ಯಾವುದೇ ದೇವಸ್ಥಾನದ ದುಡ್ಡು ಸರಕಾರದ ಖಜಾನೆ ಸೇರೊಲ್ಲ: ಸಚಿವ ರಾಮಲಿಂಗ ರೆಡ್ಡಿ ಸ್ಪಷ್ಟನೆ
ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ಸೇರಿದಂತೆ ರಾಜ್ಯದ ಯಾವುದೇ ದೇವಸ್ಥಾನದ ದುಡ್ಡು ಸರಕಾರದ ಖಜಾನೆ ಜಮೆಯಾಗುವುದಿಲ್ಲ. ಈ ಎಲ್ಲ ವಿಚಾರಗಳು ಗೊತ್ತಿದ್ದರೂ ಬಿಜೆಪಿ ರಾಜಕೀಯ ಲಾಭಕ್ಕಾಗಿ ದೇವಸ್ಥಾನಗಳ ಹಣ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗೆ ಬಳಕೆ ಮಾಡಲಾಗುತ್ತಿದೆ ಎಂದು ಅಪಪ್ರಚಾರ ಮಾಡುತ್ತಿದೆ ಎಂದು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದರು.
ಮಂಗಳೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಟೀಲ್ ಕ್ಷೇತ್ರದಲ್ಲಿ ಸೇವಾ ಶುಲ್ಕ ಏರಿಕೆ ಮಾಡಿರುವ ವಿಚಾರದಲ್ಲಿ ಸರಕಾರದ ಪಾತ್ರ ಇಲ್ಲ. ಅವರು ಸೇವಾ ಶುಲ್ಕ ಏರಿಕೆಗೆ ಸ್ವತಂತ್ರರು. ಇಂತಹ 398 ಸ್ವಾಯತ್ತ ಸಂಸ್ಥೆಗಳು ರಾಜ್ಯದಲ್ಲಿ ಇದೆ. ಕಟೀಲ್ ದೇವಸ್ಥಾನದಲ್ಲಿ ಸೇವಾ ಶುಲ್ಕ ಏರಿಕೆಯ ಬಗ್ಗೆ ಬಿಜೆಪಿ ಸರಕಾರ ವಿರುದ್ಧ ಅಪ್ರಚಾರ ಮಾಡುತ್ತಿದೆ. ಸೇವಾ ಶುಲ್ಕ ವಿಚಾರದಲ್ಲಿ ಸರಕಾರದ ಪಾತ್ರ ಇಲ್ಲ ಎಂದು ಕಟೀಲ್ ದೇವಸ್ಥಾನದ ಆಡಳಿತ ಸಮಿತಿ ಸ್ಪಷ್ಟನೆ ನೀಡಿದೆ ಎಂದರು.
*ಹಸ್ತಕ್ಷೇಪ ಮಾಡುವಂತಿಲ್ಲ : ಕಟೀಲು ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ್ದರೂ, ಅಲ್ಲಿಗೆ ಸರಕಾರ ಕಾರ್ಯ ನಿರ್ವಹಣಾಧಿಕಾರಿಯ ನೇಮಕ ಕೂಡಾ ಮಾಡುವಂತಿಲ್ಲ. ಆಡಳಿತ ಸಂಪೂರ್ಣ ದೇವಸ್ಥಾನದ ಮಂಡಳಿಗೆ ಸೇರಿರು ತ್ತದೆ. ಸರಕಾರ ಯಾವುದೇ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ನ್ಯಾಯಾಲಯದ ಆದೇಶವೇ ಇದೆ ಎಂದು ಸಚಿವರು ಸ್ಪಷ್ಟಪಡಿಸಿದರು.
2003ರಲ್ಲಿ ಧಾರ್ಮಿಕ ಪರಿಷತ್ ಕಾನೂನು ಜಾರಿಗೆ ಬಂದ ಬಳಿಕ ಒಂದು ದೇವಸ್ಥಾನದ ಹಣ ಇನ್ನೊಂದು ದೇವಸ್ಥಾನದ ಅಭಿವೃದ್ಧಿಗೆ ಬಳಸುವಂತಿಲ್ಲ. ಸರಕಾರದ ಖಜಾನೆಗೂ ಹಣ ಬರುವುದಿಲ್ಲ ಎಂದು ಹೇಳಿದರು.
