ಸೆಪ್ಟೆಂಬರ್ 20 ರಿಂದ ಅಕ್ಟೋಬರ್ 7 ರವರೆಗೆ ಶಾಲಾಮಕ್ಕಳಿಗೆ ದಸರಾ ರಜೆ
ಬೆಂಗಳೂರು: ಶಾಲಾಮಕ್ಕಳಿಗೆ ಇದೀಗ ದಸರಾ ರಜೆ ಖುಷಿ, ಸೆಪ್ಟೆಂಬರ್ 20 ರಿಂದ ಅಕ್ಟೋಬರ್ 7 ರವರೆಗೆ ರಾಜ್ಯ ಎಲ್ಲಾ ಸರಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ಶಾಲಾ ಮಕ್ಕಳಿಗೆ ದಸರಾ ರಜೆ ಘೋಷಣೆ ಮಾಡಲಾಗಿದೆ. ಈ ಕುರಿತಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಇಲಾಖೆಯು 2025-26ರ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ರಜೆಗಳು ಮತ್ತು ಶಾಲಾ ಚಟುವಟಿಕೆಗಳ ಸಂಪೂರ್ಣ ಮಾರ್ಗದರ್ಶಿಯನ್ನು ಈಗಾಗಲೇ ಪ್ರಕಟಿಸಿದೆ. ಈ ಮಾರ್ಗದರ್ಶಿಯ ಪ್ರಕಾರ ದಸರಾ ರಜೆ ನೀಡಲಾಗಿದೆ. ಅ.8ರಿಂದ ಶಾಲೆಗಳ ಎರಡನೆ ಅವಧಿಯ ತರಗತಿಗಳು ಆರಂಭವಾಗಲಿದೆ. ಈ ಎರಡನೆ ಅವಧಿಯು 2026ರ ಎ.10ರ ವರೆಗೆ ಮುಂದುವರಿಯಲಿದೆ. ಪ್ರಸಕ್ತ ಶೈಕ್ಷಣಿಕ ವರ್ಷದ ಶಾಲಾ ವಿದ್ಯಾರ್ಥಿಗಳ ದಸರಾ ರಜೆ ನಾಳೆ ಸೆಪ್ಟೆಂಬರ್ 20ರಂದು ಆರಂಭ. ಮೈಸೂರು ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವವನ್ನು ಮಕ್ಕಳು ಸಹ ನೋಡಿ ಕಣ್ತುಂಬಿಕೊಳ್ಳಲಿ ಎಂದು ಶಿಕ್ಷಣ ಇಲಾಖೆ ನಾಳೆಯಿಂದ 18 ದಿನ ಸರ್ಕಾರಿ ಶಾಲೆಗಳಿಗೆ ಹಬ್ಬದ ರಜೆ ಘೋಷಿಸಿದೆ.
ಈ ಬಗ್ಗೆ ಶಿಕ್ಷಣ ಇಲಾಖೆ ಇಂದು ಆದೇಶ ಹೊರಡಿಸಿದ್ದು, ಸೆ. 20 ರಿಂದ ಅಕ್ಟೋಬರ್ 7ರವರೆಗೆ ಸರ್ಕಾರಿ ಶಾಲೆಗಳಿಗೆ ಒಟ್ಟು 18 ದಿನ ಹಬ್ಬದ ರಜೆ ಘೋಷಿಸಿದೆ. ಕಡ್ಡಾಯವಾಗಿ ಅಕ್ಟೋಬರ್ 2ರಂದು ನಡೆಯಲಿರುವ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮಗಳಿಗೆ ಹಾಜರಾಗುವಂತೆ ಸೂಚಿಸಲಾಗಿದೆ.