ರೋಹನ್ ಕಾರ್ಪೊರೇಶನ್ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವ ಆಚರಣೆ; ಜ್ಯಾಕ್ ಅನಿಲ್ ಅವರಿಗೆ ‘ಕೃಷಿ ವೃಕ್ಷಾನ್ವೇಷಕ ಸಾಧಕ’ ಪ್ರಶಸ್ತಿ ನೀಡಿ ಗೌರವ
ಮಂಗಳೂರು, ಆಗಸ್ಟ್ 15, 2026: ಮಂಗಳೂರಿನ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆಗಳಲ್ಲಿ ಒಂದಾದ ರೋಹನ್ ಕಾರ್ಪೊರೇಶನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ತನ್ನ ವಿವಿಧ ಸಂಸ್ಥೆಯ ಆವರಣಗಳಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಿತು. ಕ್ಯಾಪಿಟಾನಿಯೊದ ರೋಹನ್ ಸ್ಕ್ವೇರ್ನಲ್ಲಿ ನಡೆದ ಮುಖ್ಯ ಕಾರ್ಯಕ್ರಮದಲ್ಲಿ ಅಲ್ಲಿನ ನಿವಾಸಿಗಳು, ಸಿಬ್ಬಂದಿ ಹಾಗೂ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯ ವಿಜೇತರು ಭಾಗವಹಿಸಿದ್ದರು.

ರೋಹನ್ ಕಾರ್ಪೊರೇಶನ್ನ ವ್ಯವಸ್ಥಾಪಕ ನಿರ್ದೇಶಕ ಡಾ.ರೋಹನ್ ಮೊಂತೆರೊ, ನಿರ್ದೇಶಕ ಶ್ರೀ. ಡಿಯೋನ್ ಮೊಂತೆರೊ, ಜನರಲ್ ಮ್ಯಾನೇಜರ್ ಶ್ರೀಮತಿ ಸುಮನಾ ಹಾಗೂ ವಿಶೇಷ ಅತಿಥಿಗಳಾದ ಎಮ್.ಕೆ ಅಲಿ ಅವರ ಉಪಸ್ಥಿತಿಯಲ್ಲಿ ಕೃಷಿಕ ಶ್ರೀ.ಜ್ಯಾಕ್ ಅನಿಲ್ ಅವರು ಧ್ವಜಾರೋಹಣ ನೆರವೇರಿಸಿದರು.
ಕೃಷಿ ಕ್ಷೇತ್ರದಲ್ಲಿ ಜ್ಯಾಕ್ ಅನಿಲ್ ಅವರು ಸಲ್ಲಿಸಿರುವ ಗಮನಾರ್ಹ ಕೊಡುಗೆ ಮತ್ತು ಸಾಧನೆಯನ್ನು ಗುರುತಿಸಿ, ಅವರಿಗೆ ‘ಕೃಷಿ ವೃಕ್ಷಾನ್ವೇಷಕ ಸಾಧಕ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಾಂಪ್ರದಾಯಿಕ ಕೃಷಿ ಪದ್ಧತಿಗಳನ್ನು ಉಳಿಸಿ ಬೆಳೆಸುವ, ಅಪರೂಪದ ಹಾಗೂ ಸ್ಥಳೀಯ ಹಲಸಿನ ತಳಿಗಳನ್ನು ಸಂರಕ್ಷಿಸುವ ಮತ್ತು ಸಸ್ಯ ವೈವಿಧ್ಯದ ಮಹತ್ವವನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಅವರು ಹಲವು ವರ್ಷಗಳಿಂದ ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ ಈ ಗೌರವ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರೋಹನ್ ಕಾರ್ಪೊರೇಶನ್ನ ಸಂಸ್ಥಾಪಕ ರೋಹನ್ ಮೊಂತೆರೊ, “ಸ್ವಾತಂತ್ರ್ಯೋತ್ಸವವೆಂದರೆ ಕೇವಲ ನಮ್ಮ ಹಿಂದಿನ ಹೋರಾಟವನ್ನು ನೆನಪಿಸಿಕೊಳ್ಳುವ ದಿನವಲ್ಲ;ಮುಂದಿನ ಪೀಳಿಗೆಗಾಗಿ ನಾವು ಎಂತಹ ಭಾರತವನ್ನು ನಿರ್ಮಿಸಬೇಕು ಎಂಬುದನ್ನು ಯೋಚಿಸುವ ದಿನವೂ ಹೌದು. ಇಂದು ಭಾರತ ಸಾಧಿಸಿರುವ ಪ್ರಗತಿಯ ಹಿಂದೆ ಅನೇಕ ತಲೆಮಾರುಗಳ ಪರಿಶ್ರಮ ಮತ್ತು ಕೊಡುಗೆ ಇದೆ. ನಾವು ಕೂಡ ನಮ್ಮ ಸುತ್ತಲಿನ ಸಮಾಜಕ್ಕೆ ಅರ್ಥಪೂರ್ಣವಾಗಿ ಕೊಡುಗೆ ನೀಡುತ್ತಾ, ಮುಂದಿನ ಪೀಳಿಗೆಗೆ ಉತ್ತಮ ಅವಕಾಶಗಳನ್ನು ಸೃಷ್ಟಿಸುವ ಜವಾಬ್ದಾರಿಯನ್ನು ಹೊಂದಿದ್ದೇವೆ,” ಎಂದರು.
