ರಾಹುಲ್ ಗಾಂಧಿ ವಿರುದ್ಧದ ಹೇಳಿಕೆ ಖಂಡನೀಯ:ಯಶ್ ಪಾಲ್ ಸುವರ್ಣ ಕ್ಷಮೆಯಾಚಿಸಬೇಕು – ಮಮತಾ ಗಟ್ಟಿ
ಮಂಗಳೂರು: ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕುರಿತು ಬಳಸಿರುವ ಭಾಷೆ ಹಾಗೂ ಮಾಡಿರುವ ವೈಯಕ್ತಿಕ ಆರೋಪಗಳು ಅತ್ಯಂತ ಖಂಡನೀಯ, ಬೇಜವಾಬ್ದಾರಿಯುತ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿವೆ ಎಂದು ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಆರೋಪಿಸಿದರು.
ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ವ್ಯಕ್ತಿಯ ಘನತೆಗೆ ಧಕ್ಕೆ ತರುವ ರೀತಿಯ ಆರೋಪಗಳನ್ನು ಮಾಡುವುದು ರಾಜಕೀಯ ಸಂಸ್ಕೃತಿಗೆ ವಿರುದ್ಧವಾಗಿದೆ. ದೇಶದ ಪ್ರಮುಖ ನಾಯಕರ ವಿರುದ್ಧ ವೈಯಕ್ತಿಕ ನಿಂದನೆ ಮಾಡುವ ಬದಲು, ಜನರ ಸಮಸ್ಯೆಗಳ ಕುರಿತು ಚರ್ಚಿಸುವುದು ಜನಪ್ರತಿನಿಧಿಗಳ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಯಶ್ ಪಾಲ್ ಸುವರ್ಣ ಅವರು ಮಾಡಿರುವುದಾಗಿ ವರದಿಯಾಗಿರುವ, “ರಾಹುಲ್ ಗಾಂಧಿ ಅವರ ಕುಟುಂಬವನ್ನು ಬಾಬರಿ ಮಸೀದಿ ಧ್ವಂಸ ಮಾಡಿದಂತೆ ಧ್ವಂಸ ಮಾಡುತ್ತೇವೆ” ಎಂಬ ಹೇಳಿಕೆ ಇನ್ನಷ್ಟು ಆತಂಕಕಾರಿ ಬೆಳವಣಿಗೆಯಾಗಿದೆ. ಇಂತಹ ಮಾತುಗಳು ದ್ವೇಷ ಪ್ರಚೋದನೆ ಹಾಗೂ ಪ್ರಜಾಪ್ರಭುತ್ವದ ಸಂಸ್ಕೃತಿಗೆ ವಿರುದ್ಧವಾದ ಮನೋಭಾವವನ್ನು ಪ್ರತಿಬಿಂಬಿಸುತ್ತವೆ ಎಂದು ಅವರು ಟೀಕಿಸಿದರು.
ಯಶ್ ಪಾಲ್ ಸುವರ್ಣ ಅವರು ತಮ್ಮ ಹೇಳಿಕೆಯನ್ನು ತಕ್ಷಣ ಹಿಂತೆಗೆದುಕೊಂಡು ದೇಶದ ಜನರ ಕ್ಷಮೆಯಾಚಿಸಬೇಕು. ಅಲ್ಲದೆ, ಸಂಬಂಧಪಟ್ಟ ಅಧಿಕಾರಿಗಳು ಈ ಹೇಳಿಕೆಗಳ ಕುರಿತು ಕಾನೂನುಬದ್ಧವಾಗಿ ಪರಿಶೀಲನೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಅಪ್ಪಿ, ಪ್ರಮುಖರಾದ ಶಾಂತಲಾ ಗಟ್ಟಿ, ವೀಣಾ, ಚಂದ್ರಕಲಾ, ವೃಂದಾ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.













