ಮನಪಾ ವ್ಯಾಪ್ತಿಯ ಸಮಗ್ರ ಒಳಚರಂಡಿ ಯೋಜನೆ; ಕಾಲಮಿತಿಯ ಕಾರ್ಯಯೋಜನೆ ಸಿದ್ಧಪಡಿಸಲು ಸಮಿತಿ ಶಿಫಾರಸು: ಐವನ್ ಡಿಸೋಜ

Spread the love

ಮನಪಾ ವ್ಯಾಪ್ತಿಯ ಸಮಗ್ರ ಒಳಚರಂಡಿ ಯೋಜನೆ; ಕಾಲಮಿತಿಯ ಕಾರ್ಯಯೋಜನೆ ಸಿದ್ಧಪಡಿಸಲು ಸಮಿತಿ ಶಿಫಾರಸು: ಐವನ್ ಡಿಸೋಜ

ಮಂಗಳೂರು: ಸ್ಮಾರ್ಟ್ ಸಿಟಿ ಮಂಗಳೂರಿನಲ್ಲಿ ತೀವ್ರವಾಗಿ ಹದಗೆಟ್ಟಿರುವ ಒಳಚರಂಡಿ ವ್ಯವಸ್ಥೆ ಕುರಿತಂತೆ ಸಾರ್ವಜನಿಕ ಉದ್ಯಮಗಳ ಸಮಿತಿಯು ಸಮಗ್ರ ಒಳಚರಂಡಿ ಯೋಜನೆಗೆ ಪೂರಕವಾಗಿ ಕಾಲಮಿತಿಯ ಯೋಜನೆಯನ್ನು ಸಿದ್ಧಪಡಿಸಿ ಅನುಷ್ಠಾನಗೊಳಿಸುವಂತೆ ಸರಕಾರಕ್ಕೆ ಶಿಫಾರಸು ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದರು.

ಲಾಲ್‌ಬಾಗ್‌ಗನ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಕರ್ನಾಟಕ ವಿಧಾನಸಭೆ ಹಾಗೂ ವಿಧಾನ ಮಂಡಲಗಳ 20 ಮಂದಿ ಶಾಸಕರನ್ನು ಒಳಗೊಂಡ ಈ ಸಮಿತಿಯು ಮಂಗಳೂರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಆಧಾರದಲ್ಲಿ ನೀಡಿರುವ ವರದಿಯಲ್ಲಿ ಈ ಶಿಫಾರಸ್ಸು ಮಾಡಿದೆ ಎಂದರು.

ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಸಮಾಲೋಚಕರನ್ನು ನೇಮಕ ಮಾಡಲು ನಗರಾಭಿವೃದ್ಧಿ ಇಲಾಖೆಯು ಸರಕಾರಕ್ಕೆ ಪತ್ರೆ ಬರೆದಿದೆ. ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆಯಾಗಲಿದೆ ಎಂದು ಐವನ್ ಡಿಸೋಜಾ ಹೇಳಿದರು.

ನಗರದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ, ತ್ವರಿತ ನಗರೀಕರಣ ಹಾಗೂ ಸಮರ್ಪಕ ನೈರ್ಮಲ್ಯ ಮೂಲಸೌಕರ್ಯಗಳ ಅಗತ್ಯತೆ ಪರಿಗಣಿಸಿ ಗುರುತಿಸಲಾದ ಪ್ರದೇಶಗಳಲ್ಲಿ ಭೂಗತ ಒಳರಂಡಿ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳುವುದು ಅಗತ್ಯವಾಗಿದೆ. ಒಳಚರಂಡಿ ವ್ಯವಸ್ಥೆಯ ಕೊರತೆಯಿಂದ ಪರಿಸರ ಸಂಬಂಧಿ ಸಮಸ್ಯೆಗಳು, ಅನೈರ್ಮಲ್ಯ ಪರಿಸ್ಥಿತಿ, ಜಲಮೂಲಗಳ ಮಾಲಿನ್ಯ ಹಾಗೂ ಸಾರ್ವಜನಿಕರಿಗೆ ಅನಾನುಕೂಲತೆಗಳು ಉಂಟಾಗಿವೆ. ಕಾಮಗಾರಿಗಳನ್ನು ಸಕಾಲದಲ್ಲಿ ಅನುಷ್ಠಾನಗೊಳಿಸದಿರುವುದರಿಂದ ಸಾರ್ವಜನಿಕ ಆರೋಗ್ಯ ಸುಧಾರಣೆ, ನೀರು ನಿಲ್ಲುವ ಸಮಸ್ಯೆ ತಡೆಗಟ್ಟುವುದು, ನೈರ್ಮಲ್ಯ ಮಟ್ಟವನ್ನು ಹೆಚ್ಚಿಸುವುದು ಹಾಗೂ ಸುಸ್ಥಿರ ನಗರಾಭಿವೃದ್ಧಿಗೆ ಉತ್ತೇಜನ ನೀಡುವುದು ಸಾಧ್ಯವಾಗುತ್ತದೆ ಎಂದು ಶಿಫಾರಸು ಮಾಡಿರುವ ಸಮಿತಿಯು, ಪ್ರಸಕ್ತ ಜಲ ಸಂಸ್ಕರಣಾ ಘಟಕಗಳಿಂದ ಸಂಸ್ಕರಿಸಿದ ನೀರನ್ನು ರಾಜಕಾಲುವೆಗಳ ಮೂಲಕ ನದಿಗಳಿಗೆ ಹರಿಸಲಾಗುತ್ತಿದೆ. ಇದರಿಂದ ಜಲಮೂಲಗಳು ಕಲುಷಿತವಾಗುತ್ತಿದೆ. ಈ ವಿಸ್ತೃತ ಯೋಜನೆ ತಯಾರಿಸುವಾಗ ಸಂಸ್ಕರಿಸಿದ ನೀರನ್ನು ಮರುಬಳಕೆಗೆ ಬೇಕಾಗಿರುವ ಅಗತ್ಯ ಕಾಮಗಾರಿಗಳನ್ನು ಸೇರಿಸಬೇಕು ಎಂದು ಉಲ್ಲೇಖಿಸಿದೆ. ಈಗಾಗಲೇ ಕೈಗೊಂಡ ಕಾಮಗಾರಿಗಳಲ್ಲಿ ಹಲವಾರು ನ್ಯೂನ್ಯತೆಗಳಿದ್ದು ಸಿಎಜಿಯವರು ಲೆಕ್ಕ ಪರಿಶೋಧನೆಯಲ್ಲಿ ಗಮನಿಸಿ ವರದಿ ಮಾಡಿದಾದರೆ. ಹೊಸ ಸಮಗ್ರ ಯೋಜನೆಯಲ್ಲಿ ಲೋಪದೋಷಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಿ ದುಂದು ವೆಚ್ಚ ತಡೆಯಬೇಕು. ಪ್ರಸ್ತಾವಿತ ಸಮಗ್ರ ಯೋಜೆಗೆ ಸುಮಾರು 1250 ಕೋಟಿ ರೂ. ಅಗತ್ಯವಿರುವುದಾಗಿ ಪಾಲಿಕೆ ತಿಳಿಸಿದೆ. ಯೋಜನೆಗೆ ಡಿಪಿಆರ್ ತಯಾರಸಿ ಅಗತ್ಯ ಆಡಳಿತಾತ್ಮಕ ಅನುಮೋದನೆಗಳು, ಅನುದಾನ ಹಂಚಿಕೆ ಹಾಗೂ ಕಾಮಗಾರಿಗಳ ತ್ವರಿತ ಅನುಷ್ಠಾನಕ್ಕೆ ಸರಕಾರ ಕ್ರಮ ವಹಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ ಎಂದು ಐವನ್ ಡಿಸೋಜಾ ತಿಳಿಸಿದರು.