2019ರಿಂದ 2023ರ ವರೆಗಿನ ಬಿಜೆಪಿ ಸರಕಾರದ ಅವಯಲ್ಲಿ 24 ದೇವಸ್ಥಾನಗಳ ಸೇವಾ ಶುಲ್ಕ ಪರಿಷ್ಕರಿಸಿದೆ. ನಮ್ಮ ಸರಕಾರ ಬಂದ ಮೇಲೆ ಕುಕ್ಕೆ ಸುಬ್ರಮಣ್ಯ ಸೇರಿದಂತೆ 14 ದೇವಸ್ಥಾನಗಳ ಆಡಳಿತ ಮಂಡಳಿಯು ಕಾರಣ ಗಳನ್ನು ನೀಡಿ, ದರ ಪರಿಷ್ಕರಣೆ ಮಾಡಿಕೊಡಿ ಎಂದು ಮನವಿ ಮಾಡಿದ್ದು, ಇಲಾಖೆ ಆಯುಕ್ತರು ಒಪ್ಪಿಗೆ ಸೂಚಿಸಿದೆ ಎಂದರು.
ಧಾರ್ಮಿಕ ಪರಿಷತ್ ನಿಯಂತ್ರಣದಲ್ಲಿ: 1997ರಲ್ಲಿ ಜೆ.ಎಚ್.ಪಟೇಲ್ ಸಿಎಂ ಆಗಿದ್ದಾಗ ರಾಜ್ಯ ಧಾರ್ಮಿಕ ಪರಿಷತ್ ಎಂಬ ಹೊಸ ಮಸೂದೆ ಮಂಡಿಸಿದ್ದು, 2003ರಲ್ಲಿ ಅಂದಿನ ಸಿಎಂ ಎಸ್.ಎಂ.ಕೃಷ್ಣ ಕಾನೂನು ಮಾಡಿದ್ದರು. ಅದರಂತೆ ರಾಜ್ಯ, ಜಿಲ್ಲಾಮಟ್ಟದಲ್ಲಿ ಧಾರ್ಮಿಕ ಪರಿಷತ್ ಸದಸ್ಯರ ನೇಮಕ ಮಾಡಲಾಗುತ್ತಿದೆ. ರಾಜ್ಯದಲ್ಲಿ ಎ ಮತ್ತು ಬಿ ಗ್ರೇಡ್ನ ಒಟ್ಟು 398 ದೇವಸ್ಥಾನಗಳಿದ್ದು, ಎಲ್ಲದಕ್ಕೂ ಅಧ್ಯಕ್ಷ ಮತ್ತು ಎಂಟು ಮಂದಿ ಸದಸ್ಯರು, ಮುಖ್ಯ ಅರ್ಚಕರು ಇರುತ್ತಾರೆ ಎಂದು ಮಾಹಿತಿ ನೀಡಿದರು.
*ದ್ವಿಚಕ್ರ ವಾಹನಗಳ ಪರೀಕ್ಷಾ ಟ್ರ್ಯಾಕ್ : ಮುಡಿಪು ಫಜೀರ್ನಲ್ಲಿರುವ ವಾಹನ ಚಾಲನಾ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿರುವುದಾಗಿ ತಿಳಿಸಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಈ ಕೇಂದ್ರ 2022ರಲ್ಲಿ ಉದ್ಘಾಟನೆ ಆಗಿತ್ತು. ಒಂದು ತಿಂಗಳು ಟ್ರೈನಿಂಗ್ ಕೊಡಲಾಗುತ್ತದೆ. ಅಲ್ಲಿಗೆ ಪ್ರಾಯೋಗಿಕ ತರಬೇತಿಗೆ ಒಂದು ಲಾರಿ ಅಥವಾ ಲಾರಿಯನ್ನು ಒದಗಿಸಲಾಗುವುದು ಎಂದರು.
ಅಲ್ಲಿ 50 ಮಂದಿಗೆ ವಾಸ್ತವ್ಯಕ್ಕೆ 50 ಮಂದಿಗೆ ಹಾಸ್ಟೆಲ್ ಅವಕಾಶ ಇದೆ. ಆದರೆ ಅಲ್ಲಿ ಯಾರು ನಿಲ್ಲುವುದಿಲ್ಲ. ಎಲ್ಲರೂ ಅಲ್ಲಿಗೆ ಬಂದು ಹೋಗುತ್ತಾರೆ. ಆದರೆ ಮಂಗಳೂರಿನವರು ಮಾತ್ರವಲ್ಲ ಬೇರೆ ಜಿಲ್ಲೆಯವರು ಇಲ್ಲಿಗೆ ಬರಬಹುದು. ಕೌಶಲ್ಯ ನಿಗಮದ ನೆರವು ಪಡೆಯಲಾಗುವುದು ಎಂದು ಹೇಳಿದರು.
