ನಿಷೇಧಿತ ಮಾದಕವಸ್ತು ಮಾರಾಟ ಯತ್ನ ಪ್ರಕರಣ: ಆರೋಪಿಗೆ 5 ವರ್ಷ ಜೈಲು ಶಿಕ್ಷೆ

Spread the love

ನಿಷೇಧಿತ ಮಾದಕವಸ್ತು ಮಾರಾಟ ಯತ್ನ ಪ್ರಕರಣ: ಆರೋಪಿಗೆ 5 ವರ್ಷ ಜೈಲು ಶಿಕ್ಷೆ

ಬೆಳ್ತಂಗಡಿ: ನಿಷೇಧಿತ ಗಾಂಜಾ ಮಾರಾಟಕ್ಕೆ ಯತ್ನಿಸಿದ್ದ ಪ್ರಕರಣದಲ್ಲಿ ಆರೋಪಿಗೆ ಮಂಗಳೂರು ಜಿಲ್ಲಾ ವಿಶೇಷ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

2009ರ ಮಾರ್ಚ್ 8ರಂದು ಬೆಳ್ತಂಗಡಿ ತಾಲೂಕಿನ ಉಜಿರೆ ರಥಬೀದಿ ಪ್ರದೇಶದಲ್ಲಿ ಅಂದಾಜು ₹50,000 ಮೌಲ್ಯದ ಸುಮಾರು 1.500 ಕಿಲೋಗ್ರಾಂ ತೂಕದ ನಿಷೇಧಿತ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 60/2009ರಂತೆ ಎನ್ಡಿಪಿಎಸ್ ಕಾಯ್ದೆಯ ಸೆಕ್ಷನ್ 8(c) ಹಾಗೂ 20(b) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರು ಜಿಲ್ಲಾ ವಿಶೇಷ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಸವರಾಜ್ ಅವರು ಆರೋಪಿಯಾದ ಚಾರ್ಮಾಡಿ ನಿವಾಸಿ ಟಿ.ಇ. ಜೋಸೆಫ್ (42) ಅವರನ್ನು ದೋಷಿ ಎಂದು ಪರಿಗಣಿಸಿ ಏಪ್ರಿಲ್ 16ರಂದು ಶಿಕ್ಷೆ ಪ್ರಕಟಿಸಿದ್ದಾರೆ.

ನ್ಯಾಯಾಲಯವು ಎನ್ಡಿಪಿಎಸ್ ಕಾಯ್ದೆಯ ಸೆಕ್ಷನ್ 8(c) ಜೊತೆಗೆ 20(b)(ii)(B) ಅಡಿಯಲ್ಲಿ ಆರೋಪಿಗೆ 5 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ₹50,000 ದಂಡ ವಿಧಿಸಿದೆ. ದಂಡ ಪಾವತಿಸಲು ವಿಫಲವಾದರೆ, ಹೆಚ್ಚುವರಿಯಾಗಿ 2 ತಿಂಗಳ ಕಠಿಣ ಜೈಲು ಶಿಕ್ಷೆ ಅನುಭವಿಸಬೇಕೆಂದು ಆದೇಶಿಸಿದೆ.

ಇದೇ ವೇಳೆ, ಎನ್ಡಿಪಿಎಸ್ ಕಾಯ್ದೆಯ ಸೆಕ್ಷನ್ 32-B(f) ಅಡಿಯಲ್ಲಿ ಮತ್ತೊಂದು 1 ವರ್ಷದ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ.

ಪ್ರಕರಣದ ತನಿಖೆಯನ್ನು ಬೆಳ್ತಂಗಡಿ ಪೊಲೀಸ್ ಠಾಣೆಯ ಉಪನಿರೀಕ್ಷಕರಾಗಿದ್ದ ಬಿ.ಜಿ. ಸುಬ್ಬಾಪುರ್ ಮಠ್ ಅವರು ನಡೆಸಿ ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕೆಯಾದ ಜುಡಿತ್ ಓಲ್ಗಾ ಮಾರ್ಗರೇಟ್ ಕ್ರಾಸ್ತಾ ಅವರು ಸಮರ್ಥವಾಗಿ ವಾದ ಮಂಡಿಸಿದ್ದರು.


Spread the love