ಮದರಸಕ್ಕೆ ಹೋಗಿ ಮನೆಗೆ ಹಿಂದಿರುಗುತ್ತಿದ್ದ 6 ವರ್ಷದ ಬಾಲಕನ ಮೇಲೆ ಬೀದಿ ನಾಯಿ ದಾಳಿ
ಬಜ್ಪೆ: ಮದರಸಕ್ಕೆ ಹೋಗಿ ಮನೆಗೆ ಹಿಂದಿರುಗುತ್ತಿದ್ದ 6 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ ಘಟನೆ ಬಜ್ಪೆ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೌಹಾರ್ದ ನಗರದಲ್ಲಿ ಗುರುವಾರ ಬೆಳಗ್ಗೆ ವರದಿಯಾಗಿದೆ.
ಸೌಹಾರ್ದ ನಗರದ ನಿವಾಸಿ ಮುಹಮ್ಮದ್ ಅಝರ್ ಅವರ ಪುತ್ರ ಅಹಿಲ್ ಗಾಯಗೊಂಡ ಬಾಲಕ ಎಂದು ತಿಳಿದು ಬಂದಿದೆ.
ಬೆಳಗ್ಗೆ ಮನೆಯ ಸಮೀಪದ ಮದರಸಕ್ಕೆ ತೆರಳಿ ವಾಪಸ್ ಮನೆಗೆ ಮರಳುವ ವೇಳೆ ಏಕಾಏಕಿ ಸುತ್ತುವರಿದ ಬೀದಿ ನಾಯಿಗಳು ಮಗುವಿನ ಕೆನ್ನೆ, ಕೈಗೆ ಕಚ್ಚಿ ಗಂಭೀರ ಗಾಯಗೊಳಿಸಿದೆ ಎಂದು ತಿಳಿದು ಬಂದಿದೆ.
ಘಟನೆ ಮನೆಯ ಮುಂಭಾಗದ ರಸ್ತೆಯಲ್ಲಿ ನಡೆದಿದ್ದ ಪರಿಣಾಮ ಬಾಲಕನ ಬೊಬ್ಬೆ ಕೇಳಿ ಹೊರಬಂದ ತಾಯಿ ಪುತ್ರನನ್ನು ರಕ್ಷಿಸಿದ್ದಾರೆ.
ತಕ್ಷಣವೇ ಬಜ್ಪೆ ಸರಕಾರಿ ಆಸ್ಪತ್ರೆಗೆ ದಾಖಲಿಸಿದರು. ಹೆಚ್ಚಿನ ಚಿಕಿತ್ಸೆಗಾಗಿ ಕಟೀಲಿನ ದುರ್ಗ ಸಂಜೀವಿನಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.