ಈಗ ಲಘು ಮೋಟಾರು ವಾಹನಗಳು ಮತ್ತು ಭಾರೀ ವಾಹನಗಳ ಚಾಲನಾ ತರಬೇತಿಗೆ ಅವಕಾಶ ಇದೆ. ಮುಂದೆ ದ್ವಿಚಕ್ರ ವಾಹನಗಳ ಪರೀಕ್ಷಾರ್ಥ ಚಾಲನಾ ತರಬೇತಿಗೆ ಒಂದು ದಿನದ ತರಬೇತಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಮಾಹಿತಿ ನೀಡಿದರು.
10 ಎಕ್ರೆ ಜಮೀನಿನಲ್ಲಿರುವ ಈ ಕೇಂದ್ರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಅಲ್ಲಿ ಏನೆಲ್ಲಾ ಸುಧಾರಣೆ ಮಾಡಬಹುದು ಎಂಬ ವಿಚಾರದ ಬಗ್ಗೆ ಚಿಂತನೆ ನಡೆಸಿ ಪ್ರಸ್ತಾವನೆ ಸಲ್ಲಿಸಲು ಕೇಂದ್ರದ ಪ್ರಾಂಶುಪಾಲರಿಗೆ ನಿರ್ದೇಶನ ನೀಡಲಾಗಿದೆ. ಬೆಂಗಳೂರು, ಧಾರವಾಡ, ಶಿವಮೊಗ್ಗ ಈಗಾಗಲೇ ಇಂತಹ ಕೇಂದ್ರ ಇದೆ. ವಿಜಯಪುರ, ವಿಜಯನಗರ, ನಾಗಮಂಗಲ, ಬಳ್ಳಾರಿಯಲ್ಲಿ ಸ್ವಯಂಚಾಲಿತ ಚಾಲನಾ ಪರೀಕ್ಷಾ ಟ್ರ್ಯಾಕ್ ಸ್ಥಾಪನೆಯ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ನುಡಿದರು.
ಬೇಡಿಕೆ ಇರುವ ಕಡೆಗಳಿಗೆ ಕರ್ನಾಟಕ ಸಾರಿಗೆ ನಿಗಮದ ಬಸ್ಗಳನ್ನು ಹಾಕುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗು ವುದು ಎಂದು ಸಾರಿಗೆ ಮತ್ತು ಮಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಕೇಂದ್ರ ಸರಕಾರ ರಾಜ್ಯಗಳಿಗೆ ಇಲೆಕ್ಟ್ರಿಕ್ ಬಸ್ಗಳನ್ನು ನೀಡಲಿದ್ದು, ಇದರ ಟೆಂಡರ್ ಮತ್ತಿತರ ಪ್ರಕ್ರಿಯೆ ನಡೆಯಲು ಇನ್ನೂ ಸುಮಾರು ಆರು ತಿಂಗಳು ಬೇಕಾಗಬಹುದು. ಮಂಗಳೂರಿನಲ್ಲಿ ಇಲೆಕ್ಟ್ರಿಕ್ ಬಸ್ಗಳ ಡಿಪೋ ಸ್ಥಾಪನೆಗೆ ಜಾಗ ಗುರುತಿಸಲಾಗುವುದು ಎಂದು ಅವರು ಹೇಳಿದರು.
ಸಾರಿಗೆ ಇಲಾಖೆ ಆಯುಕ್ತ ಯೋಗೀಶ್ ಎ.ಎಂ., ಸಹಾಯಕ ಆಯುಕ್ತ ಸಿ.ಮಲ್ಲಿಕಾರ್ಜುನ , ಶಿವಮೊಗ್ಗ ಜಂಟಿ ಆಯುಕ್ತ ಭೀಮನಗೌಡ ಪಾಟೀಲ್, ಮಂಗಳೂರು ಸಾರಿಗೆ ಅಧಿಕಾರಿ ಶ್ರೀಧರ ಮಲ್ಲಾಡ್ ಉಪಸ್ಥಿತರಿದ್ದರು.