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 1952ರಲ್ಲಿ ಆರಂಭಗೊಂಡ ಒಳಚರಂಡಿ ವ್ಯವಸ್ಥೆ ಇಂದಿನವರೆಗೂ ಅಸಮರ್ಪಕವಾಗಿಯೇ ಮುಂದುವರಿದಿದೆ. ಇದರಿಂದಾಗಿ ನಗರದ ಹೃದಯ ಭಾಗದಲ್ಲಿಯೂ ಒಳಚರಂಡಿ ವ್ಯವಸ್ಥೆಗಾಗಿ ಪಿಟ್‌ಗಳನ್ನೇ ಬಳಸಲಾಗುತ್ತಿದೆ. ಬೋಳಾರಕ್ಕೆ ಇತ್ತೀಚೆಗೆ ಭೇಟಿ ನೀಡಿದಾಗ ಅಲ್ಲಿ ದೇವಸ್ಥಾನದ ಸುತ್ತಮುತ್ತಲಿನ ಮನೆಗಳ ಬಾವಿ ನೀರು ಹದಗೆಟ್ಟ ಒಳಚರಂಡಿ ವ್ಯವಸ್ಥೆಯಿಂದಾಗಿ ಕಲುಷಿತಗೊಂಡಿರುವುದು ಕಂಡು ಬಂದಿದೆ. ಇತ್ತೀಚೆಗೆ ನಗರದ ಕದ್ರಿ ಭಾಗದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಹಾಳಾಗಿ ಅದರೊಳಗೆ ಒಳಚರಂಡಿ ನೀರು ಸೇರಿರುವ ಬಗ್ಗೆಯೂ ವರದಿಯಾಗಿದೆ. ನಗರದ ಬಹುತೇಕ ಕಡೆಗಳಲ್ಲಿ ಒಳಚರಂಡಿಯ ಅವ್ಯವಸ್ಥೆಯಿಂದಾಗಿ ಬಾವಿ ನೀರು ಕಲುಷಿತವಾಗಿದ್ದು, ಹಲವು ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿಗೊಂಡ ಕೆರೆಗಳ ನೀರೂ ಕೊಳಚೆಯಾಗಿದೆ. ಈ ಬಗ್ಗೆ ಹಿಂದೆ ಪಾಲಿಕೆಯ ಪರಿಷತ್ತು ಸಭೆಯಲ್ಲಿ ಬಿಜೆಪಿ ಆಡಳಿತದ ಸಂದರ್ಭದಲ್ಲಿ ಧ್ವನಿ ಎತ್ತಿದ್ದಾಗ ಅಂದಿನ ಮೇಯರ್ ಎಲ್ಲವೂ ಸಮರ್ಪಕವಾಗಿದೆ ಎಂದು ಹೇಳಿಕೆ ನೀಡಿದ್ದರು. ಆದರೆ ಇತ್ತೀಚೆಗೆ ಕದ್ರಿಯಲ್ಲಿ ಕಲುಷಿತ ನೀರು ಪೂರೈಕೆಯಿಂದ ಸಾರ್ವಜನಿಕರಿಗೆ ತೊಂದರೆ ಉಂಟಾದಾಗ ಬಿಜೆಪಿಯ ಶಾಸಕರು ಅದು ಕಾಂಗ್ರೆಸ್ ಆಡಳಿತದ ನಗರ ಪಾಲಿಕೆ ಕಾರಣ ಎನ್ನುತ್ತಾರೆ. ಕಳೆದ ಹಲವಾರು ವರ್ಷಗಳಿಂದ ಹದಗೆಟ್ಟಿರುವ ಒಳಚರಂಡಿ ವ್ಯವಸ್ಥೆಯ ಬಗ್ಗೆ ಕಳೆದ ಎಂಟು ವರ್ಷಗಳಿಂದ ಶಾಸಕರಾಗಿರುವ ವೇದವ್ಯಾಸ ಕಾಮತ್ ಅವರು ಕೇಂದ್ರ ಅಥವಾ ರಾಜ್ಯ ಸರಕಾರದಿಂದ ಈ ಬಗ್ಗೆ ಸಮಗ್ರ ಯೋಜನೆಗೆ ಕ್ರಮ ವಹಿಸಿದ್ದಾರೆಯೇ ಎಂದು ಪ್ರಶ್ನಿಸಿದ ಐವನ್ ಡಿಸೋಜಾ, ಈ ರೀತಿ ಆರೋಪ ಮಾಡುವುದರಿಂದ ಜನರಿಗೆ ಮೂಲಭೂತ ಸೌಲಭ್ಯ ಒದಗಿಸಲು ಸಾಧ್ಯವಿಲ್ಲ. ನಗರದ ಒಳಚರಂಡಿಯ ಸಮಗ್ರ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಕಾರದ ಅಗತ್ಯವಿದೆ. ಹಾಗಾಗಿ ರಾಜಕೀಯ ಬದಿಗಿಟ್ಟು ಸ್ಥಳೀಯ ಶಾಸಕರು, ಸಂಸದರು ಜತೆಯಾಗಿ ಪ್ರಯತ್ನಿಸಬೇಕಿದೆ ಎಂದು ಹೇಳಿದರು.

