ಸಿಎಮ್ ಕುಮಾರಸ್ವಾಮಿ ತಂಗಿದ್ದ ರೆಸಾರ್ಟ್ ಬಳಿ ಮಾಧ್ಯಮದವರ ಮೇಲೆ ಗೂಂಡಾಗಿರಿ ಪ್ರದರ್ಶಿಸಿದ ಪೊಲೀಸರು

Spread the love

ಸಿಎಮ್ ಕುಮಾರಸ್ವಾಮಿ ತಂಗಿದ್ದ ರೆಸಾರ್ಟ್ ಬಳಿ ಮಾಧ್ಯಮದವರ ಮೇಲೆ ಗೂಂಡಾಗಿರಿ ಪ್ರದರ್ಶಿಸಿದ ಪೊಲೀಸರು

ಉಡುಪಿ: ಉಡುಪಿಯ ಸಾಯಿರಾಧಾ ರೆಸಾರ್ಟ್ನಲ್ಲಿ ಚಿಕಿತ್ಸೆಗಾಗಿ ಮೂರು ದಿನಗಳಿಂದ ವಾಸ್ತವ್ಯ ಹೂಡಿರುವ ಸಿಎಂ ಎಚ್.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಭದ್ರತೆಗೆ ನಿಯೋಜಿಸಲಾಗಿರುವ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮದವರ ಮೇಲೆ ಗೂಂಡಾಗಿರಿಯ ವರ್ತನೆಯನ್ನು ಪ್ರದರ್ಶನ ಮಾಡಿದ್ದಲ್ಲದೆ ವರದಿಗಾರರ ಮನೆಯವರಿಗೆ ಅವಾಚ್ಯ ಶಬ್ದಗಳನ್ನು ಬಳಸಿ ತನ್ನ ಸಭ್ಯತೆ ಏನು ಎನ್ನುವುದನ್ನು ಪ್ರಚಾರ ಪಡಿಸಿದ್ದಾರೆ.

ಭಾನುವಾರ ರೆಸಾರ್ಟ್ ಗೆ ಆಗಮಿಸಿದ ದಿನದಿಂದ ಪೊಲೀಸರು ಮಾಧ್ಯಮಗಳೊಂದಿಗೆ ದುರ್ವರ್ತನೆ ತೋರಿಸಿದ್ದು ಸ್ಥಳೀಯ ಸಾರ್ವಜನಿಕರ ಮೇಲೂ ಕೂಡ ದಬ್ಬಾಳಿಕೆ ನಡೆಸಿಕೊಂಡು ಬಂದಿದ್ದರು. ಮಾಧ್ಯಮದವರು ರೆಸಾರ್ಟ್ ನಿಂದ ಅನತಿ ದೂರದಲ್ಲಿನ ಮನೆಯೊಂದರಲ್ಲಿ ಕುಳಿತು ಸುದ್ದಿ ಮಾಡುತ್ತಿದ್ದರು. ಇದರಿಂದ ಕೆರಳಿದ ಪೊಲೀಸರು ಮನೆಯಲ್ಲಿ ಒಂಟಿ ಮಹಿಳೆಯೊಬ್ಬರೇ ಇದ್ದ ವೇಳೆ ಬಂದು ಮಾಧ್ಯಮದವರಿಗೆ ಆಶ್ರಯ ನೀಡದಂತೆ ಧಮ್ಮಿ ಹಾಕುವ ಕೆಲಸ ಬುಧವಾರ ಕಾಪು ಎಸ್ ನವೀನ್ ನಾಯಕ್ ಮಾಡಿದ್ದರು. ಒಂದು ವೇಳೆ ಮಾಧ್ಯಮದವರಿಗೆ ಆಶ್ರಯ ನೀಡಿದರೆ ನಿಮ್ಮ ಮೇಲೆ ಕ್ರಮ ಕೈಗೊಳ್ಳಬೇಕಾದಿತು ಎಂಬ ಎಚ್ಚರಿಕೆಯನ್ನು ಮನೆಯವರಿಗೆ ಅವರು ನೀಡಿದ್ದರು.

