ರಸ್ತೆ ಹೊಂಡ ಗುಂಡಿ: ಎಂಟೇ ತಿಂಗಳಲ್ಲಿ ಮಂಗಳೂರಿನಲ್ಲಿ 120 ಸಾವು

Spread the love

ರಸ್ತೆ ಹೊಂಡ ಗುಂಡಿ: ಎಂಟೇ ತಿಂಗಳಲ್ಲಿ ಮಂಗಳೂರಿನಲ್ಲಿ 120 ಸಾವು

ಮಂಗಳೂರು : ಮಂಗಳೂರು ರಸ್ತೆ ಅಪಘಾತ, ಹೊಂಡ, ಸರ್ವೆ: ಎಂಟೇ ತಿಂಗಳಲ್ಲಿ ಮಂಗಳೂರಿನಲ್ಲಿ 120 ಸಾವು, ಮೃತರಲ್ಲಿ ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರೇ ಹೆಚ್ಚು! ರಸ್ತೆ ನಿಯಮ ಪಾಲಿಸದೆ ಜೀವ ಕಳಕೊಳ್ಳುತ್ತಿರುವ ಯುವಕರು

ನಗರ ಪ್ರದೇಶಗಳಲ್ಲಿ ದಿನದಿಂದ ದಿನಕ್ಕೆ ಅಪಘಾತ ಪ್ರಕರಣಗಳಲ್ಲಿ ಸಾವನ್ನಪ್ಪುವುದು, ಅತಿ ವೇಗದಿಂದ ದ್ವಿಚಕ್ರ ವಾಹನ ಸವಾರರು ಸಾವು- ನೋವು ಅನುಭವಿಸುತ್ತಿರುವುದು ಹೆಚ್ಚುತ್ತಿದೆ. ಪೊಲೀಸ್ ಇಲಾಖೆಯ ಮಾಹಿತಿ ಪ್ರಕಾರ, ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಕಳೆದ ಜನವರಿಯಿಂದ ಸೆ.9ರ ವರೆಗೆ 122 ಮಂದಿ ಅಪಘಾತಕ್ಕೀಡಾಗಿ ಮೃತಪಟ್ಟಿದ್ದಾರೆ.

ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರೇ ಈ ರೀತಿ ಸಾವನ್ನಪ್ಪಿದವರಲ್ಲಿ ಹೆಚ್ಚು ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸದೇ ಎಲ್ಲೆಂದರಲ್ಲಿ ರಸ್ತೆ ದಾಟುವುದು ಮತ್ತು ಅತಿ ವೇಗದಿಂದ ದ್ವಿಚಕ್ರ ವಾಹನಗಳನ್ನು ಚಲಾಯಿಸುವುದರಿಂದ ಅಪಘಾತಕ್ಕೀಡಾಗಿ ಸಾವು-ನೋವಿಗೆ ಕಾರಣವಾಗುತ್ತಿದೆ. 2025ರ ಜನವರಿಯಿಂದ ಸೆ.9ರ ವರೆಗಿನ ಇಲಾಖೆಯ ಮಾಹಿತಿಯಂತೆ, ಮಂಗಳೂರಿನಲ್ಲಿ ಒಟ್ಟು 702 ಅಪಘಾತಗಳಾಗಿದ್ದು, 122 ಮಂದಿ ಸಾವು ಕಂಡಿದ್ದಾರೆ. 815 ಮಂದಿ ಗಾಯಗೊಂಡಿದ್ದಾರೆ. ಮೃತರ ಪೈಕಿ 44 ಪಾದಚಾರಿಗಳು ಹಾಗೂ 63 ದ್ವಿಚಕ್ರ ವಾಹನ ಸವಾರರಿದ್ದಾರೆ.

ಜನವರಿ ತಿಂಗಳಲ್ಲಿ 100 ಅಪಘಾತಗಳಾಗಿದ್ದರೆ, 18 ಗಂಭೀರ ಪ್ರಕರಣಗಳು. 18 ಮಂದಿ ಸಾವು ಕಂಡಿದ್ದು 115 ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ 6 ಪಾದಚಾರಿಗಳು, 11 ದ್ವಿಚಕ್ರ ವಾಹನ ಸವಾರರು ಇದ್ದಾರೆ. ಫೆಬ್ರವರಿಯಲ್ಲಿ 81 ಅಪಘಾತಗಳಾಗಿದ್ದು, 15 ಸಾವು, 103 ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ 11 ಪಾದಚಾರಿಗಳು ಹಾಗೂ 6 ದ್ವಿಚಕ್ರ ವಾಹನ ಸವಾರರು.

ಮಾರ್ಚ್ ತಿಂಗಳಲ್ಲಿ 80 ಅಪಘಾತಗಳಾಗಿದ್ದು, 12 ಸಾವು, 93 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ 3 ಪಾದಚಾರಿ, 8 ದ್ವಿಚಕ್ರ ವಾಹನ ಸವಾರರು ಮೃತಪಟ್ಟಿದ್ದಾರೆ. ಏಪ್ರಿಲ್ ತಿಂಗಳಲ್ಲಿ 112 ಅಪಘಾತಗಳಾಗಿದ್ದು, 21 ಮಂದಿ ಸಾವು ಕಂಡಿದ್ದಾರೆ. 122 ಮಂದಿಗೆ ಗಾಯಗಳಾಗಿವೆ. ಮೃತರಲ್ಲಿ 5 ಪಾದಚಾರಿ, 11 ದ್ವಿಚಕ್ರ ವಾಹನ ಸವಾರರಿದ್ದಾರೆ. ಮೇ ತಿಂಗಳಲ್ಲಿ 77 ಅಪಘಾತಗಳಾಗಿದ್ದು, 14 ಸಾವು, 93 ಮಂದಿಗೆ ಗಾಯವಾಗಿದೆ. ಐವರು ಪಾದಚಾರಿ, 6 ಮಂದಿ ದ್ವಿಚಕ್ರ ವಾಹನ ಸವಾರರು ಮೃತಪಟ್ಟಿದ್ದಾರೆ.

