ಧರ್ಮ ಸಂಸದ್ನಲ್ಲಿ ರಾಮ ಮಂದಿರದ ಕುರಿತು ಚರ್ಚೆ ; ಶರಣ್ ಪಂಪ್ವೆಲ್
ಉಡುಪಿ: ಹಲವಾರು ವರ್ಷಗಳಿಂದ ಹಿಂದೂಗಳ ಕನಸಾಗಿದ್ದ ಅಯೋಧ್ಯೆಯ ರಾಮ ಮಂದಿರದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನವಂಬರ್ 24, 25, ಹಾಗೂ 26 ರಂದು ನಡೆಯಲಿರುವ ಧರ್ಮ ಸಂಸದ್ನಲ್ಲಿ ಚರ್ಚೆಯಾಗಲಿದೆ ಎಂದು ಬಜರಂಗದಳದ ಪ್ರಾಂತ ಸಂಚಾಲಕ ಶರಣ್ ಪಂಪ್ವೆಲ್ ಹೇಳಿದ್ದಾರೆ.

ಅವರು ವಿಶ್ವಹಿಂದೂ ಪರಿಷತ್-ಬಜರಂಗ ದಳ ಕಾಪೂ ಪ್ರಖಂಡವು ನವಂಬರ್ 24, 25, ಹಾಗೂ26ರಂದು ಉಡುಪಿಯಲ್ಲಿ ನಡೆಯಲಿರುವ ಧರ್ಮ ಸಂಸದ್ನ ಪೂರ್ವಭಾವಿಯಾಗಿ ಭಾನುವಾರ ಕಾಪು ಹಳೇ ಮಾರಿಗುಡಿ ಸಭಾಭವನದಲ್ಲಿ ಆಯೋಜಿಸಿದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.
ಹಿಂದೂ ಧರ್ಮದ ರಕ್ಷಣೆಯನ್ನು ನಾವೇ ಮಾಡಿಕೊಳ್ಳುವ ದಿನ ಹತ್ತಿರ ಬಂದಿದೆ. ಹಿಂದೂಸ್ಥಾನದಲ್ಲಿದ್ದರೂ ನಮಗೆ ರಕ್ಷಣೆ ಇಲ್ಲದ ಪರಿಸ್ಥಿತಿ ನೆಲೆಸಿದೆ. ಇಲ್ಲಿ ನಡೆಯುವ ಧರ್ಮವಿರೋಧಿ ಕುಕೃತ್ಯವನ್ನು , ಲವ್ಜೇಹಾದ್, ಗೋಹತ್ಯೆಯನ್ನು ನಿಲ್ಲಿಸ ಬೇಕಾಗಿದೆ ಎಂದರು.
ಉತ್ತರ ಕಾಶಿ ಶ್ರೀ ಕ್ಷೇತ್ರ ಕಪಿಲಾಶ್ರಮದ ರಾಮಚಂದ್ರ ಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ, ಇಸ್ಲಾಂ ಸೌದಿ ಅರೇಬಿಯಾದಲ್ಲಿ ಹುಟ್ಟಿದೆ. ಕ್ರೈಸ್ತ ಧರ್ಮವು ವ್ಯಟಿಕನ್ನಲ್ಲಿ ಹುಟ್ಟಿದ್ದಾಗಿದೆ. ಆದರೆ ಹಿದೂಸ್ಥಾನದಲ್ಲಿ ಹುಟ್ಟಿದ ಧರ್ಮ ಹಿಂದೂ ಧರ್ಮವಾಗಿದೆ. ಭರತ ಹುಟ್ಟಿದ ಭೂಮಿ, ರಾಮ ರಾಜ್ಯವಾಳಿದ ಭಾರತ, ಹಿಂದೂಗಳ ಜನ್ಮ ಭೂಮಿಯೆಂದು ನಾವೆಲ್ಲರೂ ಹೆಮ್ಮೆಯಿಂದ ಹೇಳಬೇಕಿದೆ. ಯಾವತ್ತೂ ಹಿಂದೆ ಇರುವವರು ಹಿಂದೂಗಳಲ್ಲ. ಮುಂದೆ ಬರುವವರು ಹಿಂದೂಗಳು. ನಾವು ಎಲ್ಲಿಯವರೆಗೆ ಮಾತನಾಡುವುದಿಲ್ಲವೋ, ಅಲ್ಲಿಯವರೆಗೆ ಪ್ರಹಾರಗಳು ನಿರಂತರವಾಗಿ ನಡೆಯುತ್ತದೆ ಎಂದೂ ಸ್ವಾಮೀಜಿ ಹೇಳಿದ್ದಾರೆ.
ಸಮಾವೇಶದ ಮೊದಲಿಗೆ ಪಡುಬಿದ್ರಿ, ಮೂಳೂರು ಕೊಡಮಣಿತ್ತಾಯ ಬಬ್ಬರ್ಯ ದೈವಸ್ಥಾನ ಮಾರ್ಗವಾಗಿ ಕಾಪು ಪೇಟೆಯವರೆಗೆ ಸಾಗಿ ಹಳೇ ಮಾರಿಯಮ್ಮ ಸಭಾಭವನದವರೆಗೆ ಬೃಹತ್ ಬೈಕ್ ರ್ಯಾಲಿ ನಡೆಯಿತು.
ವೇದಿಕೆಯಲ್ಲಿ ಬಜರಂಗದಳ ಕಾಪು ಪ್ರಖಂಡದ ಸಂಚಾಲಕ ರಾಜೇಶ್ ಕೋಟ್ಯಾನ್, ಪ್ರಶಾಂತ್ ಸಾಲ್ಯಾನ್, ಸುಧೀರ್ ಕಾಪು, ಪ್ರಕಾಶ್ ಕೋಟ್ಯಾನ್, ಗೋವರ್ಧನ್ ಭಟ್, ವಿಷ್ಣುಮೂರ್ತಿ ಆಚಾರ್ಯ, ರವಿಂದ್ರ ಪಾಟ್ಕರ್ ಮತ್ತಿತರರು ಉಪಸ್ತಿತರಿದ್ದರು.