ಆ ಬಳಿಕ ಮಾಧ್ಯಮದವರು ಸಾರ್ವಜನಿಕ ರಸ್ತೆಯಲ್ಲಿ ನಿಂತ ವೇಳೆ ಶಿರ್ವ ಠಾಣೆಯ ಎಸ್ ಐ ಅಬ್ದುಲ್ ಖಾದರ್ ರಾಜ್ಯ ಮಟ್ಟದ ಚಾನೆಲ್ ವೊಂದರ ಕ್ಯಾಮರಾ ಮ್ಯಾನ್ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದು ಅವರನ್ನು ತಳ್ಳಿದ್ದಾರೆ. ಅಲ್ಲದೆ ಕಾಪು ಎಸ್ ಐ ನವೀನ್ ನಾಯಕ್ ಅವರು ‘ನಿನ್ನ ಮುಟ್ ದೆ ನಿನ್ …. ಮುಟ್ಟಿದ್ನಾ’ ಎಂದು ಅವಾಚ್ಯ ಶಬ್ದ ಬಳಸಿ ದಬ್ಬಾಳಿಕೆ ನಡೆಸಿದ್ದಾರೆ.

ಪೋಲಿಸ್ ದೌರ್ಜನ್ಯದ ವರದಿ ರಾಜ್ಯ ಮಟ್ಟದ ವಾಹಿನಿಗಳಲ್ಲಿ ಸುದ್ದಿಯಾಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಮಾಧ್ಯಮದವರೊಂದಿಗೆ ಮಾತುಕತೆ ನಡೆಸಿ ಪೊಲೀಸರೊಂದಿಗೆ ಸಹಕರಿಸುವಂತೆ ವಿನಂತಿಸಿದ್ದಾರೆ. ಆದರೆ ಮಾಧ್ಯಮದವರು ದಬ್ಬಾಳಿಕೆ ನಡೆಸಿದ ಪೊಲೀಸ್ ಅಧಿಕಾರಿ ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಒತ್ತಾಯ ಮಾಡಿದ್ದು ಈ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳು ಮಾಧ್ಯಮದವರಲ್ಲಿ ಕ್ಷಮೆ ಕೋರಿ ಅವರ ಮನವೊಲಿಸುವಲ್ಲಿ ಸಫಲರಾಗಿದ್ದಾರೆ.

ಈ ನಡುವೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಅವರು ಮಾತನಾಡಿ ನಾವು ಮುಖ್ಯಮಂತ್ರಿ ಕಚೇರಿಯಿಂದ ಬಂದ ಆದೇಶ ಪಾಲನೆ ಮಾಡುತ್ತಿದ್ದು ಯಾವುದೇ ರೀತಿಯಲ್ಲಿ ಮಾಧ್ಯಮದವರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ವರ್ತಿಸಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಂತಹ ವರ್ತನೆ ಕಂಡು ಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ದ ದೂರು ನೀಡುವಂತೆ ಕೋರಿದ್ದಾರೆ.

ಸಿಎಂ ವಾಸ್ತವ್ಯದ ಹಿನ್ನೆಲೆ ರೆಸಾರ್ಟ್ ಸುತ್ತ ಭದ್ರತೆ ಹೆಚ್ಚಿಸಿದ್ದು, ಇಂದು 2ನೇ ಹಂತದಲ್ಲಿ ರೆಸಾರ್ಟ್ಗೆ ಪರದೆ ಅಳವಡಿಸಲಾಗಿದೆ. ರೆಸಾರ್ಟ್ನ ಚಲನವಲನ ಕ್ಯಾಮರಾ ಕಣ್ಣಿಗೆ ಬೀಳದಂತೆ ಕ್ರಮ ಕೈಗೊಳ್ಳಲಾಗಿದ್ದು, ರೆಸಾರ್ಟ್ ಒಳಗಡೆ ಅಲ್ಲಿನ ಸಿಬ್ಬಂದಿಗೂ ಮೊಬೈಲ್ ನಿಷೇಧಿಸಲಾಗಿದೆ. ಯಾವುದೇ ಮಾಹಿತಿ ಹೊರ ಹೋಗದಂತೆ ಸಿಎಂ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.


Spread the love