‘ವಿಕಾಸ್’ ವಿಧಾನಸೌಧದ ಏಜೆಂಟ್: ವಿಕಾಸ್ ಹೆಗ್ಡೆ ಮಾತಿಗೆ ಕಲ್ಗದ್ದೆ ತಿರುಗೇಟು
ಕುಂದಾಪುರ: ಇಷ್ಟು ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ಜಿಲ್ಲೆಗೆ ಒಂದೇ ಒಂದು ಸರ್ಕಾರಿ ಮೆಡಿಕಲ್ ಕಾಲೇಜನ್ನು ತರಲು ಸಾಧ್ಯವಾಗದ ಕಾಂಗ್ರೆಸ್ ಇದೀಗ ಬಿಜೆಪಿಯ ಮೇಲೆ ಗೂಬೆ ಕೂರಿಸುತ್ತಿದೆ. ಇಷ್ಟು ವರ್ಷಗಳ ತನಕವೂ ಮೆಡಿಕಲ್ ಕಾಲೇಜನ್ನು ಸ್ಥಾಪಿಸಿರದ ಬಗ್ಗೆ ಕಾಂಗ್ರೆಸ್ ಮುಖಂಡ ವಿಕಾಸ್ ಹೆಗ್ಡೆ ತಮ್ಮ ಪಕ್ಷದ ಮಾಜಿ ಶಾಸಕರನ್ನೇ ಪ್ರಶ್ನೆ ಮಾಡಬೇಕು. ನಮ್ಮ ಶಾಸಕರಾದ ಬಿಎಮ್ ಸುಕುಮಾರ್ ಶೆಟ್ಟಿಯವರು ಚುನಾವಣಾ ಪೂರ್ವದಲ್ಲಿ ನೀಡಿರುವ ಎಲ್ಲಾ ಆಶ್ವಾಸನೆಗಳಿಗೆ ಈಗಲೂ ಬದ್ದರಾಗಿದ್ದಾರೆ. ಅದರಂತೆಯೇ ಅವರು ನಡೆದುಕೊಳ್ಳುತ್ತಿದ್ದಾರೆ ಎಂದು ತಾ.ಪಂ ಸದಸ್ಯ, ಬಿಜೆಪಿಯ ಯುವಮುಖಂಡ ಉಮೇಶ್ ಶೆಟ್ಟಿ ಕಲ್ಗದ್ದೆ ಹೇಳಿದರು.

ಅವರು ಬೈಂದೂರು ಶಾಸಕರ ವಿರುದ್ದ ಕಾಂಗ್ರೆಸ್ ಹೊರಿಸುತ್ತಿರುವ ಆರೋಪದ ಕುರಿತು ಚಿತ್ತೂರಿನಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ವಿಕಾಸ್ ಹೆಗ್ಡೆಯವರ ಮಾತಿಗೆ ತಿರುಗೇಟು ನೀಡಿದರು.
ಗ್ರಾ.ಪಂ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸಿಗರು ಶಾಸಕರ ವಿರುದ್ದ ಆರೋಪ ಹೊರಿಸುತ್ತಿದ್ದಾರೆ. ಬೈಂದೂರು ಕ್ಷೇತ್ರದ ಬಗ್ಗೆ ಏನೂ ಅರಿಯದ ವಿಕಾಸ್ ಹೆಗ್ಡೆಯವರಿಗೆ ಶಾಸಕರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಪ್ರತಿಭಟನಾ ಸಭೆಯಲ್ಲಿ ಇಪ್ಪತ್ತು ವರ್ಷಗಳಿಂದಲೂ ತಾನು ವಿಧಾನಸೌಧ, ವಿಕಾಸ ಸೌಧಕ್ಕೆ ಭೇಟಿ ನೀಡುತ್ತಿದ್ದು, ಅಲ್ಲಿನ ಎಲ್ಲ ಕಾರ್ಯಚಟುವಟಿಕೆಗಳನ್ನು ಬಹಳ ಹತ್ತಿರದಿಂದಲೇ ಗಮನಿಸುತ್ತಿರುತ್ತೇನೆ ಎಂದಿದ್ದಾರೆ. ನಾನು ಇಲ್ಲಿನ ತನಕವೂ ವಿಕಾಸ್ ಹೆಗ್ಡೆ ನ್ಯಾಯಾಲಯದಲ್ಲಿ ವಕಾಲತ್ತು ಮಾಡುವ ವಕೀಲರು ಎಂದುಕೊಂಡಿದ್ದೆ. ಆದರೆ ಅವರು ವಿಧಾನಸೌಧ ಹಾಗೂ ವಿಕಾಸ ಸೌಧದ ಏಜೆಂಟ್ ಎನ್ನುವುದು ನಿನ್ನೆಯಷ್ಟೆ ತಿಳಿಯಿತು. ಹೆಸರಿಗೆ ಮಾತ್ರವೇ ಅವರು ವಿಕಾಸ್. ಆದರೆ ಅವರಿಗೆ ಇದುವರೆಗೂ ಬುದ್ದಿ ಬೆಳೆದಿಲ್ಲ. ಈ ಕ್ಷೇತ್ರದ ಬಗ್ಗೆ ಏನೂ ತಿಳಿಯದ ವಿಕಾಸ್ ಹೆಗ್ಡೆ ಶಾಸಕರ ವಿರುದ್ದ ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂದು ತಾ.ಪಂ ಸದಸ್ಯ ಉಮೇಶ್ ಶೆಟ್ಟಿ ಕಲ್ಗದ್ದೆ ವಿಕಾಸ್ ಹೆಗ್ಡೆಯವರ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.












