ಫೆಬ್ರವರಿ 29 ರಿಂದ ಮಾರ್ಚ್ 1 ರವರೆಗೆ ಅಬ್ಬಕ್ಕ ಉತ್ಸವ- ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್
ಮಂಗಳೂರು : ವೀರರಾಣಿ ಅಬ್ಬಕ್ಕ ಉತ್ಸವ ಫೆಬ್ರವರಿ 29 ಹಾಗೂ ಮಾರ್ಚ್ 1 ರಂದು ಉಳ್ಳಾಲದ ಬೀಚ್‍ನಲ್ಲಿ ಅರ್ಥಪೂರ್ಣವಾಗಿ ಆಯೋಜನೆಯಾಗಬೇಕು ಎಂದು ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ ತಿಳಿಸಿದರು.
ಶನಿವಾರ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ, ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಅಬ್ಬಕ್ಕ ಉತ್ಸವ ಆಯೋಜನೆ ಸಂಬಂಧ ಸಭೆಯನ್ನು ಉದ್ದೇಶಿಸಿ ಮಾತನಾಡಿ, ರಾಣಿ ಅಬ್ಬಕ್ಕನ ಉತ್ಸವವನ್ನು ಆಚರಿಸಲು ಎಲ್ಲರ ಸಹಕಾರ ಅಗತ್ಯ. ಹೆಚ್ಚಿನ ಸಂಖ್ಯೆಯಲ್ಲಿ ಜನಾಕರ್ಷಣೆಗೆ ಕಾರ್ಯಕ್ರಮವನ್ನು ರೂಪಿಸಬೇಕು. ಕಾರ್ಯಕ್ರಮವನ್ನು ಅತ್ಯಂತ ಉತ್ತಮವಾಗಿ ಆಯೋಜಿಸಿ ರಾಣಿ ಅಬ್ಬಕ್ಕನ ಚರಿತ್ರೆಯನ್ನು ಜನಮಾನಸದಲ್ಲಿ ಸ್ಮರಣೀಯವಾಗಿ ಉಳಿಯುವಂತೆ ಮಾಡಬೇಕು ಎಂದು ಹೇಳಿದರು.
ಸಾಂಸ್ಕøತಿಕ ಕಾರ್ಯಕ್ರಮ ತಂಡ ಆದಷ್ಟು ಬೇಗ ಕಾರ್ಯಕ್ರಮದ ಪಟ್ಟಿಯನ್ನು ಸಿದ್ದಪಡಿಸಿ ಕಲಾತಂಡಗಳನ್ನು ಗುರುತಿಸಿ ಎಂದು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಹಾಫ್ ಮ್ಯಾರಥಾನ್ ಆಯೋಜನೆ ಬಗ್ಗೆ ಉಪನಿರ್ದೇಶಕರು ಯುವಜನ ಮತ್ತು ಕ್ರೀಡಾ ಇಲಾಖೆ ಪ್ರದೀಪ್ ಡಿಸೋಜಾ ವಿವರಿಸಿದರು.
ಉತ್ಸವಕ್ಕೆ ವಿವಿಧ ಅಧಿಕಾರಿಗಳು ಮತ್ತು ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನೊಳಗೊಂಡು ಜಿಲ್ಲಾಧಿಕಾರಿಗಳು ಸಮಿತಿಯನ್ನು ರಚಿಸಿದರು. ಈ ವರುಷ ವಿದ್ಯಾರ್ಥಿಗಳನ್ನೊಳಗೊಂಡು ಉತ್ಸವದಲ್ಲಿ ನಡೆಯುವ ವಿಚಾರಗೋಷ್ಟಿ ಹಾಗೂ ಕವಿಗೋಷ್ಟಿಗೆ ರಾಜ್ಯದ ಕೆಲವು ಪ್ರಖ್ಯಾತ ವಿಶ್ವವಿದ್ಯಾನಿಲಯಗಳಿಂದ ಆಸಕ್ತಿ ಇರುವ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸುವಂತೆ ಆಮಂತ್ರಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಜೆ ರೂಪ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ, ಕಾರ್ಯನಿರ್ವಾಹಕ ನಿರ್ದೇಶಕಿ ಪಿಲಿಕುಲ ಮೇಘನಾ ಆರ್, ಸಹಾಯಕ ಆಯುಕ್ತರು ಧರ್ಮ ದತ್ತಿ ಇಲಾಖೆ ವೆಂಕಟೇಶ್ ಜಿ, ಸಹಾಯಕ ನಿರ್ದೇಶಕರು ಆಹಾರ ಇಲಾಖೆ ಸುನಂದ ಕೆ, ಕಾಲೇಜು ಶಿಕ್ಷಣ ಇಲಾಖೆ ಶ್ರೀಧರ ಮಣಿಯಾಣಿ, ಉಪಸ್ಥಿತರಿದ್ದರು.