ಜೂನ್ ತಿಂಗಳಲ್ಲಿ 84 ಅಪಘಾತ ಘಟನೆಗಳಾಗಿದ್ದು, 13 ಸಾವು, 102 ಮಂದಿ ಗಾಯಗೊಂಡಿದ್ದಾರೆ. 3 ಪಾದಚಾರಿ, ಏಳು ದ್ವಿಚಕ್ರ ವಾಹನ ಸವಾರರು ಮೃತಪಟ್ಟಿದ್ದಾರೆ. ಜುಲೈ ತಿಂಗಳಲ್ಲಿ 65 ಅಪಘಾತ ಪ್ರಕರಣಗಳಾಗಿದ್ದು, 8 ಸಾವು, 94 ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ ಮೂವರು ಪಾದಚಾರಿ, ಮೂವರು ದ್ವಿಚಕ್ರ ವಾಹನ ಸವಾರರಿದ್ದಾರೆ. ಆಗಸ್ಟ್ ತಿಂಗಳಲ್ಲಿ 79 ಅಪಘಾತಗಳಾಗಿದ್ದು, 18 ಮಂದಿ ಸಾವನ್ನಪ್ಪಿದ್ದರೆ, 71 ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ 6 ಪಾದಚಾರಿ, 10 ದ್ವಿಚಕ್ರ ವಾಹನ ಸವಾರರು.

ಹಾಲಿ ಸೆಪ್ಟೆಂಬರ್ ತಿಂಗಳ 9ರ ವರೆಗೆ ಮಂಗಳೂರು ಮೂಲ್ಕಿ – ಮೂಡುಬಿದ್ರೆ ವ್ಯಾಪ್ತಿಯ ಕಮಿಷನರೇಟಿನಲ್ಲಿ ಒಟ್ಟು 24 ಅಪಘಾತ ಘಟನೆಗಳಾಗಿದ್ದು, ಮೂವರು ಸಾವನ್ನಪ್ಪಿದ್ದು, 25 ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ ಇಬ್ಬರು ಪಾದಚಾರಿ, ಒಬ್ಬ ದ್ವಿಚಕ್ರ ವಾಹನ ಸವಾರ ಇದ್ದಾರೆ.

ಎಂಟು ತಿಂಗಳಲ್ಲಿ 44 ಮಂದಿ ಪಾದಚಾರಿಗಳು ಸಾವನ್ನಪ್ಪಿರುವುದು ಸಣ್ಣ ವಿಷಯ ಅಲ್ಲ. ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಯ ಎಲ್ಲೆಂದರಲ್ಲಿ ವಾಹನಗಳನ್ನು ನೋಡದೆ ರಸ್ತೆ ದಾಟುವುದರಿಂದಲೇ ಈ ಸಮಸ್ಯೆಯಾಗಿದೆ. ನಾವು ಪ್ರತಿ ವರ್ಷ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುತ್ತೇವೆ, ಆದರೂ ಸಾರ್ವಜನಿಕರು ರಸ್ತೆ ಸಂಚಾರವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಮಂಗಳೂರು ನಗರ ಸಂಚಾರ ವಿಭಾಗದ ಡಿಸಿಪಿ ರವಿಶಂಕರ್ ಮಾದ್ಯಮಕ್ಕೆ ತಿಳಿಸಿದ್ದಾರೆ

ಹೆಚ್ಚಿನ ಅಪಘಾತಗಳು ನಿರ್ಲಕ್ಷ್ಯ ಮತ್ತು ಅತಿ ವೇಗದಿಂದಲೇ ನಡೆಯುವಂಥದ್ದು. ಬೈಕ್ ಸವಾರರು ಅತಿ ವೇಗದಿಂದಾಗಿ ಅಪಘಾತಕ್ಕೀಡಾಗುತ್ತಿದ್ದರೆ, ಕೆಲವು ಬಸ್, ಲಾರಿ, ಕಾರುಗಳ ಧಾವಂತದ ಚಾಲನೆಯಿಂದಾಗಿ ಬೇರೆ ಸಣ್ಣ ವಾಹನಗಳಿಗೆ ಡಿಕ್ಕಿಪಡಿಸಿ ಜೀವ ಹಾನಿ ಸಂಭವಿಸಿದೆ. ಬಹುತೇಕ ಅವಘಡಗಳಿಗೆ ರಸ್ತೆ ಸುರಕ್ಷತಾ ನಿಯಮಗಳನ್ನು ಜನರು ಪಾಲಿಸದಿರುವುದೇ ಕಾರಣ ಎನ್ನುವುದು ಪೊಲೀಸರ ಅಭಿಪ್ರಾಯ.


Spread the love
Subscribe
Notify of

1 Comment
Inline Feedbacks
View all comments
Anand
3 hours ago

There is no value of life for pedestrian. No proper footpaths, no proper crossing , no walk bridge even on busiest highway. Sincere efforts required from govt sevants, and politicians.