ಎಸ್‌ಐಆರ್ ಪ್ರಕ್ರಿಯೆಗೆ ವೇಗ ನೀಡಿ- ಬಿಎಲ್‌ಒ ಜತೆ ಫಾರಂ ಭರ್ತಿ ಮಾಡಲು ತಜ್ಞರನ್ನು ಕಳುಹಿಸಿ

ದ.ಕ. ಜಿಲ್ಲೆಯಾದ್ಯಂತ ಎಸ್‌ಐಆರ್ ಪ್ರಕ್ರಿಯೆ ಆಮೆಗತಿಯಲ್ಲಿ ಸಾಗಿದ್ದು, ಅದಕ್ಕೆ ವೇಗ ತುಂಬಬೇಕಾಗಿದೆ. ಈಗಿನ ಪರಿಸ್ಥಿತಿಯಲ್ಲಿ ಬಿಎಲ್‌ಒಗಳು ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರತಿಯೊಬ್ಬ ಮತದಾರರ ಮನೆಗೆ ತಲುಪಲು ಸಾಧ್ಯವಾಗದು. ಜತೆಗೆ ಕೆಲವೊಂದು ಬಿಎಲ್‌ಒಗಳಿಗೆ ಫಾರಂ ಭರ್ತಿ ಮಾಡುವ ಜ್ಞಾನವೂ ಇಲ್ಲವಾಗಿದೆ. ಅದಕ್ಕಾಗಿ ಅವರ ಜತೆ ತಜ್ಞರನ್ನು ಕಳುಹಿಸುವ ಮೂಲಕ ಎಸ್‌ಐಆರ್ ಪ್ರಕ್ರಿಯೆ ಜಿಲ್ಲೆಯಲ್ಲಿ ಸಮರ್ಪಕವಾಗಿ ನಡೆಯುವಂತೆ ಜಿಲ್ಲಾಧಿಕಾರಿಗಳು ಕ್ರಮ ವಹಿಸಬೇಕು ಎಂದು ಐವನ್ ಡಿಸೋಜಾ ಆಗ್ರಹಿಸಿದರು.

ಎಲ್ಲಾ ಮನೆಗಳಗೆ ಎನ್ಯುಮರೇಶನ್ ಫಾರಂ ನೀಡಲಾಗಿದೆ ಎಂದು ಜಿಲ್ಲಾಡಳಿತ ಹೇಳಿದೆ. ಆದರೆ ವಾಸ್ತವದಲ್ಲಿ ಐದು ಮಂದಿ ಮತದಾರರಿದ್ದಲ್ಲಿ ಮೂವರಿಗೆ ಮಾತ್ರವೇ ಎನ್ಯುಮರೇಶನ್ ಫಾರಂ ನೀಡಲಾಗಿದೆ. ಇವೆಲ್ಲವೂ ಅನುಮಾನಕ್ಕೆ ಕಾರಣವಾಗುತ್ತದೆ. ಮತದಾರರ ಪಟ್ಟಿಯಲ್ಲಿನ ಫೋಟೋ ಅಪ್‌ಗ್ರೇಡ್ ಮಾಡಲು ಅನುಕೂಲವಾಗುವಂತೆ ಬಿಎಲ್‌ಒಗಳಿಗೆ ಫೋಟೋ ಕ್ಯಾಪ್ಚರ್ ಆ್ಯಪ್ ಒದಗಿಸಿರುವುದಾಗಿ ಚುನಾವಣಾ ಆಯೋಗ ತಿಳಿಸಿದೆ. ಆದರೆ ಜಿಲ್ಲೆಯ ಅಪರ ಜಿಲ್ಲಾಧಿಕಾರಿಯವರು ನೀಡಿರುವ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಅದರ ವ್ಯವಸ್ಥೆ ಆಗಿಲ್ಲ ಎನ್ನಲಾಗಿದೆ. ಫಾರಂಗಳನ್ನು ಕನ್ನಡದ ಜತೆಗೆ ಆಂಗ್ಲ ಭಾಷೆಯಲ್ಲಿಯೂ ನೀಡುವಂತೆ ಜಿಲ್ಲಾಧಿಕಾರಿಗೆ ತಿಳಿಸಲಾಗಿದ್ದು, ಕ್ರಮ ವಹಿಸುವುದಾಗಿ ತಿಳಿಸಿದ್ದಾರೆ. ಮ್ಯಾಪಿಂಗ್‌ನಲ್ಲಿ ಬಿಟ್ಟು ಹೋಗಿರುವ ಜಿಲ್ಲೆಯ 1.92 ಲಕ್ಷ ಮತದಾರರು ಕೂಡಾ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯ ಅರ್ಹತೆ ಹೊಂದಿದ್ದು, ಅದಕ್ಕೆ ಅವಕಾಶ ಕಲ್ಪಿಸಬೇಕು. ಹೊಸ ಮತದಾರರನ್ನು ಸೇರಿಸುವ ಹಾಗೂ ಮೃತಪಟ್ಟವರು ಮತ್ತು ಬೇರೆಡೆ ನೆಲೆಸಿರುವವರ ಹೆಸರನ್ನು ಡಿಲೀಟ್ ಮಾಡುವ ಪ್ರಕ್ರಿಯೆಯೂ ನಡೆಯಬೇಕು ಎಂದು ಐವನ್ ಡಿಸೋಜಾ ಹೇಳಿದರು.


Spread the love
Subscribe
Notify of

0 Comments