದ.ಕ. ಜಿಲ್ಲಾ ಖಾಝಿ ಅಲ್ವಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ನಿಧನ
ಮಂಗಳೂರು: ದ.ಕ. ಜಿಲ್ಲಾ ಖಾಝಿ ಅಲ್ಲಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್(78) ಇಂದು (ಜೂ.23) ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಕೆಲವು ಸಮಯದಿಂದ ಅನಾರೋಗಕ್ಕೀಡಾಗಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರಿಂದು ಕೊನೆಯುಸಿರೆಳೆದಿದ್ದಾರೆ.
ಮೃತರು ಪತ್ನಿ, ಮೂವರು ಪುತ್ರರು ಮತ್ತು ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
2010ರಲ್ಲಿ ದ.ಕ. ಜಿಲ್ಲಾ ಖಾಝಿಯಾಗಿ ಅಧಿಕಾರ ಸ್ವೀಕರಿಸಿದ್ದ ತ್ವಾಕಾ ಉಸ್ತಾದ್, ದ.ಕ. ಮತ್ತು ಕೇರಳ ರಾಜ್ಯದ ಸುಮಾರು 200ಕ್ಕೂ ಅಧಿಕ ಜಮಾಅತ್ ಗಳ ಖಾಝಿಯಾಗಿದ್ದರು. ಸಮಸ್ತ ಕಾಸರಗೋಡು ಜಿಲ್ಲಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಮಂಗಳೂರು ಕೇಂದ್ರ ಜುಮಾ ಮಸ್ಟಿದ್ ನಲ್ಲಿ ಮೃತದೇಹದ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಖಾಝಿಯವರ ಕುಟುಂಬದ ಸದಸ್ಯರ ಜೊತೆ ಚರ್ಚಿಸಿದ ಬಳಿಕ ದಫನ ಕಾರ್ಯದ ಸ್ಥಳ ನಿಗದಿಪಡಿಸಲಾಗುವುದು ಎಂದು ಕೇಂದ್ರ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ ತಿಳಿಸಿದ್ದಾರೆ.
ಮಂಗಳೂರಿನ ಖಾಝಿಯಾಗಿ ಸೇವೆ ಸಲ್ಲಿಸಿದ್ದ ಗೌರವಾನ್ವಿತ ಧಾರ್ಮಿಕ ನಾಯಕ ಅಲ್-ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರ ನಿಧನದ ಸುದ್ದಿ ತಿಳಿದು ಕರ್ನಾಟಕ ರಾಜ್ಯ ಆರೋಗ್ಯ ಸಚಿವರಾದ ಯು.ಟಿ. ಖಾದರ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಂ ಸಮುದಾಯಕ್ಕೆ ದೀರ್ಘಕಾಲ ಧಾರ್ಮಿಕ ಮಾರ್ಗದರ್ಶನ ನೀಡಿದ ಮುಸ್ಲಿಯಾರ್ ಅವರು ತಮ್ಮ ಜೀವನವನ್ನೆಲ್ಲಾ ಧರ್ಮ, ಶಿಕ್ಷಣ ಹಾಗೂ ಸಮಾಜ ಸೇವೆಗೆ ಸಮರ್ಪಿಸಿ ಸಾವಿರಾರು ಜನರಿಗೆ ದಾರಿದೀಪರಾಗಿದ್ದರು. ಅವರ ಸರಳತೆ, ಆಳವಾದ ಜ್ಞಾನ ಹಾಗೂ ಸಮನ್ವಯದ ಮನೋಭಾವವು ಎಲ್ಲರಿಗೂ ಪ್ರೇರಣೆಯಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಅವರ ಅಗಲಿಕೆ ಮುಸ್ಲಿಂ ಸಮುದಾಯಕ್ಕೆ ಮಾತ್ರವಲ್ಲದೆ ಸಮಸ್ತ ಸಮಾಜಕ್ಕೂ ಅಪಾರ ನಷ್ಟವಾಗಿದೆ. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಧಾರ್ಮಿಕ ಮೌಲ್ಯಗಳನ್ನು ಬಲಪಡಿಸುವಲ್ಲಿ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿತ್ತು ಎಂದು ಯು.ಟಿ. ಖಾದರ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಅಲ್ಲಾಹ್ ಅವರು ಅವರಿಗೆ ಜನ್ನತುಲ್ ಫಿರ್ದೌಸ್ನಲ್ಲಿ ಉನ್ನತ ಸ್ಥಾನ ನೀಡಲಿ ಹಾಗೂ ಅವರ ಕುಟುಂಬಸ್ಥರು, ಶಿಷ್ಯರು ಮತ್ತು ಅಭಿಮಾನಿಗಳಿಗೆ ಈ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.













