ಮುಷ್ಕರ ನಡೆಸಿದ ಸಾರಿಗೆ ಸಂಘಟನೆಗೆ ಹೈಕೋರ್ಟ್ ತರಾಟೆ, ಹೈಕೋರ್ಟ್ ಛೀಮಾರಿ ಬೆನ್ನಲ್ಲೇ ರಸ್ತೆಗಿಳಿದ ಬಸ್ಸುಗಳು

Spread the love

ಮುಷ್ಕರ ನಡೆಸಿದ ಸಾರಿಗೆ ಸಂಘಟನೆಗೆ ಹೈಕೋರ್ಟ್ ತರಾಟೆ, ಹೈಕೋರ್ಟ್ ಛೀಮಾರಿ ಬೆನ್ನಲ್ಲೇ ರಸ್ತೆಗಿಳಿದ ಬಸ್ಸುಗಳು

ಬೆಂಗಳೂರು : ರಾಜ್ಯ ಸರಕಾರ ಎಸ್ಮಾ ಕಾಯ್ದೆ ಜಾರಿಗೊಳಿಸಿದ ನಂತರ ಹಾಗೂ ಮುಷ್ಕರವನ್ನು ಒಂದು ದಿನದ ಮಟ್ಟಿಗೆ ತಡೆಯುವಂತೆ ನ್ಯಾಯಾಲಯ ಆದೇಶಿಸಿದ ನಂತರವೂ ಮುಷ್ಕರ ಮುಂದುವರಿಸಿದ ಸಾರಿಗೆ ನೌಕರರ ಸಂಘಟನೆಗಳ ಕ್ರಮಕ್ಕೆ ಹಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇದೇ ವೇಳೆ, ಮುಷ್ಕರಕ್ಕೆ ತಡೆ ನೀಡಿ ಸೋಮವಾರ ಹೊರಡಿಸಲಾಗಿದ್ದ ಮಧ್ಯಂತರ ಆದೇಶವನ್ನು ಎರಡು ದಿನಗಳ ಕಾಲ ವಿಸ್ತರಿಸಿದೆ.

ಹಿಂಬಾಕಿ ಪಾವತಿ ಮತ್ತು ವೇತನ ಪರಿಷ್ಕರಣೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಎಸ್ಸಾರ್ಟಿಸಿ ನೌಕರರು ನಡೆಸಲು ಮುಂದಾಗಿದ್ದ ಮುಷ್ಕರ ಪ್ರಶ್ನಿಸಿ ಬೆಂಗಳೂರಿನ ಜೆ.ಸುನೀಲ್‌ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತು ಮಂಗಳವಾರ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ಅವರಿದ್ದ ವಿಭಾಗೀಯ ನ್ಯಾಯಪೀಠ, ಹೈಕೋರ್ಟ್ ಆದೇಶದ ಹೊರತಾಗಿಯೂ ಮುಷ್ಕರ ಮುಂದುವರಿಸಿದ ಸಾರಿಗೆ ಸಿಬ್ಬಂದಿಯ ನಡೆಯನ್ನು ಟೀಕಿಸಿತು.

ಅರ್ಜಿ ವಿಚಾರಣೆ ಆರಂಭವಾಗುತ್ತಿದ್ದಂತೆ ಅಡ್ವೊಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ ಅವರು, ಒಂದು ದಿನದ ಮಟ್ಟಿಗೆ ಮುಷ್ಕರ ಮುಂದೂಡುವಂತೆ ನ್ಯಾಯಾಲಯ ಸೂಚಿಸಿದ್ದರೂ ಪ್ರತಿಭಟನೆ ನಡೆಸುತ್ತಿದ್ದಾರೆ. ಸಂಧಾನದ ಮೂಲಕ ಬಗೆಹರಿಸಲು ಸರ್ಕಾರ ಸಿದ್ಧವಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಸಾರಿಗೆ ನೌಕರರ ಒಕ್ಕೂಟದ ಪರ ವಕೀಲರು, ನಿನ್ನೆ ಸಂಜೆಯಷ್ಟೇ ನೋಟಿಸ್‌ ನೀಡಲಾಗಿದೆ ಎಂದರು. ಅದಕ್ಕೆ ನ್ಯಾಯಪೀಠ, ಮುಷ್ಕರ ನಿಲ್ಲಿಸಲಾಗಿದೆಯೇ? ಎಸ್ಮಾ ಕಾಯ್ದೆ ಅಡಿ ಆದೇಶ ಹೊರಡಿಸಿದ ನಂತರ ಮುಷ್ಕರ ನಡೆಸುವುದು ಕಾನೂನುಬಾಹಿರವಾಗಲಿದೆ. ಇದು ನ್ಯಾಯಾಂಗ ನಿಂದನೆಯಾಗಿದೆ. ಒಕ್ಕೂಟದ ಪದಾಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಜರುಗಲಿದೆ. ಪೊಲೀಸರು ಪ್ರತಿಭಟನಾನಿರತ ಸಂಘಗಳ ಪದಾಧಿಕಾರಿಗಳನ್ನು ಬಂಧಿಸಲಿದ್ದಾರೆ. ನಾವು ಬಂಧನಕ್ಕೆ ಆದೇಶಿಸುತ್ತೇವೆ ಎಂದು ತೀಕ್ಷ್ಣವಾಗಿ ನುಡಿಯಿತು.