ರೋಹನ್ ಕಾರ್ಪೊರೇಶನ್ನ ನಿರ್ದೇಶಕ ಡಿಯೋನ್ ಮೊಂತೆರೊ ಮಾತನಾಡಿ, “ಇಂದು ಭಾರತ ತನ್ನ ವೈವಿಧ್ಯತೆ, ಸಾಮರ್ಥ್ಯ ಮತ್ತು ನಿರಂತರ ಬದಲಾವಣೆಯೊಂದಿಗೆ ಜಗತ್ತಿನಲ್ಲಿ ತನ್ನದೇ ಆದ ಸ್ಥಾನವನ್ನು ರೂಪಿಸಿಕೊಳ್ಳುತ್ತಿದೆ. ಇದೇ ಪ್ರಗತಿಯ ಮನೋಭಾವ ಮಂಗಳೂರಿನ ಬೆಳವಣಿಗೆಗೂ ಅನ್ವಯಿಸಬೇಕು. ಮಂಗಳೂರು ಅಭಿವೃದ್ಧಿಯ ಹೊಸ ಹಾದಿಯಲ್ಲಿ ಸಾಗುತ್ತಿರುವ ಸಂದರ್ಭದಲ್ಲಿ, ನಗರದ ಬೆಳವಣಿಗೆಗೆ ನಮ್ಮೆಲ್ಲರ ಕೊಡುಗೆ ಅಗತ್ಯ,” ಎಂದರು.
ಜ್ಯಾಕ್ ಅನಿಲ್ ಅವರು ಈ ಗೌರವಕ್ಕಾಗಿ ರೋಹನ್ ಕಾರ್ಪೊರೇಶನ್ಗೆ ಕೃತಜ್ಞತೆ ಸಲ್ಲಿಸುತ್ತಾ, ““ನನ್ನ ಕೃಷಿ ಕ್ಷೇತ್ರದ ಪ್ರಯತ್ನಗಳನ್ನು ಗುರುತಿಸಿ ಗೌರವಿಸಿರುವ ರೋಹನ್ ಕಾರ್ಪೊರೇಶನ್ಗೆ ಹೃತ್ಪೂರ್ವಕ ಧನ್ಯವಾದಗಳು. ನಮ್ಮ ಕೃಷಿ ಪರಂಪರೆ ಮತ್ತು ಸ್ಥಳೀಯ ತಳಿಗಳ ಸಂರಕ್ಷಣೆಯ ಕಾರ್ಯವನ್ನು ಇನ್ನಷ್ಟು ಮುಂದುವರಿಸಲು ಈ ಗೌರವ ನನಗೆ ದೊಡ್ಡ ಪ್ರೇರಣೆಯಾಗಿದೆ,” ಎಂದು ಹೇಳಿದರು.
ವಿಶೇಷ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಮ್.ಕೆ ಅಲಿ ಅವರು ಮಾತನಾಡಿ, “ಈ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಒಟ್ಟಾಗಿ ಆಚರಿಸಲು ಎಲ್ಲರೂ ಒಂದಾಗಿ ಸೇರಿರುವುದು ಈ ದಿನವನ್ನು ಇನ್ನಷ್ಟು ವಿಶೇಷವಾಗಿಸಿದೆ. ಇಂತಹ ಸಂದರ್ಭಗಳು ನಮ್ಮ ದೇಶದ ಮೇಲಿನ ಹೆಮ್ಮೆ ಹಾಗೂ ಒಗ್ಗಟ್ಟಿನ ಭಾವನೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ” ಎಂದು ಹೇಳಿದರು.
