ಮೇ 16ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯರಿಂದ ನೂತನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಲೋಕಾರ್ಪಣೆ
ಮಂಗಳೂರು: ಪಡೀಲ್‌ನಲ್ಲಿ ಪಾರಂಪರಿಕ ಶೈಲಿಯಲ್ಲಿ ನಿರ್ಮಾಣವಾಗಿರುವ ನೂತನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣವನ್ನು ಮೇ 16ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಲೋಕಾರ್ಪಣೆಗೊಳಿಸಲಿದ್ದಾರೆ. ಇದೇ ಸಂದರ್ಭ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ಪೋಡಿ ಮುಕ್ತ ಅಭಿಯಾನದಡಿ 7,000 ಫಲಾನುಭವಿಗಳಿಗೆ ಆರ್‌ಟಿಸಿಗೆ ಸಂಬಂಧಿಸಿದ ಕಂದಾಯ ಇಲಾಖೆಯ ದಾಖಲೆಗಳನ್ನು ವಿತರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ದ.ಕ. ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ದ.ಕ. ಜಿಲ್ಲೆಗೆ ಸುಂದರ ಹಾಗೂ ಸುಸಜ್ಜಿತ ಜಿಲ್ಲಾ ಕಚೇರಿ ನಿರ್ಮಾಣವಾಗಿರುವುದು ಸಂತಸ ನೀಡಿದೆ ಎಂದರು.
ಹಿಂದಿನ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪಡೀಲ್‌ನಲ್ಲಿ ನೂತನ ಜಿಲ್ಲಾಧಿಕಾರಿ ಸಂಕೀರ್ಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. ಈ ಹಿಂದೆಯೇ ಈ ಕಚೇರಿ ಕಾಮಗಾರಿ ಪೂರ್ಣವಾಗಬೇಕಾಗಿತ್ತು. ಸುಮಾರು 55 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ಕಾಮಗಾರಿ ಮುಗಿದಿತ್ತು. ಇದೀಗ ಮತ್ತೆ ನಮ್ಮ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಸ್ಮಾರ್ಟ್ ಸಿಟಿಯ 20 ಕೋಟಿ ರೂ. ಹಣದಲ್ಲಿ ಬಾಕಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. 23 ಇಲಾಖೆಗಳು ಈ ನೂತನ ಕಚೇರಿಗೆ ಸ್ಥಳಾಂತರಿಸಲು ತೀರ್ಮಾನ ಮಾಡಲಾಗಿದೆ. ಬಹುತೇಕ ಇಲಾಖೆಗಳು ಉದ್ಘಾಟನೆಯ ಸಂದರ್ಭದಲ್ಲಿ ಸ್ಥಳಾಂತರಕ್ಕೆ ಕ್ರಮ ವಹಿಸಲಾಗಿದೆ. ಬಾಕಿ ಉಳಿದ ಕಚೇರಿಗಳು ಮುಂದಿನ ಮೂರು ವಾರಗಳೊಳಗೆ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿವೆ. ಈ ಕಟ್ಟಡ ಜಿಲ್ಲೆಯ ಆಡಳಿತ ವ್ಯವಸ್ಥೆಗೆ ಮೈಲಿಗಲ್ಲಾಗಿದ್ದು, ಹೊಸ ಕಚೇರಿ ಮೂಲಕ ಅಧಿಕಾರಿಗಳು ಪರಿಣಾಮಕಾರಿಯಾಗಿ ಜವಾಬ್ಧಾರಿ ನಿರ್ವಹಿಸಲು ಪ್ರೇರೇಪಿಸಲಿದೆ. ಸಾರ್ವಜನಿಕರಿಗೂ ಒಂದೇ ಸೂರಿನಡಿ ಸರಕಾರಿ ಸೇವೆಗಳು ಲಭ್ಯವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ನುಡಿದರು.
ಪೋಡಿ ಮುಕ್ತ ಅಭಿಯಾನದಡಿ ಜಿಲ್ಲೆಯ ವಿವಿಧ ತಾಲೂಕುಗಳ ಸುಮಾರು 10000 ಫಲಾನುಭವಿಗಳಿಗೆ ಕಂದಾಯ ಇಲಾಖೆಯಿಂದ ಆರ್‌ಟಿಸಿಗೆ ಸಂಬಂಧಿಸಿದ ದಾಖಲೆ ವಿತರಿಸಲು ಗುರಿ ಹೊಂದಲಾಗಿತ್ತು. ಬೆಳ್ತಂಗಡಿ, ಬಂಟ್ವಾಳ, ಪುತ್ತೂರು ಭಾಗದ ಹೆಚ್ಚಿನ ಫಲಾನುಭವಿಗಳನ್ನು ಒಳಗೊಂಡು ಮೇ 16ರಂದು 7000 ಮಂದಿ ಕಂದಾಯ ಇಲಾಖೆಯ ದಾಖಲೆಗಳನ್ನು ಪಡೆಯಲಿದ್ದಾರೆ ಎಂದವರು ಹೇಳಿದರು.
ಇದೇ ವೇಳೆ ಸುಮಾರು 35 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಸ್ಮಾರ್ಟ್ ಒಳಾಂಗಣ ಕ್ರೀಡಾಂಗಣವನ್ನು ಅದೇ ದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟಿಸುವರು. 200 ಮಂದಿ ವಿಕಲಚೇತನರಿಗೆ ವಿವಿಧ ಸೌಲಭ್ಯಗಳ ವಿತರಣೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಫಲಾನುಭವಿಗಳಿಗೆ ಸುಕನ್ಯಾ ಸಮೃದ್ಧಿ ಯೋಜನೆ, ಅಲ್ಪಸಂಖ್ಯಾತ ನಿಗಮದಿಂದ ಫಲಾನುಭವಿಗಳಿಗೆ ವಾಹನಗಳ ವಿತರಣೆ ಕಾರ್ಯ ಇದೇ ದಿನ ಪಡೀಲ್‌ನಲ್ಲಿ ನಡೆಯಲಿರುವ ಸಭಾಕಾರ್ಯಕ್ರಮದಲ್ಲಿ ನೆರವೇರಲಿದೆ ಎಂದು ಅವರು ಹೇಳಿದರು.
ಉಳ್ಳಾಲದ ಹಲವು ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ಕಾರ್ಯವೂ ಮೇ 16ರಂದು ನಿಗದಿಪಡಿಸಲಾಗಿತ್ತು. ಆದರೆ ಸ್ಪೀಕರ್ ಅವರು ಬೇರೆ ದಿನದಂದು ಕಾರ್ಯಕ್ರಮಕ್ಕೆ ದಿನ ನಿಗದಿ ಪಡಿಸುವುದಾಗಿ ತಿಳಿಸಿದ್ದಾರೆ. ಉಳಿದಂತೆ ಸಣ್ಣ ನೀರಾವರಿ ಇಲಾಖೆ, ಲೋಕೋಪಯೋಗಿ ಇಲಾಖೆಯ ಇನ್ನೂ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಬಾಕಿ ಇದೆ ಎಂದವರು ಹೇಳಿದರು.
ಗೋಷ್ಟಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾ, ಬೋಜೇಗೌಡ ಉಪಸ್ಥಿತರಿದ್ದರು.