ಮೀನುಗಾರರನ್ನು ನಿರ್ಲಕ್ಷಿಸಿದ ಅನಂತಕುಮಾರ್ ಹೆಗಡೆ ನಾಲಾಯಕ್ ಸಂಸದ – ಪ್ರಮೋದ್ ಮದ್ವರಾಜ್

Spread the love

ಮೀನುಗಾರರನ್ನು ನಿರ್ಲಕ್ಷಿಸಿದ ಅನಂತಕುಮಾರ್ ಹೆಗಡೆ ನಾಲಾಯಕ್ ಸಂಸದ – ಪ್ರಮೋದ್ ಮದ್ವರಾಜ್

ಭಟ್ಕಳ: ಉತ್ತರ ಕನ್ನಡದಲ್ಲಿ ಸತತವಾಗಿ ಆಯ್ಕೆಯಾಗಿ ಬರುತ್ತಿರುವ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಒಬ್ಬ ಮೀನುಗಾರರ ಸಮಸ್ಯೆಗೂ ಸ್ಪಂದಿಸಿಲ್ಲ. ಹಾಗಾಗಿ ಅವರನ್ನು ಬೆಂಬಲಿಸಬಾರದು ಎಂದು ಉಡುಪಿ ಲೋಕಸಭಾ ಕ್ಷೇತ್ರದ ಮೈತ್ರಿ ಪಕ್ಷದ ಅಭ್ಯರ್ಥಿ ಪ್ರಮೋದ್ ಮದ್ವರಾಜ್ ಹೇಳಿದರು.

‘ತಮ್ಮದೇ ಜಿಲ್ಲೆಯ ಮೀನುಗಾರರು ನಾಪತ್ತೆಯಾಗಿ ನಾಲ್ಕು ತಿಂಗಳು ಕಳೆದರೂ ಅವರ ಪತ್ತೆ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದ, ಅವರ ಮನೆಗಳಿಗೆ ಭೇಟಿ ನೀಡುವ ಸೌಜನ್ಯ ತೋರದ, ಅಭಿವೃದ್ಧಿ ಕೆಲಸ ಮಾಡದ ಅನಂತಕುಮಾರ್ ಹೆಗಡೆಯಂಥ ನಾಲಾಯಕ್ ಸಂಸದ ಕರಾವಳಿ ಜಿಲ್ಲೆಯಷ್ಟೇ ಅಲ್ಲ ಜಗತ್ತಿನಲ್ಲೇ ಇಲ್ಲ ಎಂದರು.

ನಾಪತ್ತೆಯಾದ ಮೀನುಗಾರರನ್ನೇ ಹುಡುಕಿಕೊಡಲಾಗದ ಮೋದಿ ಸರ್ಕಾರದಿಂದ ಇನ್ನು ದೇಶದ ರಕ್ಷಣೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸಹ ಇದಕ್ಕೆ ಹೊಣೆಗಾರರಾಗಿದ್ದಾರೆ. ನಾಪತ್ತೆಯಾದ ಮೀನುಗಾರರು ಹಾಗೂ ದೋಣಿಯನ್ನು ಹುಡುಕಿಕೊಡಬೇಕು ಎಂಬುದು ನಮ್ಮ ಬೇಡಿಕೆಯಾಗಿದ್ದು, ಅದನ್ನು ಈಡೇರಿಸಲು ಸಾಧ್ಯವಾಗದೇ ಇರುವ ಅನಂತಕುಮಾರ್ ಹೆಗಡೆ ಅವರಿಗೆ ಮೀನುಗಾರರು ಒಂದೇ ಒಂದು ಮತವನ್ನು ಹಾಕಬಾರದು ಎಂದು ಮೀನುಗಾರ ಕುಟುಂಬದವನೂ ಆದ ನಾನು ಪ್ರಾರ್ಥನೆ ಮಾಡಿಕೊಳ್ಳುತ್ತೇನೆ’ ಎಂದರು.

‘ಅನಂತಕುಮಾರ್ ಹೆಗಡೆ, ನಾವು ಮಾಡಿದ ಕೆಲಸದ ಬಗ್ಗೆ ಹೇಳುವುದಿಲ್ಲ. ಜಿಲ್ಲೆಗೆ ಕೆಲಸ ಮಾಡುವ ಸಂಸದರ ಅಗತ್ಯವಿದೆ, ಈ ನಿಟ್ಟಿನಲ್ಲಿ ಆನಂದ ಆಸ್ನೋಟಿಕರ್ ಯೋಗ್ಯರಿದ್ದಾರೆ. ಜನರ ಸಂಕಷ್ಟಕ್ಕೆ ಬರುತ್ತಾರೆ, ಕೆಲಸ ಮಾಡುತ್ತಾರೆ ಅವರನ್ನು ಮೀನುಗಾರರು ಬೆಂಬಲಿಸಬೇಕು’ ಎಂದರು.

ಈಗಿನ ಕೇಂದ್ರ ಸರ್ಕಾರದಿಂದ ಮೀನುಗಾರರಿಗೆ ಒಂದು ನಯಾಪೈಸೆ ಪ್ರಯೋಜನವಾಗಿಲ್ಲ. ಬಂದರ್ ಅಭಿವೃದ್ಧಿಗೆ ಮೀಸಲಿದ್ದ ಹಣವನ್ನು ಕಡಿತ ಮಾಡಲಾಗಿದೆ. ಡೀಸೆಲ್ ಸಬ್ಸಿಡಿ ರಾಜ್ಯ ಸರ್ಕಾರ ನೀಡುತ್ತಿದೆ. ಮುಂದೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ರಾಹುಲ್ ಗಾಂಧಿ ಪ್ರಧಾನಿ ಆದಾಗ, ಕರಾವಳಿ ಭಾಗದ ಸಂಸದರಾಗುವು ನಾವು, ಮೀನುಗಾರರ ಅಭಿವೃದ್ಧಿಗೆ ವಿಶೇಷ ಯೋಜನೆ ಜಾರಿಗೊಳಿಸಲಿದ್ದೇವೆ’ ಎಂದು ಭರವಸೆ ನೀಡಿದರು.

ಮಾಜಿ ಶಾಸಕ ಮಂಕಾಳ ವೈದ್ಯ, ಜಿಲ್ಲಾಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ನಾಯ್ಕ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಈಶ್ವರ ನಾಯ್ಕ ಹಾಜರಿದ್ದರು.


Spread the love