‘ದಿ ಕೋಸ್ಟ್ ಇನ್ ದಿ ಸ್ಟೋರಿ ಆಫ್ ಇಂಡಿಯಾ’ ಎಂಬ ವಿಷಯದಡಿ ನಡೆದ ಫ್ರೀಡಂ ಪ್ಯಾಲೆಟ್ 2026 ಚಿತ್ರಕಲಾ ಸ್ಪರ್ಧೆಯ ಅಂತಿಮ ಸುತ್ತಿನ ವಿಜೇತರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ರೋಹನ್ ಸಿಟಿ, ಬಿಜೈನಲ್ಲಿ ನಡೆದ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದ 60 ಸ್ಪರ್ಧಿಗಳ ಪೈಕಿ ವಿಜೇತರಾದವರಿಗೆ ನಗದು ಬಹುಮಾನ ಹಾಗೂ ಪ್ರಮಾಣಪತ್ರಗಳನ್ನು ನೀಡಿ ಗೌರವಿಸಲಾಯಿತು. ಪಿಕ್ಸ್ಎನ್ಸಿಎಲ್ ಸ್ಟುಡಿಯೋ ಸ್ಪರ್ಧೆಯ ತೀರ್ಪುಗಾರರಾಗಿದ್ದರು.
ಕಾರ್ಯಕ್ರಮವನ್ನು ಪ್ರಜ್ಞಾ ಒಡಿಲ್ನಾಳ ಅವರು ಅಚ್ಚುಕಟ್ಟಾಗಿ ಹಾಗೂ ಸುಗಮವಾಗಿ ನಿರೂಪಿಸಿದರು.
ರೋಹನ್ ಕಾರ್ಪೊರೇಶನ್ನ ಇತರೆ ಪ್ರಾಜೆಕ್ಟ್ಗಳಾದ ಸಿಟಿ ಸ್ಕ್ವೇರ್, ಎಂ.ಜಿ. ರಸ್ತೆ, ಬಲ್ಲಾಳ್ಬಾಗ್ನಲ್ಲಿ ಅಡ್ವೊಕೇಟ್ ಅಜೀಜ್ ಹಾಗೂ ಡಾ. ಪದ್ಮನಾಭ ಕಾಮತ್ ಅವರು, ಮತ್ತು ಹೈ ಕ್ರೆಸ್ಟ್, ಕದ್ರಿಯಲ್ಲಿ ಶ್ರೀ ಸುರೇಂದ್ರ ಪೈ ಅವರು ನಿವಾಸಿಗಳು ಹಾಗೂ ಸಿಬ್ಬಂದಿಯ ಸಮ್ಮುಖದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು
ಕೃಷಿಯಂತಹ ಮೂಲಭೂತ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಗೌರವಿಸುವುದರಿಂದ ಹಿಡಿದು ಯುವ ಪ್ರತಿಭೆಯನ್ನು ಗುರುತಿಸುವವರೆಗೆ, ಈ ವರ್ಷದ ಸ್ವಾತಂತ್ರ್ಯೋತ್ಸವವು ದೇಶದ ಬೆಳವಣಿಗೆಯಲ್ಲಿ ಪ್ರತಿಯೊಬ್ಬರ ಪಾತ್ರವನ್ನು ನೆನಪಿಸಿತು. ಸಮಾಜಕ್ಕೆ ತಮ್ಮದೇ ರೀತಿಯಲ್ಲಿ ಕೊಡುಗೆ ನೀಡುವ ಇಂತಹ ಪ್ರಯತ್ನಗಳೇ ಭಾರತದ ಪ್ರಗತಿಯ ನಿಜವಾದ ಶಕ್ತಿ ಎಂಬ ಸಂದೇಶದೊಂದಿಗೆ ರೋಹನ್ ಕಾರ್ಪೊರೇಶನ್ನ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಗಳು ಮುಕ್ತಾಯಗೊಂಡವು.












