ಮತಗಳ್ಳತನ ಆರೋಪಕ್ಕೆ ಉತ್ತರಿಸುವ ಹೊಣೆ ಚುನಾವಣಾ ಆಯೋಗದ್ದು: ರಮಾನಾಥ ರೈ
ಮಂಗಳೂರು: ಲೋಕಸಭೆಯ ವಿಪಕ್ಷ ನಾಯಕನಾಗಿ ಚುನಾವಣಾ ಆಯೋಗದ ತಪ್ಪುಗಳನ್ನು ಬಹಿರಂಗಪಡಿಸಿರುವ ರಾಹುಲ್ ಗಾಂಧಿಯವರ ಪ್ರಶ್ನೆಗಳಿಗೆ ಉತ್ತರಿಸುವ ಹೊಣೆ ಚುನಾವಣಾ ಆಯೋಗದ್ದಾಗಿದೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಂವಿಧಾನಿಕ ಹುದ್ದೆಗಳಿಂದ ತಪ್ಪುಗಳಾದ ಅದನ್ನು ಪ್ರಶ್ನಿಸುವುದು ವಿಪಕ್ಷದ ಕರ್ತವ್ಯ ಅದನ್ನು ರಾಹುಲ್ ಗಾಂಧಿ ಮಾಡಿದ್ದು, ಅವರನ್ನು ಬೆಂಬಲಿಸುವುದಾಗಿ ಹೇಳಿದರು.
ಚುನಾವಣಾ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆ ತರುವಲ್ಲಿ ರಾಹುಲ್ ಗಾಂಧಿಯ ಪ್ರಶ್ನೆಗಳು ಅವರು ಬಹಿರಂಗ ಪಡಿಸಿರುವ ಮತದಾರರ ಪಟ್ಟಿಯಲ್ಲಿನ ತಪ್ಪುಗಳು ಚರ್ಚೆಯ ವಿಚಾರವಾಗಿದೆ. ಇದಕ್ಕೆ ಚುನಾವಣಾ ಆಯೋಗದಿಂದ ಉತ್ತರ ಬೇಕಾಗಿದೆ. ಆದರೆ ಬಿಜೆಪಿ ಉತ್ತರಿಸುತ್ತಿದೆ. ಈ ಕುರಿತು ಲಿಂಬಾವಳಿಯವರು ನೀಡಿರುವ ಉತ್ತರ ಚುನಾವಣಾ ಆಯೋಗದ ತಪ್ಪು ಒಪ್ಪಿಕೊಂಡು ಪುಷ್ಟಿಕರಣ ನೀಡುವ ಕೆಲಸ ಆಗಿದ್ದು, ಇದು ಗಂಭೀರ ವಿಚಾರ ಎಂದವರು ಹೇಳಿದರು.
ಮತದಾರರ ಪಟ್ಟಿ ಶುದ್ದೀಕರಣಕ್ಕೆ ರಾಹುಲ್ ಗಾಂಧಿ ಹೆಜ್ಜೆ ಇರಿಸಿದ್ದು, ಅವರು ಕೇಳಿರುವಂತೆ ಚುನಾವಣಾ ಆಯೋಗ ಕಳೆದ 10 ವರ್ಷಗಳ ವೀಡಿಯೋ ಹಾಗೂ ಸಾಫ್ಟ್ ಕಾಪಿಯನ್ನು ಒದಗಿಸಬೇಕು. ಹಿಂದೆ ಮಹಾರಾಷ್ಟ್ರದ ಚುನಾವಣೆಯ ಸಂದರ್ಭದಲ್ಲಿಯೇ ರಾಹುಲ್ ಈ ಬಗ್ಗೆ ಧ್ವನಿ ಎತ್ತಿದ್ದರು. ಬಳಿಕ ಹರ್ಯಾಣದ ಚುನಾವಣೆಯ ಸಂದರ್ಭದಲ್ಲೂ ಮಾತನಾಡಿದ್ದಾರೆ. ಆದರೆ ಉತ್ತರದಾಯಿತ್ವ ಹೊಂದಿದವರು ಮೌನ ವಹಿಸಿದ್ದಾರೆ. ಇದೀಗ ಬಿಹಾರದ ಚುನಾವಣೆಯ ಸಂದರ್ಭದಲ್ಲಿ ಇಂತಹ ಪ್ರಶ್ನೆಗಳನ್ನು ಮತ್ತೆ ಎತ್ತಲಾಗಿದೆ. ರಾಹುಲ್ ಅವರ ಮೇಧಾವಿತನವನ್ನು ಒಪ್ಪುವ ಪರಿಸ್ಥಿತಿ ಇದ್ದು ಚುನಾವಣಾ ಪ್ರಕ್ರಿಯೆ ಪಾರದರ್ಶಕವಾಗಬೇಕಾದರೆ ಮತ ಕಳವು ನಿಲ್ಲಿಸುವಲ್ಲಿ ಎಲ್ಲರ ಪ್ರಯತ್ನ ಅಗತ್ಯವಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಶಶಿಧರ ಹೆಗ್ಡೆ ನವೀನ್ ಡಿಸೋಜ, ಇಬ್ರಾಹೀಂ ನವಾಝ್, ಆರ್.ಕೆ. ಪೃಥ್ವಿರಾಜ್, ಬಿ.ಎಂ. ಅಬ್ಬಾಸ್ ಅಲಿ, ಸುಹಾನ್ ಆಳ್ವ ಜಯಶೀಲ ಅಡ್ಯಂತಾಯ, ಅಶೋಕ್ ಡಿ.ಕೆ., ಪ್ರೇಮ್ ಬಳ್ಳಾಲ್ ಬಾಗ್, ಶಬೀರ್ ಎಸ್. ಯಶವಂತ ಪ್ರಭು, ಫಯಾಝ್ ಅಮೆಮಾರ್ ಉಪಸ್ಥಿತರಿದ್ದರು.