ಮಂಗಳೂರು ದಸರಾ ಮೆರವಣಿಗೆ: ಸಂಚಾರಕ್ಕೆ ತಾತ್ಕಾಲಿಕ ಬದಲಾವಣೆ – ಪರ್ಯಾಯ ಮಾರ್ಗಗಳನ್ನು ಬಳಸಲು ಸೂಚನೆ

Spread the love

ಮಂಗಳೂರು ದಸರಾ ಮೆರವಣಿಗೆ: ಸಂಚಾರಕ್ಕೆ ತಾತ್ಕಾಲಿಕ ಬದಲಾವಣೆ – ಪರ್ಯಾಯ ಮಾರ್ಗಗಳನ್ನು ಬಳಸಲು ಸೂಚನೆ

ಮಂಗಳೂರು: ಪ್ರಸಿದ್ಧ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ನಡೆಯುವ ದಸರಾ ಮೆರವಣಿಗೆಯ ಹಿನ್ನೆಲೆಯಲ್ಲಿ ಅಕ್ಟೋಬರ್ 2ರಂದು ಸಂಜೆ 4 ಗಂಟೆಯಿಂದ ಅಕ್ಟೋಬರ್ 3ರ ಬೆಳಗ್ಗೆ 6 ಗಂಟೆಯವರೆಗೆ ನಗರದ ವಿವಿಧ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಬದಲಾವಣೆಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ಮಂಗಳೂರು ನಗರ ಪೊಲೀಸ್ ಇಲಾಖೆ ತಿಳಿಸಿದೆ.

ಮೆರವಣಿಗೆ ಕುದ್ರೋಳಿ ದೇವಸ್ಥಾನದಿಂದ ಆರಂಭವಾಗಿ ದುರ್ಗಾಮಹಲ್ ಜಂಕ್ಷನ್, ಮಣ್ಣಗುಡ್ಡೆ, ನಾರಾಯಣಗುರು ವೃತ್ತ, ಲಾಲ್‌ಭಾಗ್, ಬಳ್ಳಾಲ್ ಭಾಗ್, ಕೊಡಿಯಲ್‌ಗುತ್ತು, ಪಿವಿಎಸ್, ನವಭಾರತ ವೃತ್ತ, ಹಂಪನಕಟ್ಟೆ, ಕಾರ್ ಸ್ಟ್ರೀಟ್, ಅಳಕೆ ಬ್ರಿಡ್ಜ್ ಮೂಲಕ ಮತ್ತೆ ದೇವಸ್ಥಾನಕ್ಕೆ ಮರಳಲಿದೆ. ಈ ಸಂದರ್ಭದಲ್ಲಿ ರಸ್ತೆಗಳ ಬದಿಯಲ್ಲಿ ವಾಹನಗಳನ್ನು ನಿಲ್ಲಿಸದಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.

ಸಂಚಾರ ಬದಲಾವಣೆ:

  • ಕೊಟ್ಟಾರ ಚೌಕಿ ಜಂಕ್ಷನ್‌ನಿಂದ ಬರುವ ವಾಹನಗಳು ಕುಂಟಿಕಾನ – ಕೆಪಿಟಿ – ನಂತೂರು ಮುಖಾಂತರ ನಗರಕ್ಕೆ ಪ್ರವೇಶಿಸಬೇಕು.
  • ಬಂಟ್ಸ್ ಹಾಸ್ಟೆಲ್‌ನಿಂದ ಪಿವಿಎಸ್ ಕಡೆಗೆ ಸಂಚರಿಸುವ ವಾಹನಗಳು ಭಾರತ್ ಬೀಡಿ – ಬಟ್ಟಗುಡ್ಡ – ಕೆಪಿಟಿ ಅಥವಾ ಮಲ್ಲಿಕಟ್ಟೆ ಮಾರ್ಗವಾಗಿ ಹೋಗಬೇಕು.
  • ಕೆ.ಎಸ್.ಆರ್.ಟಿ.ಸಿ ಜಂಕ್ಷನ್‌ನಿಂದ ಲಾಲ್‌ಭಾಗ್ ಕಡೆಗೆ ಬರುವ ವಾಹನಗಳು ಕಾಪಿಕಾಡ್ – ಕುಂಟಿಕಾನ ಅಥವಾ ಬಿಜೈ ಬಟ್ಟಗುಡ್ಡ ಮಾರ್ಗವನ್ನು ಬಳಸಬೇಕು.
  • ಎಲ್ಲಾ ಕೆ.ಎಸ್.ಆರ್.ಟಿ.ಸಿ ಬಸ್ಸುಗಳಿಗೂ ಇದೇ ಮಾರ್ಗಗಳನ್ನು ಅನುಸರಿಸಲು ಸೂಚಿಸಲಾಗಿದೆ.
  • ಹಂಪನಕಟ್ಟೆಯಿಂದ ಪಿವಿಎಸ್ ಕಡೆಗೆ ಬರುವ ವಾಹನಗಳು ಅಂಬೇಡ್ಕರ್ ಜಂಕ್ಷನ್ ಮೂಲಕ ಸಂಚರಿಸಬೇಕು.
  • ಲೇಡಿಹಿಲ್, ನ್ಯೂಚಿತ್ರಾ ಜಂಕ್ಷನ್ ಮತ್ತು ಇತರೆ ಮೆರವಣಿಗೆ ಮಾರ್ಗಗಳಲ್ಲಿಯೂ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸೂಚಿಸಲಾಗಿದೆ.

ಪಾರ್ಕಿಂಗ್ ವ್ಯವಸ್ಥೆ:

ಮೆರವಣಿಗೆ ವೀಕ್ಷಿಸಲು ಬರುವವರು ತಮ್ಮ ವಾಹನಗಳನ್ನು ಕರಾವಳಿ ಮೈದಾನ, ಅಳಕೆ ಮಾರ್ಕೆಟ್, ಉರ್ವ ಮೈದಾನ, ಉರ್ವ ಕೆನರಾ ಸ್ಕೂಲ್, ಪೊಂಪೈ ಚರ್ಚ್, ದುರ್ಗಾಮಹಲ್ ಹೊಟೇಲ್, ಕುದ್ರೋಳಿ ನಾರಾಯಣ ಕಾಲೇಜು, ಬಿ.ಇ.ಎಂ. ಸ್ಕೂಲ್, ಸರಕಾರಿ ಹೆಣ್ಣುಮಕ್ಕಳ ಪ್ರೌಢಶಾಲೆ (ಕಾರ್ ಸ್ಟ್ರೀಟ್) ಹಾಗೂ ಹೊಟೇಲ್ ವಿಮಲೇಶ್ ಮುಂತಾದ ಸ್ಥಳಗಳಲ್ಲಿ ಪಾರ್ಕ್ ಮಾಡಬಹುದು.

ನಗರ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಸಂಚಾರ ನಿಯಮಗಳನ್ನು ಪಾಲಿಸಲು, ನಿಗದಿತ ಪಾರ್ಕಿಂಗ್ ಸ್ಥಳಗಳನ್ನು ಬಳಸಲು ಮತ್ತು ಮೆರವಣಿಗೆಯ ಸಮಯದಲ್ಲಿ ಪೊಲೀಸರು ನೀಡುವ ಮಾರ್ಗದರ್ಶನಕ್ಕೆ ಸಹಕರಿಸಲು ವಿನಂತಿ ಮಾಡಿದೆ.


Spread the love
Subscribe
Notify of

0 Comments
Inline Feedbacks
View all comments