ಪುತ್ತೂರಿನಲ್ಲಿ ಅಕ್ರಮ ಜಾನುವಾರು ಸಾಗಾಟ ಪತ್ತೆ; ಮೂರು ಜಾನುವಾರುಗಳ ರಕ್ಷಣೆ

Spread the love

ಪುತ್ತೂರಿನಲ್ಲಿ ಅಕ್ರಮ ಜಾನುವಾರು ಸಾಗಾಟ ಪತ್ತೆ; ಮೂರು ಜಾನುವಾರುಗಳ ರಕ್ಷಣೆ

ಪುತ್ತೂರು: ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಪಿಕ್‌ಅಪ್ ವಾಹನವನ್ನು ಪುತ್ತೂರು ನಗರ ಪೊಲೀಸರು ತಡೆದು, ಮೂರು ಜಾನುವಾರುಗಳನ್ನು ರಕ್ಷಿಸಿ, ವಾಹನ ಹಾಗೂ ಆರೋಪಿಯನ್ನು ವಶಕ್ಕೆ ಪಡೆದ ಘಟನೆ ಆ.23ರಂದು ಬೆಳಿಗ್ಗೆ ನಡೆದಿದೆ.

ಆನಡ್ಕ ಕಡೆಯಿಂದ ಪಡೀಲ್ ಕಡೆಗೆ ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಪುತ್ತೂರು ನಗರ ಠಾಣಾ ಪೊಲೀಸ್ ಉಪನಿರೀಕ್ಷಕ ಸುರೇಶ್ ಸಿ.ಟಿ. ಅವರಿಗೆ ಲಭಿಸಿತ್ತು. ಮಾಹಿತಿ ಆಧರಿಸಿ ಪೊಲೀಸರು ಸಿಬ್ಬಂದಿಯೊಂದಿಗೆ ಪುತ್ತೂರು ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ಲು ಎಂಬಲ್ಲಿ KA 19 D 0948 ನೋಂದಣಿಯ ಪಿಕ್‌ಅಪ್ ವಾಹನವನ್ನು ತಡೆದು ಪರಿಶೀಲಿಸಿದರು.

ಈ ವೇಳೆ ವಾಹನದಲ್ಲಿ ಮೂರು ಜಾನುವಾರುಗಳನ್ನು ಹಿಂಸಾತ್ಮಕವಾಗಿ ಕಟ್ಟಿ ಹಾಕಿರುವುದು ಪತ್ತೆಯಾಗಿದೆ. ವಾಹನ ಚಾಲಕ ಮಹಮ್ಮದ್ ಜಬ್ಬಾರ್ ಅವರನ್ನು ವಿಚಾರಿಸಿದಾಗ, ಜಾನುವಾರುಗಳನ್ನು ಶಾಂತಿಗೋಡು ಗ್ರಾಮದ ನಿವಾಸಿ ಅಶೋಕ್ ಎಂಬವರಿಂದ ಖರೀದಿಸಿ, ಯಾವುದೇ ಪರವಾನಗಿ ಇಲ್ಲದೆ ವಧೆ ಮಾಡುವ ಉದ್ದೇಶದಿಂದ ಸಾಗಿಸುತ್ತಿದ್ದುದಾಗಿ ತಿಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಾನುವಾರುಗಳ ಸಹಿತ ವಾಹನ ಹಾಗೂ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು, ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಕರಣವು ಅ.ಕ್ರ. 101/2026ರಂತೆ ದಾಖಲಾಗಿದ್ದು, ಪ್ರಾಣಿ ಹಿಂಸಾ ಕಾಯ್ದೆಯ ಕಲಂ 11(D), ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020ರ ಕಲಂ 4, 5, 12 ಹಾಗೂ ಐಎಂವಿ ಕಾಯ್ದೆಯ ಕಲಂ 66 ಜೊತೆಗೆ 192(A)ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.


Spread the love
Subscribe
Notify of

0 Comments