ಬೈಂದೂರು: ಸೌಪರ್ಣಿಕಾ ನದಿ ತೀರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಜೋಡಿಗಳ ಮೃತದೇಹ ಪತ್ತೆ

Spread the love

ಬೈಂದೂರು: ಸೌಪರ್ಣಿಕಾ ನದಿ ತೀರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಜೋಡಿಗಳ ಮೃತದೇಹ ಪತ್ತೆ

ಬೈಂದೂರು: ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಗೋಳಿಹೊಳೆ ಗ್ರಾಮದ ಚಾರ್ಸಳ ಪ್ರದೇಶದಲ್ಲಿ ಸೌಪರ್ಣಿಕಾ ನದಿ ಸಮೀಪ ನೇಣು ಬಿಗಿದ ಸ್ಥಿತಿಯಲ್ಲಿ ಓರ್ವ ಪುರುಷ ಹಾಗೂ ಓರ್ವ ಮಹಿಳೆಯ ಮೃತದೇಹಗಳು ಪತ್ತೆಯಾಗಿವೆ.

ಮೃತರನ್ನು ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಸೆಪ್ಟೆಂಬರ್ 11ರಂದು ದಾಖಲಾಗಿದ್ದ ಅಪರಾಧ ಪ್ರಕರಣದ ಆರೋಪಿಗಳಾದ ವಿಠ್ಠಲ್ ನಾಯಕ್ (35) ಹಾಗೂ ಭವ್ಯಾ ಅಲಿಯಾಸ್ ನಿಶ್ಮಿತಾ (33) ಎಂದು ಪೊಲೀಸರು ಗುರುತಿಸಿದ್ದಾರೆ.

ಘಟನೆಯ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಕಲಂ 123, 109 ಹಾಗೂ 3(5) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ವಿಠ್ಠಲ್ ನಾಯಕ್ ಅವರ ಪತ್ನಿಗೆ ಅಪರಿಚಿತ ಇಂಜೆಕ್ಷನ್ಗಳನ್ನು ನೀಡಿ ವಿಷಪ್ರಯೋಗ ಮಾಡಿ ಕೊಲೆ ಮಾಡಲು ಯತ್ನಿಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರೂ ಆರೋಪಿಗಳಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಭವ್ಯಾ ಅವರು ವಿಠ್ಠಲ್ ನಾಯಕ್ ಅವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು ಎಂಬ ಆರೋಪವೂ ಪ್ರಕರಣದಲ್ಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮೃತದೇಹಗಳು ಪತ್ತೆಯಾದ ಸ್ಥಳದಲ್ಲಿ SOCO (Scene of Crime Officers) ತಂಡದ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದು, ಅಗತ್ಯ ಕಾನೂನು ಪ್ರಕ್ರಿಯೆಗಳು ಮುಂದುವರಿದಿವೆ.

ಇಬ್ಬರೂ ಕೆಲವು ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಪ್ರಾಥಮಿಕವಾಗಿ ಶಂಕಿಸಿದ್ದಾರೆ. ಮೃತರ ಸಾವಿಗೆ ನಿಖರ ಕಾರಣ ಹಾಗೂ ಘಟನೆ ನಡೆದ ಸಂದರ್ಭಗಳ ಕುರಿತು ತನಿಖೆ ಮುಂದುವರಿದಿದೆ.


Spread the love
Subscribe
Notify of

0 Comments