ಮಂಗಳೂರು: ಬಾರ್ ರೆಸ್ಟೋರೆಂಟ್ ಗೆ ದಾಳಿ: ಕಿಶೋರ ಕಾರ್ಮಿಕ ಪತ್ತೆ
ಮಂಗಳೂರು: ಕಾರ್ಮಿಕ ಇಲಾಖಾ ಅಧಿಕಾರಿಗಳು, ಪುತ್ತೂರು ಹಾಗೂ ಚೈಲ್ಡ್ ಲೈನ್ ಸಂಯೋಜಕರು ಶುಕ್ರವಾರ ಅನಿರೀಕ್ಷಿತ ತಪಾಸಣೆ ನಡೆಸಿದಾಗ ಉಪ್ಪಿನಂಗಡಿಯಲ್ಲಿರುವ ಕಾರ್ತಿಕ್ ಬಾರ್ ಆ್ಯಂಡ್ ರೆಸ್ಟೋರೆಂಟ್‍ನಲ್ಲಿ ಬಿಹಾರ ಮೂಲದ 15 ವರ್ಷದ ಕಿಶೋರ ಕಾರ್ಮಿಕನÀನ್ನು ದುಡಿಸಿಕೊಳ್ಳುತ್ತಿದ್ದು ಪತ್ತೆಯಾಗಿದೆ.
ಕ್ಲೀನರ್ ಕೆಲಸಕ್ಕೆ ನೇಮಿಸಿಕೊಂಡಿದ್ದ ಕಿಶೋರ ಕಾರ್ಮಿಕನನ್ನು ಕೆಲಸದಿಂದ ಬಿಡುಗಡೆಗೊಳಿಸಿ ಮಕ್ಕಳ ಕಲ್ಯಾಣ ಸಮಿತಿ ಇಲ್ಲಿ ಪುನರ್ ವಸತಿಗಾಗಿ ಹಾಜರುಪಡಿಸಲಾಯಿತು.
ಕಾರ್ಯಚರಣೆಯಲ್ಲಿ ಕಾರ್ಮಿಕ ಇಲಾಖೆಯ ಹಿರಿಯ ಕಾರ್ಮಿಕ ನಿರೀಕ್ಷಕ ( ಪುತ್ತೂರು ವೃತ್ತ) ವಿರೇಂದ್ರ ಕುಂಬಾರ್, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕ ಶ್ರೀನಿವಾಸ್, ಚೈಲ್ಡ್ ಹೆಲ್ಪ್‍ಲೈನ್ ಸಂಯೋಜಕ ಗಣೇಶ್ ಪಿ ಪಾಲ್ಗೊಂಡಿದ್ದರು.
ತಪ್ಪಿತಸ್ಥ ಮಾಲೀಕರ ಮೇಲೆ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ)ಕಾಯ್ದೆ-1986ರನ್ವಯ ಮೊಕದ್ದಮೆ ಹೂಡುವ ಕ್ರಮ ಪ್ರಗತಿಯಲ್ಲಿರುತ್ತದೆ ಎಂದು ಸಹಾಯಕ ಕಾರ್ಮಿಕ ಆಯುಕ್ತರು (ಮಂಗಳೂರು ವಿಭಾಗ) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಾಲಕಾರ್ಮಿಕ ಪದ್ಧತಿ ಒಂದು ಸಾಮಾಜಿಕ ಅನಿಷ್ಟ ಪಿಡುಗು ಆಗಿದ್ದು, ಬಾಲ್ಯಾವಸ್ಥೆ, ಕಿಶೋರಾವಸ್ಥೆ ಕಾರ್ಮಿಕ (ನಿಷೇಧ& ನಿಯಂತ್ರಣ)ಕಾಯ್ದೆ-1986ರನ್ವಯ 14 ವರ್ಷದೊಳಗಿನ ಬಾಲ್ಯಾವಸ್ಥೆ ಕಾರ್ಮಿಕರನ್ನು ಯಾವುದೇ ಸಂಸ್ಥೆಯಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿರುತ್ತದೆ. 15 ವರ್ಷದಿಂದ 18 ವರ್ಷದೊಳಗಿನ ಕಿಶೋರಾವಸ್ಥೆಯ ಕಾರ್ಮಿಕರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ದುಡಿಸಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಅಲ್ಲದೇ 15 ವರ್ಷದಿಂದ 18ವರ್ಷದೊಳಗಿನ ಮಕ್ಕಳು ಅಪಾಯಕಾರಿ ಅಲ್ಲದ ಸಂಸ್ಥೆಯಲ್ಲಿ ದುಡಿಯುತ್ತಿರುವುದನ್ನು ನಿಯಂತ್ರಿಸಲಾಗಿರುತ್ತದೆ.
ಕಾಯ್ದೆಯನ್ನು ಉಲ್ಲಂಘಿಸಿದ ಮಾಲೀಕರಿಗೆ ರೂ.50 ಸಾವಿರದವರೆಗೆ ದಂಡ ಹಾಗೂ 2 ವರ್ಷದವರೆಗೆ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ. ತಪ್ಪಿತಸ್ಥ ಮಾಲೀಕರ ಮೇಲೆ ಪೊಲೀಸ್ ಇಲಾಖೆಯಿಂದ ಎಫ್.ಐ.ಆರ್ ದಾಖಲಿಸಲಾಗುತ್ತದೆ.
ಸಾರ್ವಜನಿಕರು ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆ ಕಾರ್ಮಿಕರಿಂದ ದುಡಿಸಿಕೊಳ್ಳುತ್ತಿರುವುದು ಕಂಡು ಬಂದಲ್ಲಿ ಚೈಲ್ಡ್‍ಲೈನ್:1098, ಕಾರ್ಮಿಕ ಇಲಾಖೆಯ ದೂರವಾಣಿ ಸಂಖ್ಯೆಗಳಾದ 0824-2435343, 2433132, 2437479 ಮತ್ತು ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘ ಇದರ ದೂರವಾಣಿ ಸಂಖ್ಯೆ 2433131ಗೆ ಕರೆ ಮಾಡಿ ತಿಳಿಸಬಹುದು ಎಂದು ಪ್ರಕಟಣೆ ತಿಳಿಸಿದೆ.













