ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಎನ್ಐಎಗೆ ವಹಿಸಬೇಕೆಂಬ ಒತ್ತಾಯದ ಬಗ್ಗೆ ಸರಕಾರ ತೀರ್ಮಾನಿಸಲಿದೆ : ಸಚಿವ ದಿನೇಶ್ ಗುಂಡೂರಾವ್
ಮಂಗಳೂರು: ಜಿಲ್ಲೆಯಲ್ಲಿ ನಡೆದ ಅಹಿತಕರ ಘಟನೆ ಹಾಗೂ ಪಾಕ್ ಮತ್ತು ಭಾರತ ನಡುವಿನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ, ಸೈನಿಕರ ವಿರುದ್ಧ ಸಂದೇಶಗಳು, ಸುಳ್ಳು ಸುದ್ದಿ, ಉದ್ರೇಕಕಾರಿ ಹೇಳಿಕೆ, ದುರುದ್ದೇಶಪೂರಿತ ಪೋಸ್ಟ್ಗಳನ್ನು ಹಾಕುವವರ ವಿರುದ್ಧ ಕಠಿಣ ಕ್ರಮಕ್ಕೆ ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ. ಕೆಲವರು ನಕಲಿ ಖಾತೆಗಳ ಮೂಲಕ ಈ ಕೃತ್ಯದಲ್ಲಿ ತೊಡಗಿರುವವರನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿಯೂ ಕ್ರಮ ವಹಿಸಲಾಗುತ್ತಿದೆ ಎಂದು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.
ಶನಿವಾರ ಮಂಗಳೂರಿನಲ್ಲಿ ಸುದ್ದಿಗೋಷ್ಟಿಯ ವೇಳೆ ಈ ಸಂಬಂಧ ಪ್ರಶ್ನೆಗಳಿಗೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಸೈನಿಕರ ವಿರುದ್ಧ ಸಂದೇಶ ನೀಡುತ್ತಿರುವವರ ಕುರಿತ ಪ್ರಶ್ನೆಗೆ, ಸೈನಿಕರ ವಿರುದ್ಧದ ಯಾವುದೇ ಅಪಪ್ರಚಾರ, ಹೇಳಿಕೆಯನ್ನು ಸಹಿಸಲಾಗದು. ದೇಶದ ವಿಚಾರ ಬಂದಾಗ ನಾವೆಲ್ಲಾ ಒಂದೇ. ಈಗಾಗಲೇ ತಿರಂಗಾ ಯಾತ್ರೆ ನಡೆಸಲಾಗಿದ್ದು, ಕೇಂದ್ರ ಸರಕಾರದ ಜತೆ ನಾವಿರುವುದನ್ನು ಸ್ಪಷ್ಟಪಡಿಸಲಾಗಿದೆ. ದೇಶದ ಏಕತೆ, ಭದ್ರತೆಗೆ ಚ್ಯುತಿ ತರುವ ವ್ಯಕ್ತಿಗಳ ವಿರುದ್ಧ ಕ್ರಮಕ್ಕೆ ಹಿಂದೇಟು ಹಾಕಲಾಗದು. ನಕಲಿ ಖಾತೆಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ರಾಜ್ಯ ಮಟ್ಟದಲ್ಲಿ ಈಗಾಗಲೇ ಗೃಹ ಸಚಿವರು ಸೈಬರ್ ಸೆಲ್ ಬಲಪಡಿಸುವುದು ಸಿಬ್ಬಂದಿ ಹೆಚ್ಚಳಕ್ಕೆ ಸಂಬಂಧಿಸಿ ನಿರ್ದೇಶನ ನೀಡಿದ್ದಾರೆ ಎಂದರು.
ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರಕಾರದ ಪ್ರತಿನಿಧಿಗಳ ಯಾರೂ ಅವರ ಮನೆಗೆ ಭೇಟಿ ನೀಡಿಲ್ಲ ಎಂಬ ಪ್ರಶ್ನೆಗೆ, ಸಚಿವ ದಿನೇಶ್ ಗುಂಡೂರಾವ್ ಅನೇಕ ಕೊಲೆ, ಹತ್ಯೆ ನಡೆಯುತ್ತದೆ. ಯಾವ ಕಾರಣಕ್ಕೆ ಆಗಿದೆ ತಿಳಿದು ಅದರ ಅನುಸಾರ ಸರಕಾರ ತನ್ನ ಜವಾಬ್ಧಾರಿ ನಿರ್ವಹಿಸುತ್ತದೆ. ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಭಾಗಿಯಾದವರನ್ನು ಪತ್ತೆ ಹಚ್ಚಿ ಶಿಕ್ಷಿಸುವುದು ಸರಕಾರದ ಆದ್ಯತೆ. ಈ ನಿಟ್ಟಿನಲ್ಲಿ ಪೊಲೀಸರು ಈಗಾಗಲೇ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಎನ್ಐಎಗೆ ವಹಿಸಬೇಕೆಂಬ ಒತ್ತಾಯದ ಬಗ್ಗೆ ಸರಕಾರ ತೀರ್ಮಾನಿಸಲಿದೆ. ಅದು ಗೃಹ ಇಲಾಖೆಗೆ ಸಂಬಂಧಿಸಿದ ವಿಚಾರ. ಆತನ ಕೊಲೆಯಲ್ಲಿ ಭಾಗಿಯಾದವರನ್ನು ಪತ್ತೆ ಹಚ್ಚಿ ಬಂಧಿಸುವ ಕಾರ್ಯ ಪೊಲೀಸ್ ಇಲಾಖೆ ಜವಾಬ್ಧಾರಿಯುತವಾಗಿ ನಡೆಸಿದೆ. ಪ್ರಕರಣಕ್ಕೆ ಸಂಬಂಧಿಸಿ ಎಲ್ಲಾ ಆಯಾಮಗಳಲ್ಲಿಯೂ ಪಾರದರ್ಶಕ ತನಿಖೆ ಮುಂದುವರಿದಿದೆ. ಹಾಗೆಂದು ಬಿಜೆಪಿಯವರ ಊಹಾಪೋಹ, ಕಪೋಲ ಕಲ್ಪಿತ ಹೇಳಿಕೆಗಳಿಗೆ ನಾನು ಉತ್ತರ ಕೊಡಲು ಆಗದು ಎಂದರು.
ಯಾವುದೇ ರೀತಿಯ ಸಾಕ್ಷ್ಯಗಳು ಇದ್ದಲ್ಲಿ ಅದನ್ನು ತನಿಖೆ ನಡೆಸುವವರಿಗೆ ಒಪ್ಪಿಸಲಿ. ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ಮುಂದುವರಿಸಿದ್ದಾರೆ ಎಂದು ಹೇಳಿದರು.
ಗಡಿಯಲ್ಲಿನ ಪ್ರಕ್ಷ್ಯುಬ್ಧ ಪರಿಸ್ಥಿತಿಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ಪೊಲೀಸ್ ವರಿಷ್ಟರು, ಜಿಲ್ಲಾಧಿಕಾರಿಗಳ ಜತೆ ಈಗಾಗಲೇ ಸಭೆ, ಚರ್ಚೆ ನಡೆದಿದೆ. ಕೇಂದ್ರ ಸರಕಾರದ ಮಾರ್ಗಸೂಚಿಗಳ ಅನ್ವಯ ರಾಜ್ಯದಲ್ಲಿಯೂ ಅಗತ್ಯ ಭದ್ರತಾ ಕ್ರಮಗಳನ್ನು ವಹಿಸಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉಸ್ತುವಾರಿ ಸಚಿವರು ಉತ್ತರಿಸಿದರು.
ಶಾಸಕ ಹರೀಶ್ ಪೂಂಜಾ ಅವರ ಹೇಳಿಕೆ, ನಿಂದನೆಗೆ ಸಂಬಂಧಿಸಿ ಕಾನೂನಾತ್ಮಕವಾಗಿ ಕ್ರಮ ವಹಿಸಲಾಗಿದೆ. ಅವರು ಉಪಯೋಗಿಸುವ ಭಾಷೆ ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ವೈಯಕ್ತಿಕ ಟೀಕೆಗೆ ನಾನು ಉತ್ತರಿಸುವುದಿಲ್ಲ. ಅದು ಅವರ ಕೀಳು ಅಭಿರುಚಿ, ಮನಸ್ಥಿತಿಗೆ ಪ್ರತ್ಯುತ್ತರ ನೀಡುವ ಅಗತ್ಯ ಇಲ್ಲ. ಅವರ ನಡವಳಿಕೆ ಅವರ ವ್ಯಕ್ತಿತ್ವಕ್ಕೆ ಕೈಗನ್ನಡಿ ಎಂದರು.