ಅದಕ್ಕೆ ಪ್ರತಿಕ್ರಿಯಿಸಿದ ಒಕ್ಕೂಟದ ಪರ ವಕೀಲರು, ಎರಡು ದಿನ ಕಾಲಾವಕಾಶ ನೀಡಬೇಕು. ನಾಳೆ ಮುಷ್ಕರ ನಡೆಸುವುದಿಲ್ಲ. ನಾವು ಮುಷ್ಕರ ನಿಲ್ಲಿಸುತ್ತೇವೆ ಎಂದರು. ಆಗ ನ್ಯಾಯಪೀಠ, ಸಾರ್ವಜನಿಕರಿಗೆ ಸಮಸ್ಯೆ ಮಾಡಲಾಗದು. ನಿಮ್ಮ ಮುಷ್ಕರ ನಿರ್ಧಾರ ಕಾನೂನುಬಾಹಿರ ಕ್ರಮವಾಗಿದ್ದು, ಅದರ ಪರಿಣಾಮಗಳನ್ನು ಎದುರಿಸಬೇಕಾಗಲಿದೆ ಎಂದು ಎಚ್ಚರಿಸಿತು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಎಲ್ಲ ನಾಲ್ಕೂ ಸಾರಿಗೆ ನಿಗಮಗಳ ನೌಕರರ ಸಂಘಕ್ಕೆ ನೋಟಿಸ್‌ ಜಾರಿ ಮಾಡುವಂತೆ ಸೂಚಿಸಿತಲ್ಲದೆ, ಮುಷ್ಕರ ಮುಂದುವರಿಸಿದರೆ ಎಸ್ಮಾ ಅಡಿ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಅವಕಾಶವಿದೆ ಎಂದು ತಿಳಿಸಿತು. ಮುಷ್ಕರಕ್ಕೆ ತಡೆ ನೀಡಿದ್ದ ಮಧ್ಯಂತರ ಆದೇಶವನ್ನು ಎರಡು ದಿನ ವಿಸ್ತರಿಸಿದ ನ್ಯಾಯಪೀಠ, ಆಗಸ್ಟ್‌ 7ಕ್ಕೆ ಅರ್ಜಿ ವಿಚಾರಣೆ ಮುಂದೂಡಿತು.

ಕರ್ನಾಟಕ ಹೈಕೋರ್ಟ್ ಖಡಕ್​ ಎಚ್ಚರಿಕೆ ನೀಡಿದ ಬೆನ್ನಲ್ಲೇ ಮುಷ್ಕರ ಕೈಬಿಟ್ಟ ಸಾರಿಗೆ ನೌಕರರು ಮತ್ತೆ ಎಂದಿನಂತೆ ಕೆಲಸಕ್ಕೆ ಹಾಜರಾಗಿದ್ದು, ರಾಜ್ಯಾದ್ಯಂತ ನಾಲ್ಕೂ ನಿಗಮಗಳ (KSRTC, NWKRTC, KKRTC, BMTC) ಬಸ್​ ಸಂಚಾರ ಆರಂಭವಾಗಿವೆ. ಬೆಂಗಳೂರಿನ ಕೆಂಪೇಗೌಡ ಬಸ್​ ನಿಲ್ದಾಣ (ಮೆಜೆಸ್ಟಿಕ್​) ಬಸ್​ ನಿಲ್ದಾಣದಿಂದ ಬಸ್‌ಗಳ ಸಂಚಾರ ಶುರುಮಾಡಿವೆ. ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳು ಎಂದಿನಂತೆ ಓಡಾಟ ನಡೆಸಿದೆ. ಬಸ್​ ಸಂಚಾರ ಆರಂಭವಾಗಿದ್ದರಿಂದ ಪ್ರಯಾಣಿಕರು ಖುಷ್​ ಆಗಿದ್ದಾರೆ. ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣದಿಂದ ಕೂಡ ಬಿಎಂಟಿಸಿ ಬಸ್​ಗಳು ಸಂಚಾರ ಆರಂಭಿಸಿವೆ.


Spread the love