ಮಂಗಳೂರು: ಬಿಹಾರದಲ್ಲಿ ಮತ ಖರೀದಿಗೆ ಚುನಾವಣೆ ಆಯೋಗದಿಂದ ಸಹಾಯ- ದಿನೇಶ್ ಗುಂಡೂರಾವ್ ಆರೋಪ
ಮಂಗಳೂರು: ಚುನಾವಣೆ ಘೋಷಣೆಯಾಗಲು ನಾಲ್ಕು ದಿನವಿದ್ದಾಗ 10 ಸಾವಿರ ಹಣ ಮಹಿಳೆಯರ ಖಾತೆಗೆ ಹಾಕಲಾಗಿದೆ. ಸರ್ಕಾರದ ದುಡ್ಡಲ್ಲಿ ಎನ್ಡಿಎ ಮತ ಖರೀದಿ ಮಾಡಿದೆ. ಚುನಾವಣಾ ಆಯೋಗ ಇದಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಗಂಭೀರ ಆರೋಪ ಮಾಡಿದರು.
ಬಿಹಾರ ಚುನಾವಣೆ ಫಲಿತಾಂಶ ನವೆಂಬರ್ ಕ್ರಾಂತಿ ಚರ್ಚೆ ವಿಚಾರವಾಗಿ ಮಾತನಾಡಿದ ಅವರು, ಬಿಹಾರ ಚುನಾವಣೆಗೂ ನವೆಂಬರ್ ಕ್ರಾಂತಿಗೂ ಯಾವುದೇ ಸಂಬಂಧವಿಲ್ಲ. ನವೆಂಬರ್ ಕ್ರಾಂತಿ ಎಲ್ಲಿಂದಲೋ ಸೃಷ್ಟಿಯಾಗಿತ್ತು. ಅದಕ್ಕೆ ಯಾವುದೇ ಆಧಾರಗಳಿಲ್ಲ. ಚುನಾವಣೆಗೂ ನಮ್ಮ ರಾಜ್ಯದ ರಾಜಕಾರಣಕ್ಕೂ ಯಾವುದೇ ಸಂಬಂಧವಿಲ್ಲ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಬಿಹಾರ ಚುನಾವಣೆಯನ್ನು ಹತ್ತಿರದಿಂದ ನೋಡಿದ್ದಾರೆ. ಚುನಾವಣಾ ಆಯೋಗ ಬಿಜೆಪಿಯವರಿಗೆ ಅನುಕೂಲ ಮಾಡಿಕೊಟ್ಟಿದನ್ನು ನೋಡಿದ್ದೇವೆ ಎಂದರು.
ಮುಂದೆ ಎಲ್ಲರೂ ಇದನ್ನೇ ಮಾಡುವುದಕ್ಕೆ ಶುರು ಮಾಡಿದ್ರೆ.?. ಚುನಾವಣೆ ಹತ್ತಿರವಿದ್ದಾಗ ಯಾವುದೋ ಯೋಜನೆ ಘೋಷಣೆ ಮಾಡ್ತಾರೆ. 10,20,30 ಸಾವಿರ ಕೊಟ್ಟಲ್ಲಿ ನ್ಯಾಯಯುತ ಚುನಾವಣೆ ಎಂದು ಹೇಗೆ ಹೇಳಲಾಗುತ್ತದೆ. ಚುನಾವಣೆ ಆಯೋಗ ಯಾಕೆ ಕ್ರಮ ತಗೊಂಡಿಲ್ಲ. ಚುನಾವಣೆ ದಿನಾಂಕಕ್ಕೂ ಇವರಿಗೂ ಹೊಂದಾಣಿಕೆ ಮಾಡಿಕೊಂಡು ಘೋಷಣೆ ಮಾಡಿದ್ದಾರೆ. ಮತ ಖರೀದಿಗೆ ಚುನಾವಣೆ ಆಯೋಗವೂ ಸಹಾಯ ಮಾಡಿದೆ. ರಾಜಕೀಯ ಪಕ್ಷ ಜನರ ದುಡ್ಡಲ್ಲಿ ಈ ರೀತಿ ಮಾಡಿದ್ರೆ ಯಾವ ನೈತಿಕತೆಯಿದೆ. ಎಲ್ಲಾ ರೀತಿಯ ಅಸ್ತ್ರಗಳನ್ನು ಕೇಂದ್ತ ಸರ್ಕಾರ, ಬಿಜೆಪಿ ಉಪಯೋಗಿಸಿದೆ ಎಂದರು.
ಚುನಾವಣೆ ಸೋಲಿನಲ್ಲೂ ನಮ್ಮ ವೈಫಲ್ಯವೂ ಇದೆ. ಸೋಲನ್ನು ಇನ್ನೊಬ್ಬರ ತಪ್ಪು ಎಂದು ಹೇಳಬಾರದು. ಮಹಾಘಟ್ ಬಂಧನ್, ಸೀಟು ವಿತರಣೆಯಲ್ಲಿ ಗೊಂದಲ, ಮುಖ್ಯಮಂತ್ರಿ ಘೋಷಣೆ ಮಾಡುವಲ್ಲಿ ಸಮಸ್ಯೆ ಆಗಿತ್ತು. ಇದೆಲ್ಲವನ್ನು ಆತ್ಮಾವಲೋಕನ ಮಾಡಬೇಕು. ಇದನ್ನು ಕೇಂದ್ರದವರು ಮಾಡ್ತಾರೆ.ಈ ಸೋಲನ್ನು ನಾವು ಒಪ್ಪಿಕೊಳ್ಳಬೇಕು. ಜನ ತಿರಸ್ಕಾರ ಮಾಡಿದನ್ನು ನಾವು ಒಪ್ಪಿಕೊಳ್ಳಬೇಕು ಎಂದರು.
ಆದದೆ ಸರ್ಕಾರದ ಯಂತ್ರವನ್ನು, ಸಂಸ್ಥೆಯನ್ನು ದುರುಪಯೋಗ ಮಾಡಿರೋದು ಸಹ ಇದೆ. ಅಕ್ಕಪಕ್ಕದ ರಾಜ್ಯಗಳಿಂದ ಬಿಹಾರಕ್ಕೆ ವಿಶೇಷ ಸೌಲಭ್ಯಗಳನ್ನು ಮಾಡಿ ರೈಲು ಕಳುಹಿಸಿಕೊಟ್ಟಿದ್ದಾರೆ. ಈ ರೀತಿ ಎಲ್ಲಾ ಮಾಡಿದ್ರೆ ನಾವು ಏನು ಹೇಳುವುದು ಎಂದು ದಿನೇಶ್ ಗುಂಡೂರಾವ್ ಹೇಳಿದರು.













