ರಾತ್ರಿ ಬೀಟ್ ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಹಲ್ಲೆ: ಕೇರಳಕ್ಕೆ ಪರಾರಿಯಾಗಿದ್ದ ಇಬ್ಬರು ಆರೋಪಿಗಳ ಬಂಧನ
ಮಂಗಳೂರು, ಮೇ 27: ರಾತ್ರಿ ಬೀಟ್ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ನಗರ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ದಿನಾಂಕ 24-05-2026ರಂದು ಬೆಳಗಿನ ಜಾವ ಸುಮಾರು 2:10 ಗಂಟೆಯ ವೇಳೆಗೆ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಿಕಲ್‌ನ ನಾರಾಯಣಗುರು ಸಮುದಾಯ ಭವನ ರಸ್ತೆಯ ಎದುರು ಬೀಟ್ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯ ಮೇಲೆ ಕೆಂಪು ಬಣ್ಣದ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಬಂದಿದ್ದ ಇಬ್ಬರು ಯುವಕರ ಪೈಕಿ ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ಏಕಾಏಕಿ ಸಿಮೆಂಟ್ ಶೀಟ್‌ನ ತುಂಡಿನಿಂದ ಪೊಲೀಸ್ ಸಿಬ್ಬಂದಿಯ ತಲೆಗೆ ಹೊಡೆದು ಹಲ್ಲೆ ನಡೆಸಿದ್ದಾನೆ. ಪರಿಣಾಮ ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿದ್ದು, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೊಲೆ ಯತ್ನ ನಡೆಸಿದ ಆರೋಪದಡಿ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಬಂಧ ಉರ್ವ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 57/2026ರಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಕಲಂ 121(1), 109, 132 ಹಾಗೂ 3(5)ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಸಿಸಿಬಿ ಪೊಲೀಸರು ಆರೋಪಿಗಳ ಗುರುತು ಪತ್ತೆಹಚ್ಚಿ, ದೊರೆತ ಖಚಿತ ಮಾಹಿತಿ ಹಾಗೂ ಸಾಕ್ಷ್ಯಾಧಾರಗಳ ಆಧಾರದಲ್ಲಿ ಕೇರಳ ರಾಜ್ಯದ ಕಾಂಞಿಗಾಡ್ ಪ್ರದೇಶದಲ್ಲಿ ಮೇ 26ರಂದು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಆರೋಪಿಗಳನ್ನು ಮುಂದಿನ ಕ್ರಮಕ್ಕಾಗಿ ಉರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಕೃತ್ಯಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ.
ಬಂಧಿತ ಆರೋಪಿಗಳ ವಿವರ:
ಸಚಿನ್ ಕೆ.ಆರ್ (24) — ಹತ್ಯಡ್ಕ ಗ್ರಾಮ, ಅರಸಿನಮಕ್ಕಿ, ಕೊಕ್ಕಡ, ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
ಚಂದನ್ (24) — ಮಣ್ಣಗುಂಡಿ ಹೌಸ್, ನೆಲ್ಯಾಡಿ, ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
ಪೊಲೀಸ್ ಮಾಹಿತಿಯಂತೆ, ಆರೋಪಿಗಳು ಮಂಗಳೂರಿನ ಅಶೋಕನಗರದ ಫಲ್ಗುಣಿ ನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಸಚಿನ್ ಕೆ.ಆರ್ ಕುಂಟಿಕಾನದ ಪಾನ್ ಪಾನ್ ಸ್ವೀಟ್ಸ್ ಫ್ಯಾಕ್ಟರಿಯಲ್ಲಿ ಚಾಲಕರಾಗಿ ಹಾಗೂ ಚಂದನ್ ಕೂಳೂರಿನ ಅದ್ವೈತ್ ಕಿಯಾ ಶೋರೂಂನಲ್ಲಿ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು.
ಮಧ್ಯರಾತ್ರಿ ವೇಳೆಯಲ್ಲಿ ನಗರದಲ್ಲಿ ಸಂಚರಿಸುತ್ತಿದ್ದ ಆರೋಪಿಗಳನ್ನು ಬೀಟ್ ಪೊಲೀಸರು ತಡೆದು ವಿಚಾರಿಸಿದ ವಿಚಾರಕ್ಕೆ ಆಕ್ರೋಶಗೊಂಡು ಸಿಮೆಂಟ್ ಶೀಟ್‌ನ ತುಂಡಿನಿಂದ ಹಲ್ಲೆ ನಡೆಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.













