ಮುಕ್ಕಚೇರಿ| ಕೊಲೆ, ಕೊಲೆಯತ್ನ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ

Spread the love

ಮುಕ್ಕಚೇರಿ| ಕೊಲೆ, ಕೊಲೆಯತ್ನ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ

ಮಂಗಳೂರು: ಉಳ್ಳಾಲದ ಮುಕ್ಕಚೇರಿಯಲ್ಲಿ 2017ರ ಅ.4ರಂದು ರಾತ್ರಿ ಝುಬೇರ್ ಎಂಬವರ ಕೊಲೆ ಮತ್ತು ಇಲ್ಯಾಸ್ ಎಂಬವರ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಮುಕ್ಕಚೇರಿಯ ಅಬ್ದುಲ್ ರಹ್ಮಾನ್ ಸುಹೇಲ್ ಎಂಬಾತನಿಗೆ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಪ್ರಕಟಿಸಿದೆ.

ಝುಬೇರ್ ಮತ್ತು ಇಲ್ಯಾಸ್ ಮಾತನಾಡುತ್ತಿದ್ದ ವೇಳೆ ತಂಡವೊಂದು ಮಾರಕಾಯುಧದಿಂದ ದಾಳಿ ನಡೆಸಿ ಝುಬೇರ್‌ನನ್ನು ಕೊಲೆ ಮಾಡಿತ್ತು. ತಡೆಯಲು ಹೋದ ಇಲ್ಯಾಸ್ ನಿಗೂ ತಲವಾರಿನಿಂದ ದಾಳಿ ಮಾಡಿ ಗಂಭೀರ ಗಾಯಗೊಳಿಸಿತ್ತು.

ಈ ಬಗ್ಗೆ ಅಂದಿನ ಇನ್‌ಸ್ಪೆಕ್ಟರ್ ಗೋಪಿಕೃಷ್ಣ ಕೆ.ಆರ್. ಆರೋಪಿಗಳಾದ ಅಬ್ದುಲ್ ರಹಿಮಾನ್ ಸುಹೃಲ್, ನಿಝಾಮ್ ಯಾನೆ ನಿಝಾಮುದ್ದೀನ್, ತಾಜುದ್ದೀನ್, ಮುಸ್ತಫಾ ಯಾನೆ ಮುಹಮ್ಮದ್ ಮುಸ್ತಫಾ, ಅಲ್ತಾಫ್, ಆಸೀಫ್ ಯಾನೆ ಮಂದ ಆಸೀಫ್, ನಾಸೀರ್ ಯಾನೆ ಕಡಪ್ಪರ ನಾಸಿರ್ ಎಂಬವರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ನಿಝಾಮ್ ಯಾನೆ ನಿಝಾಮುದ್ದೀನ್, ತಾಜುದ್ದೀನ್, ಮುಸ್ತಫಾ ಎಂಬವರಿಗೆ 2022ರ ಎಪ್ರಿಲ್ 20ರಂದು ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿತ್ತು. ಆಸೀಫ್ ಯಾನೆ ಮಂದ ಆಸೀಫ್ ಮತ್ತು ನಾಸಿರ್ ಯಾನೆ ಕಡಪ್ಪರ ನಾಸಿರ್‌ನನ್ನು ಖುಲಾಸೆಗೊಳಿಸಿತ್ತು. ಐದನೆ ಆರೋಪಿ ಅಲ್ತಾಫ್ ಮೃತಪಟ್ಟಿದ್ದ.

ನ್ಯಾಯಾಲಯದಿಂದ ಜಾಮೀನು ಪಡೆದು ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಅಬ್ದುಲ್ ರಹಿಮಾನ್ ಸುಹೇಲ್‌ನನ್ನು ಪೊಲೀಸರು ಮತ್ತೆ ಬಂಧಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶೆ ಸುನೀತಾ ಎಪ್ರಿಲ್ 22ರಂದು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಮೋಹನ್ ವಾದಿಸಿದ್ದರು.


Spread the love
Subscribe
Notify of

0 Comments
Inline Feedbacks
View all comments